ಪುರುಷರಲ್ಲಿ ಅಸ್ಥಿರಂಧ್ರತೆಯ ಅಪಾಯ ಹೆಚ್ಚಲು ಕಾರಣಗಳು ಗೊತ್ತೇ....?

Update: 2018-05-14 10:50 GMT

ಆಸ್ಟಿಯೊಪೊರೊಸಿಸ್ ಅಥವಾ ಅಸ್ಥಿರಂಧ್ರತೆ ಕೇವಲ ಮಹಿಳೆಯರನ್ನು ಕಾಡುತ್ತದೆ ಎಂದು ಹೆಚ್ಚಿನ ಪುರುಷರು ಭಾವಿಸಿರುತ್ತಾರೆ. ಆದರೆ ಪುರುಷರು ಅಸ್ಥಿರಂಧ್ರತೆಯಿಂದಾಗಿ ಮೂಳೆ ಮುರಿತದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿರುತ್ತಾರೆ. ಇದಕ್ಕೆ ಅವರ ಜೀವನಶೈಲಿ ಮತ್ತು ಚಟಗಳು ಕಾರಣವಾಗಿದ್ದು,ಕೆಲವೇ ಜನರು ಮಾತ್ರ ಮೂಳೆ ಮುರಿಯುವ ಮುನ್ನ ಸಮಸ್ಯೆಯನ್ನು ಅರಿತುಕೊಳ್ಳುತ್ತಾರೆ.

ಅಸ್ಥಿರಂಧ್ರತೆ ಸದ್ದಿಲ್ಲದೆ ಅಮರಿಕೊಳ್ಳುವ ಕಾಯಿಲೆಯಾಗಿದ್ದು,ಅದನ್ನು ಪತ್ತೆ ಹಚ್ಚುವುದು ಕಠಿಣ. ಪುರುಷರು ಮಹಿಳೆಯರಿಗಿಂತ ದೊಡ್ಡ ಅಸ್ಥಿಪಂಜರವನ್ನು ಹೊಂದಿರುವುದರಿಂದ ಮೂಳೆ ನಷ್ಟವು ತುಂಬ ತಡವಾಗಿ ಆರಂಭವಾಗುತ್ತದೆ ಮತ್ತು ಅವರಲ್ಲಿ ಶೀಘ್ರ ಹಾರ್ಮೋನ್ ಬದಲಾವಣೆಗಳು ಇರುವುದಿಲ್ಲವಾದ್ದರಿಂದ ಮಹಿಳೆಯರಿಗೆ ಹೋಲಿಸಿದರೆ ತುಂಬ ನಿಧಾನ ವೇಗದಲ್ಲಿ ಮೂಳೆ ನಷ್ಟ ಸಂಭವಿಸುತ್ತದೆ. 50 ವರ್ಷ ವಯೋಮಾನದ ಗುಂಪಿನ ಪುರುಷರಲ್ಲಿ ಅದೇ ವಯೋಮಾನದ ಮಹಿಳೆಯರಿಗೆ ಹೋಲಿಸಿದರೆ ಮೂಳೆ ನಷ್ಟದ ಪ್ರಮಾಣ ಕಡಿಮೆಯಾಗಿರುತ್ತದೆ. ಮಹಿಳೆಯರಲ್ಲಿ ಸಾಮಾನ್ಯವಾಗಿ ಈ ವಯಸ್ಸಿನ ಆಸುಪಾಸಿನಲ್ಲಿ ಋತುಬಂಧವುಂಟಾಗುವುದು ಇದಕ್ಕೆ ಕಾರಣವಾಗಿದೆ. 65-70 ವರ್ಷ ವಯಸ್ಸಿನಲ್ಲಿ ಪುರುಷರು ಮತ್ತು ಮಹಿಳೆಯರಲ್ಲಿ ಮೂಳೆ ನಷ್ಟದ ದರವು ಒಂದೇ ಆಗಿರುತ್ತದೆ.

