ಮೋದಿ ಭಾಷಣಕ್ಕೆ ಬಿಜೆಪಿ ನಾಯಕರಿಂದಲೇ ವಿರೋಧ: ಡಾ.ಜಿ.ಪರಮೇಶ್ವರ್
ಬೆಂಗಳೂರು, ಮೇ 13: ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆ ಪ್ರಧಾನಿ ಮೋದಿ ಮಾಡಿರುವ ಭಾಷಣಕ್ಕೆ ಬಿಜೆಪಿ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ರವಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿ ಭಾಷಣಕ್ಕೆ ಬಿಜೆಪಿ ನಾಯಕ ಶತ್ರುಘ್ನ ಸಿನ್ಹಾ ವೀರೋಧ ವ್ಯಕ್ತಪಡಿಸಿದ್ದಾರೆ. ಹಾಗೆಯೆ ಶಿವಸೇನೆ ಪಕ್ಷದ ಸಾಮ್ನಾ ಪತ್ರಿಕೆಯಲ್ಲಿ ಮೋದಿ ಭಾಷಣವನ್ನು ಖಂಡಿಸಲಾಗಿದೆ. ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರಿಂದ ಕಲಿಯಬೇಕಾದದ್ದು ಸಾಕಷ್ಟು ಇದೆ ಎಂಬ ಹೇಳಿಕೆ ನೀಡಿದ್ದಾರೆಂದು ತಿಳಿಸಿದರು.
ಯಾವುದೆ ಪಕ್ಷದ ಜಿಲ್ಲಾ ನಾಯಕರು ಮೊತ್ತೊಂದು ಪಕ್ಷದ ನಾಯಕರನ್ನು ವ್ಯಕ್ತಿಗತವಾಗಿ ಟೀಕೆ ಸಹಜ. ಆದರೆ, ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಪ್ರಧಾನಿ ಮೋದಿ ತನ್ನ ಸಂಪೂರ್ಣ ಭಾಷಣವನ್ನು ಕಾಂಗ್ರೆಸ್ ನಾಯಕರನ್ನು ವ್ಯಕ್ತಿಗತವಾಗಿ ಟೀಕೆ ಮಾಡುವ ಮೂಲಕ ಪ್ರಧಾನಿ ಹುದ್ದೆಗೆ ಅವಮಾನ ಮಾಡಿದ್ದಾರೆಂದು ಅವರ ಬೇಸರ ವ್ಯಕ್ತಪಡಿಸಿದರು.