ಮಾಧ್ಯಮಗಳ ಸಮೀಕ್ಷೆಗಳಿಗೆ ತಾಳ-ಮೇಳ ಇಲ್ಲ: ಸಚಿವ ಎಂ.ಬಿ.ಪಾಟೀಲ್
ವಿಜಯಪುರ, ಮೇ 13: ವಿಧಾನಸಭಾ ಚುನಾವಣೆಯ ಬಗ್ಗೆ ಮಾಧ್ಯಮಗಳ ಸಮೀಕ್ಷೆಗೆ ತಾಳ-ಮೇಳ ಯಾವುದು ಇಲ್ಲ. ಒಂದೊಂದು ಸಮೀಕ್ಷೆ ಒಂದೊಂದು ರೀತಿ ಹೇಳುತ್ತಿದೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರುವ ವಿಶ್ವಾಸವಿದೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್ ಭರವಸೆ ವ್ಯಕ್ತಪಡಿಸಿದ್ದಾರೆ.
ರವಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಮತ್ತೆ ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದು, ಕಾಂಗ್ರೆಸ್ ಬಹುಮತ ಪಡೆಯಲಿದೆ. ಯಾವ ಪಕ್ಷದೊಂದಿಗೂ ಕೈಜೋಡಿಸುವ ಪ್ರಶ್ನೆಯೆ ಇಲ್ಲ ಎಂದರು.
ಬ್ರಾಂಡ್ ಸಿದ್ದರಾಮಯ್ಯ, ಬ್ರಾಂಡ್ ಮೋದಿಗೂ ವ್ಯತ್ಯಾಸವಿದೆ. ಮೋದಿ ಬರಿ ಸುಳ್ಳು ಹೇಳಿದ್ದು, ಭಾಷಣದ ಮೂಲಕದ ಜನರನ್ನ ಮರುಳು ಮಾಡಿದ್ದಾರೆ. ಮೋದಿ ಓರ್ವ ಪ್ಲಾಪ್ ಪ್ರಧಾನಿ. ಮೋದಿ ಬಣ್ಣ ಬಣ್ಣದ ಮಾತು ಹೇಳಿದ್ದಾರೆ. ಕಾಮ್ ಕೀ ಬಾತ್ ಇಲ್ಲ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಯಕ-ದಾಸೋಹ ಮಾಡಿದ್ದಾರೆ. ರಾಜ್ಯಲ್ಲಿ ಮೋದಿಯನ್ನು ಜನರು ತಿರಸ್ಕರಿಸಲಿದ್ದಾರೆಂದ ಅವರು, ಈ ಚುನಾವಣೆಯಲ್ಲಿ ತಮ್ಮ ವಿರುದ್ಧ ನಾನಾ ರೀತಿಯಲ್ಲಿ ಅಪಪ್ರಚಾರ ಮಾಡಲಾಯಿತು. ಇಂಥ ಅಪಪ್ರಚಾರ ಮಾಡಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದೇನೆ ಎಂದು ಎಚ್ಚರಿಸಿದರು.
ವಿಜಯಪುರ ಜಿಲ್ಲೆ ಬಬಲೇಶ್ವರ ಕ್ಷೇತ್ರದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಪಂಚ ಪೀಠಾಧೀಶರು ಸೇರಿದಂತೆ ನಾನಾ ಸ್ವಾಮೀಜಿಗಳು ತನ್ನ ವಿರುದ್ಧ ಪ್ರಚಾರ ಕೈಗೊಂಡಿದ್ದಾರೆ. ಆದರೂ ತಾನು ಭಾರೀ ಅಂತರದಿಂದ ಗೆಲ್ಲುವುದು ನಿಶ್ಚಿತ ಎಂದು ಪಾಟೀಲ್ ನುಡಿದರು.