ಅಸ್ಥಿರಂಧ್ರತೆಯಲ್ಲಿ ಎರಡು ವಿಧಗಳಿವೆ

 1) ಪ್ರೈಮರಿ ಆಸ್ಟಿಯೊಪೊರೊಸಿಸ್:

70ವರ್ಷಕ್ಕೂ ಮೇಲ್ಪಟ್ಟ ಪುರುಷರಲ್ಲಿ ಮೂಳೆ ನಷ್ಟದ ಸ್ಥಿತಿಯನ್ನು ಸೆನೈಲ್ ಆಸ್ಟಿಯೊಪೊರೊಸಿಸ್ ಎಂದು ಕರೆಯಲಾಗುತ್ತದೆ. ವಯೋಸಂಬಂಧಿ ಸಮಸ್ಯೆಗಳಿಂದ ಈ ಸ್ಥಿತಿಯುಂಟಾಗುತ್ತದೆ ಮತ್ತು ಮೂಳೆ ನಷ್ಟಗೊಳ್ಳುವುದು ಪ್ರಮುಖ ಕಾರಣವಾಗಿದೆ. 70 ವರ್ಷಕ್ಕೂ ಕಡಿಮೆ ಪ್ರಾಯದ ಪುರುಷರಲ್ಲಿ ಈ ಸ್ಥಿತಿಯನ್ನು ಐಡಿಯೊಪಥಿಕ್ ಆಸ್ಟಿಯೊಪೊರೊಸಿಸ್ ಎಂದು ಕರೆಯಲಾಗುತ್ತದೆ.

2) ಸೆಕಂಡರಿ ಆಸ್ಟಿಯೊಪೊರೊಸಿಸ್

ಕೆಲವು ಜೀವನಶೈಲಿ ನಡವಳಿಕೆಗಳಿಂದ ಅಸ್ಥಿಮಜ್ಜೆ ನಷ್ಟವುಂಟಾಗುತ್ತದೆ. ಅತಿಯಾದ ಮದ್ಯಪಾನ, ಧೂಮ್ರಪಾನ,ವ್ಯಾಯಾಮದ ಕೊರತೆ ಮತ್ತು ಜಠರಗರುಳಿನ ಕಾಯಿಲೆ ಇದಕ್ಕೆ ಅತ್ಯಂತ ಸಾಮಾನ್ಯ ಕಾರಣಗಳಾಗಿವೆ.

ಪುರುಷರಲ್ಲಿ ಅಸ್ಥಿರಂಧ್ರತೆ ಹೆಚ್ಚುವುದಕ್ಕೆ ಮುಖ್ಯ ಕಾರಣಗಳು:

►ವಯಸ್ಸು

ಪುರುಷರಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಲು ವಯಸ್ಸು ಬಹು ಮುಖ್ಯ ಕಾರಣವಾಗಿದೆ. 50 ವರ್ಷ ಪ್ರಾಯದ ನಂತರ ಪುರುಷರು ವರ್ಷಕ್ಕೆ ಶೇ.0.5ರಿಂದ ಶೇ.1ರ ದರದಲ್ಲಿ ತಮ್ಮ ಮೂಳೆ ಸಾಂದ್ರತೆಯನ್ನು ಕಳೆದುಕೊಳ್ಳುತ್ತಾರೆ. ಈ ಪ್ರಾಯದಲ್ಲಿ ಮೂಳೆಗಳನ್ನು ಪುನರ್‌ನಿರ್ಮಿಸುವ ಶರೀರದ ಸಾಮರ್ಥ್ಯವು 50 ವರ್ಷಕ್ಕೂ ಕಡಿಮೆ ಪ್ರಾಯದಲ್ಲಿದ್ದ ಸಾಮರ್ಥ್ಯಕ್ಕಿಂತ ಕಡಿಮೆಯಾಗಿರುತ್ತದೆ. ಟೆಸ್ಟೋಸ್ಟಿರೋನ್ ಹಾರ್ಮೋನ್‌ನ ಪ್ರಮಾಣ ಕಡಿಮೆಯಾಗುವುದರಿಂದ ಮೂಳೆ ನಿರ್ಮಾಣಕ್ಕೆ ಮತ್ತು ಮೂಳೆ ಮರುಹೀರುವಿಕೆಯ ಸಮತೋಲನಕ್ಕೆ ಅಗತ್ಯವಾಗಿರುವ ಈಸ್ಟ್ರೋಜನ್ ಹಾರ್ಮೋನ್ ಉತ್ಪತ್ತಿಯೂ ಕಡಿಮೆಯಾಗುತ್ತದೆ.

