ಮುಖ್ಯಮಂತ್ರಿ ಆಯ್ಕೆ ಹೈಕಮಾಂಡ್ ನಿರ್ಧಾರ: ಡಾ.ಜಿ.ಪರಮೇಶ್ವರ್

Update: 2018-05-13 12:08 GMT

ಬೆಂಗಳೂರು, ಮೇ 13: ವಿಧಾನಸಭಾ ಚುನಾವಣೆಯ ಫಲಿತಾಂಶ ಕಾಂಗ್ರೆಸ್ ಪರವಾಗಿದ್ದು, ಕಾಂಗ್ರೆಸ್ ಸ್ಪಷ್ಟ ಬಹುಮತಗಳಿಸಿ ಮತ್ತೊಮ್ಮೆ ಅಧಿಕಾರ ಹಿಡಿಯುವುದರಲ್ಲಿ ಯಾವುದೆ ಅನುಮಾನವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿರುವ ಚುನಾವಣೋತ್ತರ ಸಮೀಕ್ಷೆಗಳನ್ನು ಕಾಂಗ್ರೆಸ್ ನೆಚ್ಚಿಕೊಂಡಿಲ್ಲ. ಬದಲಿಗೆ, ಕಾರ್ಯಕರ್ತರು, ಅಭ್ಯರ್ಥಿಗಳು ಹಾಗೂ ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯ ಪ್ರಕಾರ ಕನಿಷ್ಟ 113ಕ್ಕೂ ಹೆಚ್ಚು ಸ್ಥಾನಗಳನ್ನು ಗಳಿಸುವ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ತಿಳಿಸಿದರು.

ರಾಹುಲ್‌ಗೆ ಧನ್ಯವಾದ: ಕಾಂಗ್ರೆಸ್‌ನ ಚುನಾವಣಾ ಪ್ರಚಾರ ಕಾರ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ನೀಡಿದ ಸಹಕಾರ ಹೆಚ್ಚು ಮಹತ್ವದ್ದು. 25ಕ್ಕೂ ಹೆಚ್ಚು ದಿನ ರಾಜ್ಯದಲ್ಲಿ ಪ್ರಚಾರ ನಡೆಸಿದ ಅವರು, 18 ಬೃಹತ್ ರ್ಯಾಲಿ, 43 ರೋಡ್ ಶೋ, 65 ಕಾರ್ನರ್ ಮೀಟಿಂಗ್ ನಡೆಸುವ ಮೂಲಕ 18ಸಾವಿರ ಕಿಮೀ ಸಂಚರಿಸಿದ್ದಾರೆ. ಹಾಗೆಯೆ ಪಕ್ಷದ ಕಾರ್ಯಕರ್ತರು, ಪದಾಧಿಕಾರಿಗಳು ಚುನಾವಣಾ ಪ್ರಚಾರದಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಾನು ಮುಖ್ಯಮಂತ್ರಿ ಆಗಲಿದ್ದೇನೆಂದು ಕನಸು ಕಾಣುತ್ತಿದ್ದಾರೆ. ಅವರ ಆಸೆಗೆ ನಾನು ತಣ್ಣೀರೆರಚಲಾರೆ. ಆದರೆ, ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದ್ದು, ಬಿಎಸ್‌ವೈ ಆಸೆ ನನಸಾಗುವುದಿಲ್ಲವೆಂದು ಪ್ರತಿಕ್ರಿಯೆ ನೀಡಿದರು.

ಮುಖ್ಯಮಂತ್ರಿ ಆಯ್ಕೆ ಹೈ ಕಮಾಂಡ್ ನಿರ್ಧಾರ
‘ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತ ನಾಯಕರೊಬ್ಬರು ಮುಖ್ಯಮಂತ್ರಿ ಸ್ಥಾನಕ್ಕೇರಿದರೆ ನನ್ನದೇನು ಅಭ್ಯಂತರವಿಲ್ಲ ಎಂದ ಸಿಎಂ ಸಿದ್ದರಾಮಯ್ಯ ಹೇಳಿಕೆಯನ್ನು ನಾನು ಸ್ವಾಗತಿಸುತ್ತೇನೆ. ಆದರೆ, ಮುಖ್ಯಮಂತ್ರಿ ಸ್ಥಾನದ ಆಯ್ಕೆ ಕಾಂಗ್ರೆಸ್ ಹೈಕಮಾಂಡ್ ಹಾಗೂ ನೂತನ ಶಾಸಕಾಂಗ ಪಕ್ಷಕ್ಕೆ ಬಿಟ್ಟ ವಿಚಾರ’
-ಡಾ.ಜಿ.ಪರಮೇಶ್ವರ್ ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News