ಸಾಧಿಸುವ ಛಲವಿರುವವರಿಗೆ ಬಡತನ, ಭಾಷೆ ಅಡ್ಡಿಯಾಗದು: ಐಎಎಸ್ ನಲ್ಲಿ ರ‍್ಯಾಂಕ್ ಪಡೆದ ಅಂಧ ಅಭ್ಯರ್ಥಿ ಕೆಂಪಹೊನ್ನಯ್ಯ

Update: 2018-05-13 12:05 GMT

ಬೆಂಗಳೂರು, ಮೇ 13: ಸಾಧನೆ ಮಾಡುವ ಛಲವಿರುವವರಿಗೆ ಬಡತನ, ಭಾಷೆ ಯಾವುದೇ ಅಡ್ಡಿ ಬರುವುದಿಲ್ಲ. ಕಷ್ಟಪಟ್ಟು ಓದುವ ಮತ್ತು ಸಾಧನೆಯ ಗುರಿ ಇರಬೇಕಷ್ಟೆ ಎಂದು ಐಎಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಅಂಧ ಅಭ್ಯರ್ಥಿ ಕೆಂಪಹೊನ್ನಯ್ಯ ತಿಳಿಸಿದ್ದಾರೆ.

ರವಿವಾರ ನಗರದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಪಣ್ಣೇದೊಡ್ಡಿ ಸಂಸ್ಕೃತಿ ಸಂಸ್ಥೆ ವತಿಯಿಂದ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಾಧನೆ ಮಾಡುವ ಛಲವಿದ್ದರೆ ಏನನ್ನಾದರೂ ಸಾಧಿಸಬಹುದು ಎಂದು ಹೇಳಿದರು.

ಯುಪಿಎಸ್‌ಸಿ ಪರೀಕ್ಷೆ ಹಾಗೂ ಸಂದರ್ಶನದಲ್ಲಿ ಸಂಪೂರ್ಣ ಕನ್ನಡ ಭಾಷೆ ಬಳಕೆಗೆ ಅವಕಾಶವಿದ್ದು, ನಾನು ಸಂಪೂರ್ಣ ಕನ್ನಡದಲ್ಲಿಯೇ ಪರೀಕ್ಷೆ ತೆಗೆದುಕೊಂಡು 340ನೆ ರ್ಯಾಂಕ್ ಪಡೆದು, ಆನಂತರ ಸಂದರ್ಶನವನ್ನು ಕನ್ನಡದಲ್ಲಿಯೆ ನೀಡಿ ಇಂದು ಪಶ್ಚಿಮ ಬಂಗಾಳ ಕೆಡೆಟ್‌ಗೆ ಐಎಎಸ್ ಅಧಿಕಾರಿಯಾಗಿ ಹೋಗುತ್ತಿದ್ದೇನೆ. ಹಾಗಾಗಿ ಭಾಷೆಯ ಭಯಬಿಟ್ಟು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಪಾಲ್ಗೊಳ್ಳುವಂತಾಗಬೇಕು ಎಂದರು.

ಶಿಕ್ಷಣದಿಂದ ಸಾಮಾಜಿಕ ಪ್ರಗತಿ ಸಾಧ್ಯ. ಹೀಗಾಗಿ, ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಅದರಲ್ಲಿಯೂ ವಿಶೇಷವಾಗಿ ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕಿದೆ. ನಗರ ಪ್ರದೇಶದವರಿಗೆ ಸಮಾನವಾಗಿ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವಂತೆ ತಯಾರು ಮಾಡಬೇಕು ಎಂದು ತಿಳಿಸಿದರು.

