ಬೆಂಗಳೂರು: ‘ಸಂಸಾರದಲ್ಲಿ ಸಂತತನ ಒಂದು ಅನುಭವಿ ದರ್ಶನ’ ಉಪನ್ಯಾಸ ಕಾರ್ಯಕ್ರಮ

Update: 2018-05-13 13:06 GMT

ಬೆಂಗಳೂರು, ಮೇ 13: ಸಂಸಾರ ನೌಕೆ ಸರಿಯಾಗಿ ಸಾಗಬೇಕಾದರೆ, ಗಂಡ, ಹೆಂಡತಿಯರಿಬ್ಬರ ಪಾಲು ಸಮನಾಗಿರಬೇಕು ಎಂದು ಕುಮಟಾ ಕಮಲ ಬಾಳಿಗ ಶಿಕ್ಷಣ ಮಹಾವಿದ್ಯಾಲಯದ ಪ್ರಾಧ್ಯಾಪಕ ಶ್ರೀಧರ ಬಳಗಾರ ತಿಳಿಸಿದ್ದಾರೆ.

ರವಿವಾರ ನಗರದ ಕೆಪಿಟಿಸಿಎಲ್ ಲೆಕ್ಕಾಧಿಕಾರಿಗಳ ಸಂಘದ ಬೆಳ್ಳಿ ಭವನದಲ್ಲಿ ಆಯೋಜಿಸಿದ್ದ ‘ ಸಂಸಾರದಲ್ಲಿ ಸಂತತನ ಒಂದು ಅನುಭವಿ ದರ್ಶನ’ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವು ಗಂಡಸರು ಸಂಸಾರದಲ್ಲಿ ಕೇವಲ ಹೆಣ್ಣು ಮಾತ್ರ ಪರಿಸ್ಥಿತಿಗೆ ಹೊಂದಿಕೊಂಡು ಹೋಗಬೇಕು ಎಂದುಕೊಳ್ಳುತ್ತಾರೆ. ಆದರೆ, ಸುಖ ಸಂಸಾರ ನಡೆಸಬೇಕೆಂದರೆ ಗಂಡ, ಹೆಂಡತಿಯರಿಬ್ಬರೂ ಸಮಾನ ಮನಸ್ಥಿತಿಯಿಂದ ಸಂಸಾರ ನೌಕೆ ಸಾಗಿಸಬೇಕು ಎಂದರು.

ಮನೆಗಳಲ್ಲಿ ಅತ್ತೆ-ಸೊಸೆ ಜಗಳ ಸಾಮಾನ್ಯ ಇಂತಹ ಪರಿಸ್ಥಿತಿ ಎದುರಾದಾಗ ಗಂಡನಾದವನೂ ಬೇಜವಾಬ್ದಾರಿಯಿಂದ ವರ್ತಿಸಿದರೆ ಮನೆಯಲ್ಲಿ ಮನಸ್ಥಾಪ ಉದ್ಭವಿಸಲು ಕಾರಣ ಆಗುತ್ತದೆ. ಹೀಗಾಗಿ, ಗಂಡನಾದವನು ಕೂಡಾ ಸಂಸಾರದಲ್ಲಿನ ಆಗು ಹೋಗುಗಳನ್ನು ಸರಿದೂಗಿಸಿಕೊಂಡು ಹೋಗಬೇಕಾಗುತ್ತದೆ ಎಂದು ಹೇಳಿದರು.

ಗಂಡಸರ ಹವ್ಯಾಸಗಳು ಕೆಲವೊಮ್ಮೆ ಹೆಚ್ಚಿನ ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ತನಗದು ಇಷ್ಟ ಎಂದು ಮುಂದುವರಿಸಿಕೊಂಡು ಹೋಗಬಾರದು. ಗಂಡ ಹೆಂಡಿರ ಜಗಳ ಹೆಚ್ಚು ಸಮಯ ಇರಬಾರದೆಂದರೆ ಹೊಂದಾಣಿಕೆ ಅತ್ಯಗತ್ಯ. ಹೀಗಾಗಿ, ಪರಸ್ಪರ ಅರ್ಥ ಮಾಡಿಕೊಳ್ಳುವ ಸ್ವಭಾವ ಬೆಳೆಸಿಕೊಳ್ಳಬೇಕು. ತನ್ನ ಸಂಗಾತಿಗೆ ಹಿಡಿಸದ ಕೆಲಸಗಳನ್ನು ಸಾಧ್ಯವಾದಷ್ಟು ಮಟ್ಟಿಗೆ ಮಾಡಬಾರದು ಎಂದು ಕಿವಿಮಾತು ಹೇಳಿದರು.

ದಂಪತಿಯಲ್ಲಿ ಯಾರಾದರೊಬ್ಬರಿಗೆ ದೈವ ಭಕ್ತಿ ಇಲ್ಲ ಇಂದು ನಿಮ್ಮ ಹೆಂಡತಿಯಲ್ಲೂ ದೇವರನ್ನು ನಂಬಬೇಡ ಎಂದು ಒತ್ತಾಯ ಹೇರುವುದು ಸರಿಯಲ್ಲ ನಿಮ್ಮ ಬಾಳ ಸಂಗಾತಿಯ ಹವ್ಯಾಸಗಳನ್ನು ಗೌರವಿಸಿ ಎಂದ ಅವರು, ಸಂಸಾರದಲ್ಲಿ ಕೆಲವು ಕಹಿ ಘಟನೆಗಳು ನಡೆಯುವುದು ಸಹಜ. ಇಂತಹ ಘಟನೆಗಳನ್ನು ಮರೆತು ಪರಸ್ಪರ ಗೌರವದಿಂದ ನಡೆದುಕೊಳ್ಳೇಕೆಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News