ಲೊಟ್ಟೆಗೊಲ್ಲಹಳ್ಳಿ ಮರು ಮತದಾನ: ಶೇಕಡ 53.33 ರಷ್ಟು ಮತ ಚಲಾವಣೆ

Update: 2018-05-14 15:45 GMT

ಬೆಂಗಳೂರು, ಮೇ 14: ರಾಜಧಾನಿ ಬೆಂಗಳೂರಿನ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ-2ರ ಮತಗಟ್ಟೆಯಲ್ಲಿ ಸೋಮವಾರ ನಡೆದ ಮರು ಮತದಾನ ಪ್ರಕ್ರಿಯೆಯಲ್ಲಿ 674 ಮತದಾರರು ಗೈರಾಗಿದ್ದು, ಶೇಕಡ 53.33 ರಷ್ಟು ಮತ ಚಲಾವಣೆ ಆಗಿದೆ.

ಲೊಟ್ಟೆಗೊಲ್ಲಹಳ್ಳಿ-2ರ ಮತಗಟ್ಟೆ ವ್ಯಾಪ್ತಿಯಲ್ಲಿ 1,444 ಮತದಾರರಿದ್ದು, 744 ಪುರುಷರು, 704 ಮಹಿಳೆಯರಿದ್ದರು. ಆದರೆ, ಸೋಮವಾರ ಮಧ್ಯಾಹ್ನ ಮಳೆ ಸುರಿದ ಕಾರಣ ಮತದಾರರು ಮತಗಟ್ಟೆಗೆ ಬರಲು ಹಿಂದೇಟು ಹಾಕಿದ್ದು, 770 ಮತದಾರರು ಮಾತ್ರ ತಮ್ಮ ಹಕ್ಕು ಚಲಾಯಿಸಿದರು. ಇದರಲ್ಲಿ 379 ಪುರುಷರು, 391 ಮಹಿಳೆಯರಿದ್ದಾರೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.

ಬೆಳಗ್ಗೆ 7 ಗಂಟೆಯಿಂದ 10ರ ಸುಮಾರಿಗೆ 108 ಪುರುಷ, 112 ಮಹಿಳೆಯರು ಸೇರಿದಂತೆ ಒಟ್ಟು 220 ಜನ ಮತ ಚಲಾಯಿಸಿದ್ದರು. ತದನಂತರ, ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುವವರ ಸಂಖ್ಯೆ ಕಡಿಮೆಯಾಗತೊಡಗಿತು. ಇನ್ನು ಮಳೆ ಸುರಿಯುತ್ತಿದ್ದಂತೆಯೇ ಮತದಾರರು ಕಾಣಲೇ ಇಲ್ಲ. ಶೇಕಡ 70ಕ್ಕೂ ಅಧಿಕ ಮತದಾನ ಪ್ರಮಾಣ ಬರಲಿದೆ ಎಂದು ಚುನಾವಣಾಧಿಕಾರಿಗಳು ನಿರೀಕ್ಷೆಯಿಟ್ಟಿದ್ದರು.

ಆರೋಪ: ಕಾಂಗ್ರೆಸ್ ಅಭ್ಯರ್ಥಿ ಭೈರತಿ ಸುರೇಶ್ ಮತದಾರರಿಗೆ ಆಮಿಷವೊಡ್ಡಿ ನಗದು ಹಂಚಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಅಪಾರ್ಟ್‌ಮೆಂಟ್‌ವೊಂದರ ಬಳಿ ಜಮಾಯಿಸಿದ ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರು, ಪ್ರತಿಭಟನೆ ನಡೆಸಿದರು. ಈ ಮತಗಟ್ಟೆ ವ್ಯಾಪ್ತಿಯ ಮತದಾರರಿಗೆ ಚಿನ್ನಾಭರಣ, ನಗದು ಹಂಚಿಕೆ ಮಾಡಿದ್ದಾರೆ ಎಂದು ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಕಾರಣ ಗೊಂದಲದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು.

ಬಳಿಕ ಭೈರತಿ ಸುರೇಶ್ ಮಾತನಾಡಿ, ನಾನು ತಿಂಡಿ ತಿನ್ನಲು ಸ್ನೇಹಿತನ ಮನೆಗೆ ಬಂದಿದ್ದೆ. ಆದರೆ, ಸೋಲಿನ ಭೀತಿಯಿಂದ ಬಿಜೆಪಿ ಅಭ್ಯರ್ಥಿ ವೈ.ಎ. ನಾರಾಯಣಸ್ವಾಮಿ ಅವರು ಈ ರೀತಿ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿದರು. ಇದರ ಬೆನ್ನಿಗೇ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ, ಸ್ಥಳಕ್ಕೆ ಆಗಮಿಸಿ, ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯಲ್ಲಿ ಭಾಗಿಯಾದರು. ಅಲ್ಲದೆ, ಸೋಲುವ ಭಯದಿಂದ ಭೈರತಿ ಸುರೇಶ್ ಅವರು ಹಣ ಹಂಚುತ್ತಿದ್ದಾರೆ ಎಂದು ದೂರಿದರು.

ಬಿಜೆಪಿಗೆ ಎಚ್ಚರಿಕೆ: ಮರು ಮತದಾನ ನಡೆಯುತ್ತಿದ್ದ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಗೆ ಬಿಜೆಪಿ ಅಭ್ಯರ್ಥಿ ವೈ.ಎ.ನಾರಾಯಣಸ್ವಾಮಿ ಪದೇ ಪದೇ ಧಾವಿಸಿ ಮತದಾರರೊಂದಿಗೆ ಮಾತನಾಡುತ್ತಿದ್ದ ದೃಶ್ಯ ಕಂಡುಬಂದ ಬೆನ್ನಲೇ ಚುನಾವಣಾಧಿಕಾರಿ ಎಚ್ಚರಿಕೆ ನೀಡಿದರು. ಅಲ್ಲದೆ, ಮತಗಟ್ಟೆ ಒಳಗೆ ಏಜೆಂಟ್ ಬದಲಿಗೆ ತಾವೇ ಖುದ್ದು ಇರುವುದಾಗಿ ಹೇಳಿದರು. ಆದರೆ ರಿಟರ್ನಿಂಗ್ ಅಧಿಕಾರಿ ನರಸಿಂಹಪ್ಪ, ನೀವು ಹೇಳಿದ ಹಾಗೆ ನಡೆದುಕೊಳ್ಳಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದ ಬಳಿಕ ಅವರು ವಾಪಸ್ಸು ಹೋದರು ಎಂದು ತಿಳಿದುಬಂದಿದೆ.

ಮೇ 12 ರಂದು ರಾಜ್ಯ ವಿಧಾನ ಸಭಾ ಚುನಾವಣೆ ದಿನದಂದು ವಿದ್ಯುನ್ಮಾನ ಮತ ಯಂತ್ರದಲ್ಲಿ ದೋಷ ಕಂಡುಬಂದ ಕಾರಣ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ-2ರ ಮತಗಟ್ಟೆಯಲ್ಲಿ ಮತದಾನ ಮುಂದೂಡಲಾಗಿತ್ತು. ಅದರಂತೆಯೇ ಸೋಮವಾರ ಮರು ಮತದಾನ ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News