×
Ad

ಮೇಲ್ಮನೆಯ ಆರು ಸ್ಥಾನಗಳಿಗೆ ಜೂನ್ 8 ರಂದು ಚುನಾವಣೆ

Update: 2018-05-13 18:29 IST

ಬೆಂಗಳೂರು, ಮೇ 13: ರಾಜ್ಯ ವಿಧಾನಸಭೆ ಚುನಾವಣೆ ಮುಗಿದ ಬೆನ್ನಲ್ಲೆ ವಿಧಾನ ಪರಿಷತ್ತಿನ ಆರು ಸ್ಥಾನಗಳಿಗೆ ಜೂನ್ 8ರಂದು ದ್ವೈವಾರ್ಷಿಕ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗ ವೇಳಾಪಟ್ಟಿ ಪ್ರಕಟಿಸಿದೆ.

ಮೇಲ್ಮನೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಸೇರಿದಂತೆ ನಾಲ್ವರು ಬಿಜೆಪಿ ಹಾಗೂ ಇಬ್ಬರು ಜೆಡಿಎಸ್ ಸದಸ್ಯರು ಜೂನ್ 21ಕ್ಕೆ ನಿವೃತ್ತರಾಗಲಿದ್ದು, ಆ ಸ್ಥಾನಗಳಿಗೆ ಜೂನ್ 8ಕ್ಕೆ ಚುನಾವಣೆ ನಡೆಯಲಿದೆ. ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ ತಲಾ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ನೈರುತ್ಯ ಪದವೀಧರರ ಕ್ಷೇತ್ರ ಪ್ರತಿನಿಧಿಸುತ್ತಿರುವ ಸಭಾಪತಿ ಶಂಕರಮೂರ್ತಿ, ಬೆಂಗಳೂರು ಪದವೀಧರರ ಕ್ಷೇತ್ರ-ರಾಮಚಂದ್ರೇಗೌಡ, ಈಶಾನ್ಯ ಪದವೀಧರರ ಕ್ಷೇತ್ರ- ಅಮರನಾಥ ಪಾಟೀಲ್, ಆಗ್ನೇಯ ಶಿಕ್ಷಕರ ಕ್ಷೇತ್ರ-ರಮೇಶ್‌ಬಾಬು, ದಕ್ಷಿಣ ಶಿಕ್ಷಕರ ಕ್ಷೇತ- ಉಪಸಭಾಪತಿ ಮರಿತಿಬ್ಬೇಗೌಡ ಹಾಗೂ ನೈರುತ್ಯ ಶಿಕ್ಷಕರ ಕ್ಷೇತ್ರ- ಗಣೇಶ್ ಕಾರ್ಣಿಕ್ ನಿವೃತ್ತಿ ಹಿನ್ನೆಲೆಯಲ್ಲಿ ಮೇಲ್ಕಂಡ 6 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಮೇ 15ಕ್ಕೆ ಅಧಿಸೂಚನೆ ಹೊರಬೀಳಲಿದ್ದು, ಮೇಲ್ಮನೆ ಚುನಾವಣೆಗೆ ಅಂದಿನಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಮೇ 22ಕ್ಕೆ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದ್ದು, ಮೇ 23ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಮೇ 25 ಕೊನೆಯ ದಿನವಾಗಿದೆ.
ಜೂನ್ 8ರ ಬೆಳಗ್ಗೆ 8ರಿಂದ ಸಂಜೆ 4ಗಂಟೆಯ ವರೆಗೆ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದ್ದು, ಜೂನ್ 12ರಂದು ಮೇಲ್ಮನೆ ಆರು ಕ್ಷೇತ್ರಗಳ ಮತ ಎಣಿಕೆ ಕಾರ್ಯ ನಡೆಯಲಿದ್ದು, ಅಂದೇ ಫಲಿತಾಂಶ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News