ಅಡೆ-ತಡೆಯಿಲ್ಲದೆ ನಡೆದ ಕಾಮೆಡ್-ಕೆ ಪರೀಕ್ಷೆ: ಮೇ 25ಕ್ಕೆ ಸರಿ ಉತ್ತರ ಪ್ರಕಟ

Update: 2018-05-13 15:52 GMT

ಬೆಂಗಳೂರು, ಮೇ 13: ದೇಶಾದ್ಯಂತ ಖಾಸಗಿ ಕಾಲೇಜಿನಲ್ಲಿರುವ ಎಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ಕಾಮೆಡ್-ಕೆ ಮತ್ತು ಕಾನೂನು ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆ (ಸಿಎಲ್‌ಎಟಿ) ರವಿವಾರ ಯಾವುದೇ ಅಡೆ-ತಡೆಗಳಿಲ್ಲದೆ ಮುಕ್ತಾಯವಾಗಿದೆ.

ಕರ್ನಾಟಕ ರಾಜ್ಯದ 24 ನಗರಗಳು ಸೇರಿದಂತೆ ದೇಶದ 137 ನಗರಗಳಲ್ಲಿ ಪರೀಕ್ಷೆ ನಡೆಯಿತು. 76,414 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಆ ಪೈಕಿ 62,306 (ಶೇ. 81.52) ಹಾಗೂ ರಾಜ್ಯದಲ್ಲಿ 108 ಕೇಂದ್ರಗಳಲ್ಲಿ 21,889 (ಶೇ. 86.16) ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪರೀಕ್ಷೆ ಬರೆದಿದ್ದಾರೆ.

ರಾಜ್ಯದ 198 ಎಂಜಿನಿಯರಿಂಗ್ ಕಾಲೇಜುಗಳಲ್ಲಿ 20ಸಾವಿರಕ್ಕೂ ಹೆಚ್ಚಿನ ಸೀಟುಗಳು ದೊರೆಯಲಿವೆ. ಬೆಂಗಳೂರಿನ 48 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯಿತು. ಅದರಲ್ಲಿ ಐದು ಪರೀಕ್ಷಾ ಕೇಂದ್ರಗಳಲ್ಲಿ ತಾಂತ್ರಿಕ ಕಾರಣದಿಂದಾಗಿ ವಿದ್ಯಾರ್ಥಿಗಳು ಲಾಗಿನ್ ಮಾಡಲು ತಡವಾದ ಹಿನ್ನೆಲೆಯಲ್ಲಿ ಪರೀಕ್ಷಾ ಸಮಯವನ್ನು ವಿಸ್ತರಣೆ ಮಾಡಲಾಗಿತ್ತು.

ಪಶ್ಚಿಮ ಬಂಗಾಳದ ಒಂದು ಪರೀಕ್ಷಾ ಕೇಂದ್ರದಲ್ಲಿ ನಕಲು ಮಾಡುತ್ತಿದ್ದ ಒಬ್ಬ ವಿದ್ಯಾರ್ಥಿಯನ್ನು ಡಿಬಾರ್ ಮಾಡಲಾಗಿದೆ. ಇಂದು ನಡೆದ ಕಾಮೆಡ್-ಕೆ ಪರೀಕ್ಷೆಯ ತಾತ್ಕಾಲಿಕ ಸರಿ ಉತ್ತರಗಳನ್ನು ಮೇ 17ರಂದು ಇಲಾಖೆ ವೆಬ್‌ಸೈಟ್  https://www.comedk.org/ ನಲ್ಲಿ ಪ್ರಕಟಿಸಲಿದ್ದು, ಅಂತಿಮ ಸರಿ ಉತ್ತರಗಳನ್ನು ಮೇ 25ರಂದು ಬಿಡುಗಡೆ ಮಾಡಲಾಗುತ್ತದೆ ಹಾಗೂ ಮೇ 28 ರಂದು ಸ್ಕೋರ್ ಕಾರ್ಡ್‌ಗಳು ದೊರೆಯಲಿದ್ದು, ವಿದ್ಯಾರ್ಥಿಗಳು ಡೌನ್‌ಲೋಡ್ ಮಾಡಿ ಕೊಳ್ಳಬಹುದು ಎಂದು ಕಾಮೆಡ್-ಕೆ ಕಾರ್ಯಕಾರಿ ಕಾರ್ಯದರ್ಶಿ ಡಾ.ಎಸ್. ಕುಮಾರ್ ತಿಳಿಸಿದ್ದಾರೆ.

ಕಾಮೆಡ್-ಕೆ ನಲ್ಲಿ ರಸಾಯನಶಾಸ ಹಾಗೂ ಭೌತಶಾಸ್ತ್ರ ಎರಡೂ ಕಷ್ಟವಾಗರಲಿಲ್ಲ. ರಸಾಯನಶಾಸ್ತ್ರ ಒಂದು ಪ್ರಶ್ನೆ ಮುದ್ರಣ ದೋಷದಿಂದ ಕೂಡಿತ್ತು ಎನಿಸುತ್ತಿದೆ. ಗಣಿತ ಕ್ಲಿಷ್ಟವಾಗಿತ್ತು ಎಂದು ಬೇಸ್ ವಿದ್ಯಾರ್ಥಿ ಜಿ.ಆರ್. ಶಾರದ ಹೇಳಿದರು.

ಸಿಎಲ್‌ಎಟಿ: ದೇಶದಲ್ಲಿರುವ 17 ಕಾನೂನು ವಿಶ್ವವಿದ್ಯಾಲಯಗಳಿನ ಸೀಟುಗಳ ಪ್ರವೇಶಕ್ಕೆ ನಡೆಸುವ ಈ ಸಿಎಲ್‌ಎಟಿ 2018ನೆ ಸಾಲಿನ ಪರೀಕ್ಷೆಗೆ 63 ಪರೀಕ್ಷಾ ಕೇಂದ್ರದಲ್ಲಿ 59 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News