ಮೇ 15ರಂದು ಮತ ಎಣಿಕೆ: ಸ್ಟ್ರಾಂಗ್ ರೂಂಗಳಿಗೆ ಪೊಲೀಸ್ ಸರ್ಪಗಾವಲು

Update: 2018-05-13 15:57 GMT

ಬೆಂಗಳೂರು, ಮೇ 13: ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದೆಲ್ಲೆಡೆ ಜಿಲ್ಲಾ ಕೇಂದ್ರಗಳಲ್ಲಿ ಮೇ 15ರಂದು ನಡೆಯುವ ಮತ ಎಣಿಕೆಗೆ ಬಾರೀ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

ಮತಯಂತ್ರಗಳನ್ನು ಶೇಖರಿಸಿರುವ ಕೇಂದ್ರಗಳಿಗೆ ಅರೆಸೇನಾ ಪಡೆ, ಕೇಂದ್ರ ಮೀಸಲು ಪಡೆಯ ಶಸ್ತ್ರ ಸಜ್ಜಿತ ಸಿಬ್ಬಂದಿಯನ್ನು ನಿಯೋಜನೆ ಮಾಡಿದ್ದು, ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಮತಯಂತ್ರಗಳಿರುವ ಸ್ಟ್ರಾಂಗ್ ರೂಂಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಿ ಕೇಂದ್ರ ಭದ್ರತಾ ಪಡೆಗಳ ಜೊತೆಗೆ ರಾಜ್ಯದ ಪೊಲೀಸರನ್ನು ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ.

ಮತಯಂತ್ರಗಳಿರುವ ಕೇಂದ್ರಗಳಿಗೆ ಸಿಸಿ ಕ್ಯಾಮರಾ ಹಾಕಲಾಗಿದ್ದು, ಕ್ಷಣಕ್ಷಣದ ಭದ್ರತಾ ಮಾಹಿತಿಯನ್ನು ಹಿರಿಯ ಅಧಿಕಾರಿಗಳು ಪಡೆದುಕೊಳ್ಳಿದ್ದಾರೆ. ಮತಯಂತ್ರಗಳಿರುವ ಸ್ಟ್ರಾಂಗ್ ರೂಂಗಳ ಬಳಿ ಶಸ್ತ್ರ ಸಜ್ಜಿತ ಸಿಬ್ಬಂದಿ ದಿನದ 24 ಗಂಟೆಗಳ ಕರ್ತವ್ಯನಿರತರಾಗಿದ್ದು, ಯಾರೊಬ್ಬರೂ ಕೇಂದ್ರದ ಸುತ್ತ ಸುಳಿಯದಂತೆ ನಿಗಾ ವಹಿಸಲಾಗಿದೆ.

ರಾಜಧಾನಿ ಬೆಂಗಳೂರು ಸೇರಿದಂತೆ ಮಹಾ ನಗರಗಳಲ್ಲಿ ಪೊಲೀಸ್ ಆಯುಕ್ತರು, ವಲಯವಾರು ಐಜಿಪಿಗಳು, ಜಿಲ್ಲಾ ಕೇಂದ್ರಗಳಲ್ಲಿ ಎಸ್ಪಿಗಳು ಭದ್ರತೆಯ ನಿಗಾ ವಹಿಸಿದ್ದಾರೆ. ಚುನಾವಣೆಯ ಭದ್ರತೆಗಾಗಿ ಕೇಂದ್ರದಿಂದ ಬಂದಿರುವ ಆರೆ ಸೇನಾಪಡೆಯ 40 ಕಂಪೆನಿಗಳು ಸೇರಿ ಕೇಂದ್ರ ಮೀಸಲು ಪಡೆಯ 585 ಕಂಪೆನಿಗಳು ಮತಯಂತ್ರಗಳಿರುವ ಕೇಂದ್ರಗಳನ್ನು ಸುತ್ತುವರೆದಿದ್ದಾರೆ

