ಮತ ಎಣಿಕೆ ಕೇಂದ್ರ ಪ್ರವೇಶಕ್ಕೆ ಶಿಷ್ಟಾಚಾರ ಪಾಲನೆ ಅಗತ್ಯ: ಸಂಜೀವ್‌ ಕುಮಾರ್

Update: 2018-05-14 16:03 GMT

ಬೆಂಗಳೂರು, ಮೇ 14: ಮತ ಎಣಿಕೆ ಕೇಂದ್ರದ ಒಳಗಿರುವ ಪರಿಮಿತಿಯೊಳಗೆ ಶಿಷ್ಟಾಚಾರ ಪಾಲಿಸದೆ ಯಾರೊಬ್ಬರಿಗೂ ಪ್ರವೇಶಿಸಲು ಅವಕಾಶ ನೀಡುವುದಿಲ್ಲ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸೋಮವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡುವ ಜಿಲ್ಲಾ ಚುನಾವಣಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ವೀಕ್ಷಕರು, ಅಭ್ಯರ್ಥಿಗಳು ಅಥವಾ ಅವರ ಏಜೆಂಟರುಗಳು ಸೇರಿದಂತೆ ಯಾವುದೆ ವ್ಯಕ್ತಿಗಳು ಲಾಗ್ ಪುಸ್ತಕದಲ್ಲಿ ಹೆಸರು, ವಿಳಾಸ, ಸಮಯ, ದಿನಾಂಕ, ಅವಧಿ ನಮೂದಿಸಿ ಸಹಿ ಮಾಡಿದ ನಂತರವೇ ಒಳಗೆ ಪ್ರವೇಶಿಸಲು ಅವಕಾಶವಿರುತ್ತದೆ ಎಂದರು.

ಮತ ಎಣಿಕೆ ಕೇಂದ್ರಕ್ಕೆ ಭೇಟಿ ನೀಡುವ ಪ್ರತಿಯೊಬ್ಬರನ್ನೂ ಕೇಂದ್ರ ಸಶಸ್ತ್ರ ಮೀಸಲು ಪಡೆಯವರು ವಿಡಿಯೋ ಚಿತ್ರೀಕರಿಸುತ್ತಾರೆ. ಇವಿಎಂಗಳನ್ನು ಇರಿಸಿರುವ ಆವರಣದೊಳಗೆ ಅಧಿಕಾರಿ, ಸಚಿವರು ಅಥವಾ ಯಾವುದೆ ಪಕ್ಷದ ರಾಜಕೀಯ ಕಾರ್ಯಕರ್ತರು ಸೇರಿದಂತೆ ಯಾವುದೆ ವಾಹನಗಳೊಂದಿಗೆ ಪ್ರವೇಶಿಸುವಂತಿಲ್ಲ. ವಾಹನಗಳನ್ನು ಭದ್ರತಾ ಹೊರ ವಲಯದಲ್ಲಿಯೆ ನಿಲುಗಡೆ ಮಾಡಿ ಕಾಲ್ನಡಿಗೆಯ ಮೂಲಕ ಮತ ಎಣಿಕೆ ಕೇಂದ್ರವನ್ನು ಪ್ರವೇಶಿಸಬೇಕು ಎಂದು ಅವರು ತಿಳಿಸಿದರು.

ಮಾಧ್ಯಮ ಪ್ರತಿನಿಧಿಗಳಿಗೆ ಚುನಾವಣಾ ಆಯೋಗದಿಂದ ನೀಡಿರುವ ಅಧಿಕೃತ ಗುರುತಿನ ಚೀಟಿಗಳನ್ನು ಪ್ರದರ್ಶಿಸಿ, ಹಾಜರುಪಡಿಸಿದ ಬಳಿಕವೇ ಮತ ಎಣಿಕೆ ಕೇಂದ್ರಕ್ಕೆ ಪ್ರವೇಶಿಸಲು ಅನುಮತಿ ಇರುತ್ತದೆ ಎಂದು ಸಂಜೀವ್‌ಕುಮಾರ್ ಹೇಳಿದರು.

ವಿವಿ ಪ್ಯಾಟ್: ದೇಶದಲ್ಲಿ ಇದೇ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ವಿವಿಪ್ಯಾಟ್ ಯಂತ್ರಗಳನ್ನು ಬಳಸಲಾಗುತ್ತಿದೆ. ಹಾಗೆಯೇ ಮತ ಎಣಿಕೆ ನಡೆಯುವಾಗ ಪ್ರತಿ ಮತ ಕ್ಷೇತ್ರಕ್ಕೆ ಒಂದರಂತೆ ಈ ವಿವಿಪ್ಯಾಟ್ ಯಂತ್ರಗಳನ್ನು ತೆರೆದು ಅಲ್ಲಿರುವ ಮುದ್ರಿತ ಪ್ರತಿಗಳನ್ನು ಲೆಕ್ಕ ಹಾಕಿ ಮತ ಯಂತ್ರದಲ್ಲಿ ಬರುವ ಫಲಿತಾಂಶವನ್ನು ಇದರೊಂದಿಗೆ ತಾಳೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮತಯಂತ್ರವನ್ನು ಯಾವುದೇ ರೀತಿಯಲ್ಲಿ ತಿರುಚಲು ಸಾಧ್ಯವಿಲ್ಲ ಮತ್ತು ಅವುಗಳು ಹೆಚ್ಚು ಖಚಿತತೆಯಿಂದ ಕೂಡಿರುತ್ತವೆ ಎನ್ನುವುದನ್ನು ವಿವಿಪ್ಯಾಟ್‌ನ ಮುದ್ರಿತ ಪ್ರತಿಗಳು ಮತ್ತು ಮತಯಂತ್ರಗಳು ಖಚಿತ ಪಡಿಸುತ್ತವೆ ಎಂದು ಅವರು ಹೇಳಿದರು.

ಇದೇ ಮೊದಲ ಬಾರಿಗೆ ವಿವಿಪ್ಯಾಟ್‌ನಲ್ಲಿರುವ ಮುದ್ರಿತ ಪ್ರತಿಗಳನ್ನು ಲೆಕ್ಕ ಹಾಕಲು ಅನುವಾಗುವಂತೆ ಪಾರದರ್ಶಕ ಪೆಟ್ಟಿಗೆಯಲ್ಲಿ ಪಿಜನ್ ಹೋಲ್ ಮಾದರಿಯಲ್ಲಿ ಸಣ್ಣ ಸಣ್ಣ ಬಾಕ್ಸ್‌ಗಳನ್ನು ವಿನ್ಯಾಸಗೊಳಿಸಿದೆ. ಮತಗಟ್ಟೆಯಲ್ಲಿ ಹಾಜರಿರುವವರ ಸಮ್ಮುಖದಲ್ಲಿ ತೆಗೆದು ಅವರ ಮುಂದೆ ವಿಂಗಡಿಸಿ, ಬಳಿಕ ಲೆಕ್ಕ ಹಾಕಲಾಗುವುದು ಎಂದು ಸಂಜೀವ್‌ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News