► ಕ್ಯಾಲ್ಸಿಯಂ ಮತ್ತು ವಿಟಾಮಿನ್ ಡಿ ಕೊರತೆ

ಇವರಡೂ ಮೂಳೆಗಳ ಆರೋಗ್ಯವನ್ನು ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ವಿಟಾಮಿನ್ ಡಿ ನಾವು ಸೇವಿಸುವ ಆಹಾರವನ್ನು ಹೀರಿಕೊಳ್ಳಲು ನೆರವಾದರೆ ಮೂಳೆಗಳನ್ನು ಹೆಚ್ಚು ಸದೃಢವಾಗಿಸಲು ಮತ್ತು ಅವು ಸುಲಭವಾಗಿ ಮುರಿತಕ್ಕೆ ಒಳಗಾಗದಿರಲು ಕ್ಯಾಲ್ಸಿಯಂ ಅಗತ್ಯವಾಗಿದೆ. 50 ವರ್ಷ ಪ್ರಾಯಕ್ಕಿಂತ ಮೇಲಿನ ವ್ಯಕ್ತಿಗೆ ದಿನವೊಂದಕ್ಕೆ ಸರಾಸರಿ 1000 ಮಿ.ಗ್ರಾಂ ಕ್ಯಾಲ್ಸಿಯಂ ಅಗತ್ಯವಿದೆ ಮತ್ತು ಡೈರಿ ಉತ್ಪನ್ನಗಳು ಹಾಗೂ ಹಾಲು ಈ ಖನಿಜದ ಅತ್ಯುತ್ತಮ ಮೂಲಗಳಾಗಿವೆ. ನಮ್ಮ ಶರೀರವನ್ನು ಬಿಸಿಲಿಗೆ ಒಡ್ಡಿಕೊಂಡಾಗ ಅದು ವಿಟಾಮಿನ್ ಡಿ ಅನ್ನು ಹೀರಿಕೊಳ್ಳುತ್ತದೆ. ಇವುಗಳ ಕೊರತೆಯನ್ನು ನೀಗಿಸಲು ಪೂರಕಗಳನ್ನು ತೆಗೆದುಕೊಳ್ಳಬಹುದಾದರೂ,ನಮ್ಮ ಶರೀರವು ಒಂದು ಬಾರಿಗೆ 500 ಮಿ.ಗ್ರಾಮ್‌ಗಿಂತ ಹೆಚ್ಚಿನ ಕ್ಯಾಲ್ಸಿಯಂ ಅನ್ನು ಸ್ವೀಕರಿಸುವುದಿಲ್ಲವಾದ್ದರಿಂದ ಅದಕ್ಕಿಂತ ಹೆಚ್ಚು ತೆಗೆದುಕೊಳ್ಳಬಾರದು.

► ವ್ಯಾಯಾಮದ ಕೊರತೆ

 ವ್ಯಾಯಾಮ ಮಾಡದಿರುವುದರಿಂದ ಮೂಳೆಗಳು ಹೆಚ್ಚು ದುರ್ಬಲಗೊಳ್ಳುತ್ತವೆ ಮತ್ತು ಸುಲಭವಾಗಿ ಮುರಿತಕ್ಕೆ ಒಳಗಾಗುತ್ತವೆ. ಮೂಳೆಗಳನ್ನು ಸದೃಢವಾಗಿಸಲು ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮವು ಅಗತ್ಯವಾಗಿದೆ.ಜಾಗಿಂಗ್,ಓಟ ಅಥವಾ ಇತರ ಯಾವುದೇ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬಹುದು.