ಅಂಧತ್ವದಂತಹ ಸವಾಲನ್ನೇ ಮೆಟ್ಟಿನಿಂತ ಮೇಲೆ ಇತರೆ ಯಾವ ಸಮಸ್ಯೆಗಳೂ ನನ್ನ ಸಾಧನೆಗೆ ತೊಡಕಾಗಲಿಲ್ಲ. ಪತ್ನಿ ಅಚಿತ್ಯ ಪ್ರತಿ ನಿತ್ಯ ವಿವಿಧ ಪುಸ್ತಕಗಳನ್ನು ಓದಿ ಧ್ವನಿ ಮುದ್ರಿಕೆ ಮಾಡಿಡುತ್ತಿದ್ದಳು. ಅದನ್ನು ಆಲಿಸಿ ಮನನ ಮಾಡಿಕೊಳ್ಳುತ್ತಿದ್ದೆ. ಜೊತೆಗೆ ಅಂತರ್ಜಾಲ ಹಾಗೂ ಟಿ.ವಿ ನೋಡಿ ಒಂದಿಷ್ಟು ಅಧ್ಯಯನ ನಡೆಸಿದೆ. ಇನ್ನು ಯಾವುದೇ ಕೋಚಿಂಗ್ ಸೆಂಟರ್‌ಗೆ ಹೋಗದೇ ಮನೆಯಲ್ಲಿಯೇ ಪ್ರತಿನಿತ್ಯ 12 ತಾಸು ಅಧ್ಯಯನ ಮಾಡಿದ್ದೆನು. ಎಲ್ಲದಕ್ಕೂ ದೊಡ್ಡ ಗುರು ಆತ್ಮಸಾಕ್ಷಿಯೇ ಆಗಿದ್ದು, ಅದರೊಟ್ಟಿಗೆ ಎಲ್ಲರೂ ಮುನ್ನುಗ್ಗಬೇಕು ಎಂದು ತಿಳಿಸಿದರು.

ದೃಷ್ಟಿಗಿಂತ ಸಾಮಾಜಿಕ ದೃಷ್ಟಿಕೋನ ಮುಖ್ಯ ಎಂದು ಸಮಾಜದ ಸೇವೆಗೆ ಮುಂದಾಗಿ ಎರಡು ಬಾರಿ ಕೆಪಿಎಸ್‌ಸಿ ಬರೆದೆನು. ಆದರೆ ಇಲ್ಲಿನ ಅವ್ಯವಸ್ಥೆಯಿಂದ ಬೇಸರವಾಗಿ ವ್ಯಾಪ್ತಿ ವಿಸ್ತರಿಸಿಕೊಂಡು ಯುಪಿಎಸ್‌ಸಿ ಆಯ್ಕೆ ಮಾಡಿಕೊಂಡು ಯಶಸ್ಸು ಪಡೆದಿದ್ದೆನೆ. ಈಗಾಗಲೆ ಮೈಸೂರಿಯಲ್ಲಿ ತರಬೇತಿ ಮುಗಿದಿದ್ದು, ಮುಂದಿನ ದಿನಗಳಲ್ಲಿ ಅನನ್ಯತೆ ಹಾಗೂ ಅಸ್ಮಿತೆ ಅಂಶಗಳೊಂದಿಗೆ ಸೇವೆ ಸಲ್ಲಿಸುತ್ತೇನೆ ಎಂದು ನುಡಿದರು.

ಸಾಧನೆಯ ಹಾದಿಯಲ್ಲಿ ಶ್ರಮ ವಹಿಸುವವರಿಗೆ ಯಶಸ್ಸು ಸಾಧ್ಯ. ಬಡತನ ಜೀವನದಲ್ಲಿ ಬರುವ ಸಂಕಷ್ಟಗಳನ್ನು ಮೆಟ್ಟಿ ನಿಂತು ಗೆಲುವು ಸಾಧಿಸುವುದು ನಿಜವಾದ ಸಾಧನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಅಧ್ಯಕ್ಷ ತಿಮ್ಮಪ್ಪ ಅಭಿಪ್ರಾಯಿಸಿದರು.

ಇದೇ ಸಂದರ್ಭದಲ್ಲಿ ಐಎಎಸ್ ಪರೀಕ್ಷೆಯಲ್ಲಿ ಉತ್ತಮ ರ್ಯಾಂಕ್ ಪಡೆದ ಕೆಂಪಹೊನ್ನಯ್ಯ ಹಾಗೂ ಐಪಿಎಸ್ ಪರೀಕ್ಷೆ ಉತ್ತೀರ್ಣರಾದ ಮಂಡ್ಯದ ಪೃಥ್ವಿ ಶಂಕರ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಯನಗರ ಗೃಹ ನಿರ್ಮಾಣ ಸಹಕಾರ ಸಂಘದ ಅಧ್ಯಕ್ಷ ವಾಸುದೇವ್ ಬಿ.ಆರ್, ಪಣ್ಣೇದೊಡ್ಡಿ ಸಂಘದ ಅಧ್ಯಕ್ಷ ಸಿಂಗ್ರೀಗೌಡ ಪಿ.ಕೆ, ಕಾರ್ಯದರ್ಶಿ ಪಣ್ಣೇದೊಡ್ಡಿ ಆನಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News