ಬಿಜೆಪಿ 125ರಿಂದ 130 ಸೀಟುಗಳನ್ನು ಗೆಲ್ಲಲಿದೆ: ಯಡಿಯೂರಪ್ಪ

Update: 2018-05-13 12:01 GMT

ಬೆಂಗಳೂರು, ಮೇ 12: ‘ನಮಗೆ ಯಾವುದೇ ಭಯವಿಲ್ಲ. ಯಾವುದೇ ಪಕ್ಷದ ಸಹಕಾರ ನಮಗೆ ಅಗತ್ಯವಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ದೊರೆಯಲಿದೆ. ನಾನು ಹೇಳಿದ ಮಾತು ಎಂದೂ ಸುಳ್ಳಾಗದು’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಭವಿಷ್ಯ ನುಡಿದಿದ್ದಾರೆ.

ರವಿವಾರ ಇಲ್ಲಿನ ಡಾಲರ್ಸ್‌ ಕಾಲನಿಯಲ್ಲಿನ ತಮ್ಮ ನಿವಾಸದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಶೇ.71ರಷ್ಟು ಮತದಾನ ಆಗಿದೆ. ಜನರು ಅತ್ಯಂತ ಉತ್ಸಾಹದಿಂದ ಮತ ಚಲಾವಣೆ ಮಾಡಿದ್ದು ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸರಕಾರ ಭ್ರಷ್ಟ, ರೈತ ವಿರೋಧಿಯಾಗಿದೆ. ಹೀಗಾಗಿ ಕಾಂಗ್ರೆಸ್ ಪಕ್ಷ 70ಕ್ಕೂ ಹೆಚ್ಚು ಸೀಟುಗಳನ್ನು ಗೆಲ್ಲುವುದಿಲ್ಲ. ಆದರೆ, ಬಿಜೆಪಿ 130ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸಲಿದೆ. ಜೆಡಿಎಸ್ 22ರಿಂದ 23 ಸ್ಥಾನಗಳನ್ನು ಗೆಲ್ಲಲಿದೆ ಎಂದರು.

ಬಿಜೆಪಿ ಪರ ಪ್ರಚಾರ ಮಾಡಿದ ಕಾರ್ಯಕರ್ತರಿಗೆ, ಶಾಂತಿಯುತ ಚುನಾವಣೆಗೆ ಸಹಕರಿಸಿದ ಆರಕ್ಷಕರು, ಚುನಾವಣಾ ಸಿಬ್ಬಂದಿ ಹಾಗೂ ಅಧಿಕಾರಿಗಳು ಸೇರಿದಂತೆ ರಾಜ್ಯದ ಸಮಸ್ತ ಮತದಾರರಿಗೆ ಧನ್ಯವಾದಗಳನ್ನು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಹದಿನೈದು ದಿನಗಳಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನಸಿಕವಾಗಿ ಕುಗ್ಗಿದ್ದಾರೆ. ಇವತ್ತು ಮತ್ತು ನಾಳೆ ಬೆಂಗಳೂರಿನಲ್ಲಿದ್ದು ಕಾರ್ಯಕರ್ತರನ್ನ ಭೇಟಿ ಮಾಡುತ್ತೇನೆ. ಮೇ 15ಕ್ಕೆ ಪ್ರಧಾನಿ ಮೋದಿ ಹಾಗೂ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಭೇಟಿಗೆ ಹೊಸದಿಲ್ಲಿಗೆ ತೆರಳಲಿದ್ದು, ಪ್ರಮಾಣ ವಚನ ದಿನಾಂಕದ ಬಗ್ಗೆ ಅವರ ಬಳಿ ಚರ್ಚೆ ಮಾಡುತ್ತೇನೆ ಎಂದರು.

ಬೇಕಾದರೆ ನಿಮಗೆ ಬರೆದುಕೊಡ್ತೀನಿ, ಬಿಜೆಪಿಗೆ 125ರಿಂದ 130 ಸೀಟು ಸಿಗಲಿದೆ. ಬೇಕಾದರೆ ದೇವರ ಮುಂದೆ ಇಟ್ಟು ಪೂಜೆ ಮಾಡಿ ಬರೆದುಕೊಡ್ತೀನಿ. ನಾನು ಹೇಳಿದ್ದ ಮಾತು ಯಾವತ್ತೂ ಸುಳ್ಳು ಆಗಿಲ್ಲ ಎಂದ ಅವರು, ನಾನೇ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News