ಜೊತೆಗೆ ರಾಜ್ಯ ಮೀಸಲು ಪಟೆ, ಸಿಎಆರ್‌ಡಿಎಆರ್‌ನ 754 ತುಕಡಿಗಳು 278 ಮಂದಿ ಡಿವೈಎಸ್‌ಪಿಗಳು, 947 ಮಂದಿ ಪೊಲೀಸ್ ಎಸ್ಸೈಗಳು, 5,322 ಮಂದಿ ಎಎಸ್ಸೈಗಳು, 45,685 ಮುಖ್ಯಪೇದೆ-ಪೇದೆಗಳು, 26,672 ಗೃಹರಕ್ಷಕ ಸಿಬ್ಬಂದಿಗಳು ಭದ್ರತೆಯಲ್ಲಿ ಚುನಾವಣೆಯ ಎಣಿಕೆ ಮುಗಿಯುವವರೆಗೆ ಭದ್ರತೆಯಲ್ಲಿ ತೊಡಗಲಿದ್ದಾರೆಂದು ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಕಮಲ್‌ಫಂತ್ ಮಾಹಿತಿ ನೀಡಿದರು.

ಜಯನಗರ ‘ಟಿ’ ಬ್ಲಾಕ್‌ನ ಎಸ್‌ಎಸ್‌ಎಂಆರ್‌ವಿ ಕಾಲೇಜಿನಲ್ಲಿ ಬಸವನಗುಡಿ, ಬೊಮ್ಮನಹಳ್ಳಿ, ಬಿಟಿಎಂ ಲೇಔಟ್, ಪದ್ಮನಾಭನಗರ, ವಿಜಯನಗರ, ಗೋವಿಂದ ರಾಜನಗರ ಕ್ಷೇತ್ರಗಳ ಮತಯಂತ್ರಗಳನ್ನು ಇರಿಸಲಾಗಿದೆ.

ಬಸವನಗುಡಿಯ ಬಿಎಂಎಸ್ ಮಹಿಳಾ ಕಾಲೇಜಿನಲ್ಲಿ ಶಿವಾಜಿನಗರ, ಶಾಂತಿ ನಗರ, ಗಾಂಧಿನಗರ, ರಾಜಾಜಿನಗರ, ಚಾಮರಾಜಪೇಟೆ, ಚಿಕ್ಕಪೇಟೆ ಕ್ಷೇತ್ರಗಳ ಮತಯಂತ್ರಗಳನ್ನು ಶೇಖರಿಸಿಡಲಾಗಿದೆ. ವಸಂತ ನಗರದ ಮೌಂಟ್‌ಕಾರ್ಮಲ್ ಕಾಲೇಜಿನಲ್ಲಿ ಮಹಾಲಕ್ಷ್ಮೀಲೇಔಟ್, ಸರ್ವಜ್ಞ ನಗರ, ಹೆಬ್ಬಾಳ, ಕೆ.ಆರ್. ಪುರಂ ಹಾಗೂ ಸಿ.ವಿ. ರಾಮನ್‌ನಗರ ಕ್ಷೇತ್ರಗಳ ಮತಯಂತ್ರಗಳನ್ನು ಇರಿಸಲಾಗಿದೆ.

ಬಿಗಿ ಭದ್ರತೆ: ಸ್ಟ್ರಾಂಗ್ ರೂಂಗಳಿಗೆ ಅಗತ್ಯ ಭದ್ರತೆ ಕಲ್ಪಿಸಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿವೆ. ಮತ ಎಣಿಕೆ ಮುಗಿಯುವವರೆಗೂ ನಗರದ ಎಲ್ಲ ಪೊಲೀಸರೂ ಚುನಾವಣಾ ಭದ್ರತೆಯಲ್ಲಿ ಇರಲಿದ್ದಾರೆ. ಯಾವುದೇ ಅಹಿತಕರ ಘಟನೆಯೂ ನಡೆಯದಂತೆ ಮತದಾನ ಪ್ರಕ್ರಿಯೆ ನಡೆಸಲಾಗಿದ್ದು, ಎಲ್ಲ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿಗಳಿಗೂ ಧನ್ಯವಾದಗಳು ಎಂದು ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News