► ಅತಿಯಾದ ಮದ್ಯಪಾನ

ಅತಿಯಾದ ಮದ್ಯಪಾನವು ಶೀಘ್ರ ಮೂಳೆನಷ್ಟಕ್ಕೆ ಕಾರಣವಾಗುವ ಜೊತೆಗೆ ಯಕೃತ್ತಿಗೂ ಹಾನಿಯನ್ನುಂಟು ಮಾಡುತ್ತದೆ. ಪ್ರತಿದಿನ ಮದ್ಯ ಸೇವನೆಯ ಚಟವಿರುವವರು ಅದರ ಪ್ರಮಾಣವನ್ನು ಒಂದೆರಡು ಪೆಗ್‌ಗಳಿಗೆ ಸೀಮಿತಗೊಳಿಸಿದರೆ ಒಳ್ಳೆಯದು.

► ಧೂಮ್ರಪಾನ

ತಂಬಾಕು ಸೇವನೆಗೂ ಮೂಳೆಗಳ ದೌರ್ಬಲ್ಯಕ್ಕೂ ನೇರವಾದ ಸಂಬಂಧವಿದೆ. ಧುಮ್ರಪಾನಿಗಳು ಧೂಮ್ರಪಾನಿಗಳಲ್ಲದವರಿಗಿಂತ ಕಡಿಮೆ ಕ್ರಿಯಾಶೀಲರಾಗಿರುವುದು ಇದಕ್ಕೆ ಕಾರಣವಾಗಿದೆ.

► ಕೆಲವು ಔಷಧಿಗಳ ಸೇವನೆ

ಖಿನ್ನತೆ, ಮಧುಮೇಹ, ಸಂಧಿವಾತ, ಕ್ಯಾನ್ಸರ್, ಎದೆಯುರಿಗಳಂತಹ ಸಮಸ್ಯೆಗಳಿಗೆ ಸೇವಿಸುವ ಔಷಧಿಗಳು ಮತ್ತು ಸ್ಟಿರಾಯ್ಡಿಗಳು ಮೂಳೆ ನಷ್ಟಕ್ಕೆ ಕಾರಣವಾಗಬಲ್ಲವು. ಈ ಔಷಧಿಗಳನ್ನು ಸೇವಿಸುತ್ತಿದ್ದರೆ ವ್ಯಾಯಾಮ ಮಾಡುವುದನ್ನು ಪ್ರಯತ್ನಿಸಬೇಕು. ಸ್ಟಿರಾಯ್ಡಿಗಳು ಮತ್ತು ಎದೆಯುರಿ ಔಷಧಿಗಳ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.

ಅಸ್ಥಿರಂಧ್ರತೆ ಚಿಕಿತ್ಸೆ:

ಏನನ್ನು ಮಾಡಬೇಕು: ಬ್ಯಾಲೆನ್ಸಿಂಗ್ ಎಕ್ಸರ್‌ಸೈಜ್

ವ್ಯಕ್ತಿಯು ಒಂದು ಕಾಲಿನ ಮೇಲೆ ನಿಂತುಕೊಂಡು ವಿರುದ್ಧ ಬದಿಯ ಕೈಯಲ್ಲಿ ಬಾರ್ ಹಿಡಿದುಕೊಂಡಿರಬೇಕು, ಇದನ್ನು 15 ಸೆಕೆಂಡ್‌ಗಿಂತ ಹೆಚ್ಚು ಮಾಡಬಾರದು. ಇನ್ನೊಂದು ಕಾಲಿಗೂ ಇದನ್ನು ಪುನರಾವರ್ತಿಸಬೇಕು. ಹೀಗೆ ದಿನಕ್ಕೆ ಕನಿಷ್ಠ 10 ಸಲವಾದರೂ ಮಾಡಬೇಕು.ಈ ವ್ಯಾಯಾಮವನ್ನು ಕೊಂಚ ಕಷ್ಟಕರವಾಗಿಸಲು ದಿಂಬಿನ ಮೇಲೆ ನಿಂತುಕೊಳ್ಳಬಹುದು.

