ನಕಲಿ ವೋಟರ್ ಐಡಿ ಪತ್ತೆ ಪ್ರಕರಣ: ಮುನಿರತ್ನಗೆ ಷರತ್ತು ಬದ್ಧ ಜಾಮೀನು ಮಂಜೂರು

Update: 2018-05-14 15:33 GMT

ಬೆಂಗಳೂರು, ಮೇ 14: ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ವೋಟರ್ ಐಡಿ ಪತ್ತೆ ಹಾಗೂ ಮತದಾರರಿಗೆ ಹಣದ ಆಮಿಷ ಒಡ್ಡಿದ್ದ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿ ಪಟ್ಟಿಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನಗೆ ಬೆಂಗಳೂರಿನ 7ನೆ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಬಂಧನದ ಭೀತಿ ಎದುರಿಸುತ್ತಿದ್ದ ಮುನಿರತ್ನ ಅವರು ಸೋಮವಾರ ಬೆಂಗಳೂರಿನ 7ನೆ ಎಸಿಎಂಎಂ ಕೋರ್ಟ್ ಮುಂದೆ ಹಾಜರಾಗಿದ್ದರು. ಕೋರ್ಟ್ ಮುನಿರತ್ನ ಅವರಿಗೆ ಎರಡು ಪ್ರಕರಣಗಲ್ಲೂ ಜಾಮೀನು ಮಂಜೂರು ಮಾಡಿದೆ.

ಮುನಿರತ್ನ ಸೇರಿದಂತೆ ಒಟ್ಟು 13 ಆರೋಪಿಗಳಿಗೆ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. 25 ಸಾವಿರ ಬಾಂಡ್ ಮತ್ತು ಮೂರು ಸಾವಿರ ಶ್ಯೂರಿಟಿ ಆಧಾರದ ಮೇಲೆ ಜಾಮೀನು ಮಂಜೂರು ಮಾಡಲಾಗಿದೆ.

ಮುನಿರತ್ನ ಸೇರಿ ಎಲ್ಲ 13 ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 420, 468, 471ರಡಿ ಪ್ರಕರಣ ದಾಖಲಿಸುವಂತೆ ನಗರದ 24ನೆ ಎಸಿಎಂಎಂ ಕೋರ್ಟ್‌ನಲ್ಲಿ ಜಾಲಹಳ್ಳಿ ಪೊಲೀಸರಿಗೆ ಆದೇಶಿಸಿತ್ತು.

ಗುರುತಿನ ಚೀಟಿಯನ್ನು ಪತ್ತೆ ಹಚ್ಚಲು ಹೋಗಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಮುನಿರತ್ನ ವಿರುದ್ಧ ಎಫ್‌ಐಆರ್ ದಾಖಲಿಸಲು ಸೂಚಿಸಲಾಗಿತ್ತು. ರಾಕೇಶ್ ಎಂಬುವವರು ಖಾಸಗಿ ದೂರು ಸಲ್ಲಿಸಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಈವರೆಗೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News