► ಹಿಮ್ಮಡಿಯಿಂದ ಹೆಬ್ಬೆರಳವರೆಗೆ ನಡಿಗೆ

ಒಂದು ಪಾದವನ್ನು ಇನ್ನೊಂದು ಪಾದದ ಎದುರಿಗೆ ಸರಿಯಾಗಿ ಇಟ್ಟುಕೊಂಡು ನಡೆಯಲು ಪ್ರಯತ್ನಿಸಿ. ಈ ನಡಿಗೆ ಹಿಮ್ಮಡಿಯಿಂದ ಹೆಬ್ಬೆರಳವರೆಗೆ ಸೀಮಿತವಾಗಿರಬೇಕು. ಅಂದರೆ ಪ್ರತಿಬಾರಿ ಹೆಜ್ಜೆ ಹಾಕಿದಾಗಲೂ ಒಂದು ಪಾದದ ಬೆರಳಿಗೆ ಇನ್ನೊಂದು ಪಾದದ ಹಿಮ್ಮಡಿ ತಾಗಿರಬೇಕು. ಹೀಗೆ ದಿನಕ್ಕೆ ನೂರು ಮೀಟರ್ ದೂರವಾದರೂ ನಡೆಯಬೇಕು.

► ಕಾಲು ಮೇಲೆತ್ತುವಿಕೆ

ಒಂದು ಕಾಲಿನ ಮೇಲೆ ನಿಂತುಕೊಂಡು ಇನ್ನೊಂದು ಕಾಲನ್ನು ನಿಮ್ಮ ಕಡೆಗೆ ಮೇಲಕ್ಕೆತ್ತಬೆಕು. 10 ಸೆಕೆಂಡ್‌ಗಳ ಕಾಲ ಇದೇ ಸ್ಥಿತಿಯಲ್ಲಿದ್ದು,ಬಳಿಕ ಇನ್ನೊಂದು ಕಾಲಿಗೆ ಮಾಡಬೇಕು. ಇದನ್ನು ಪ್ರತಿದಿನ ಪುನರಾವರ್ತಿಸಬೇಕು.

► ಬೆನ್ನುಮೂಳೆ ನೇರವಾಗಿರಲಿ

ವ್ಯಾಯಾಮ ಮಾಡುವಾಗು ಮತ್ತು ಕುಳಿತುಕೊಂಡಾಗ ಬೆನ್ನುಮೂಳೆ ನೇರವಾಗಿರಬೇಕು. ಇದು ಮೂಳೆಗಳ ದೃಢತೆಯನ್ನು ಹೆಚ್ಚಿಸುತ್ತದೆ.

ಏನನ್ನು ಮಾಡಬಾರದು:ವೇಗವಾಗಿ ಚಲಿಸುವುದನ್ನು ಹಾಗೂ ಮುಂದೆ ಮತ್ತು ಹಿಂದೆ ಬಗ್ಗಬೇಕಾದ ವ್ಯಾಯಾಮಗಳನ್ನು ನಿವಾರಿಸಿ.

► ಹೆಚ್ಚು ಭಾರ ಎತ್ತಬೇಡಿ

ಒಂದು ಬಾರಿಗೆ 5-6 ಕೆ.ಜಿ.ಗಿಂತ ಹೆಚ್ಚಿನ ಭಾರವನ್ನು ಎತ್ತಬೇಡಿ ಮತ್ತು ಅದನ್ನು ಪುನರಾವರ್ತಿಸಲು ಪ್ರಯತ್ನಿಸಬೇಡಿ.

► ಅಪಾಯಕಾರಿ ವ್ಯಾಯಾಮಗಳಿಂದ ದೂರವಿರಿ

ನೀವು ಕೆಳಕ್ಕೆ ಬೀಳಬಹುದಾದ ವ್ಯಾಯಾಮಗಳಿಂದ ದೂರವಿರಿ.ಅವು ಮೂಳೆ ಮುರಿತಕ್ಕೆ ಕಾರಣವಾಗಬಹುದು. ಜಿಗಿತ,ಸೈಕ್ಲಿಂಗ್ ಇತ್ಯಾದಿಗಳ ಗೋಜಿಗೆ ಹೋಗಬೇಡಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News