ಬೆಂಗಳೂರು: ನಗರ ಜಿಲ್ಲಾ ವ್ಯಾಪ್ತಿಯ 7 ಕ್ಷೇತ್ರಗಳ ಮತ ಎಣಿಕೆಗೆ ಸಕಲ ಸಿದ್ಧತೆ
ಬೆಂಗಳೂರು, ಮೇ 14: ರಾಜ್ಯ ವಿಧಾನಸಭಾ ಚುನಾವಣೆ ಮತ ಎಣಿಕೆ ಪ್ರಕ್ರಿಯೆ ಮೇ 15 ರಂದು ನಡೆಯಲಿದ್ದು, ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ 7 ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ಈ ಬಗ್ಗೆ ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನಗರ ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ನಗರದ ಮಹಾರಾಣಿ ಕಾಲೇಜಿನ ಕಲಾ ಮತ್ತು ವಾಣಿಜ್ಯ ವಿಭಾಗದ ಕಟ್ಟಡದಲ್ಲಿ ಮತಗಳ ಎಣಿಕೆ ಕಾರ್ಯ ಆರಂಭವಾಗಲಿದೆ ಎಂದರು.
ಎಲ್ಲ 7 ಕ್ಷೇತ್ರಗಳ ಎಣಿಕೆಯನ್ನು 13 ಕೊಠಡಿಗಳಲ್ಲಿ ಎಣಿಕೆ ಪ್ರಕ್ರಿಯೆ ಜರುಗಲಿದ್ದು, ಇದಕ್ಕಾಗಿ, 14 ಟೇಬಲ್ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಟೇಬಲ್‌ಗೆ ಒಬ್ಬರಿಗೆ ಏಜೆಂಟ್ ಪಾಸ್‌ಗಳನ್ನು ವಿತರಿಸಲಾಗಿದೆ ಎಂದು ಅವರು ಹೇಳಿದರು.
ಯಲಹಂಕ-ವಾಣಿಜ್ಯ ವಿಭಾಗದ 2ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 211, 212 ನಲ್ಲಿ, ಬ್ಯಾಟರಾಯನಪುರ-1ನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 108, 109 ನಲ್ಲಿ, ಮಹದೇವಪುರ- ನೆಲ ಅಂತಸ್ತಿನ 10, 11ರಲ್ಲಿ ಮತ ಎಣಿಕೆ ನಡೆಯಲಿದೆ.
ಅದೇ ರೀತಿ, ಯಶವಂತಪುರ-ಕಲಾ ಭಾಗದ ನೆಲ ಅಂತಸ್ತಿನ ಕೊಠಡಿ ಸಂಖ್ಯೆ 24, 25 ನಲ್ಲಿ, ದಾಸರಹಳ್ಳಿ- 1ನೇ ಮಹಡಿ ಕೊಠಡಿ ಸಂಖ್ಯೆ 128, 129ನಲ್ಲಿ, ಆನೇಕಲ್-2ನೇ ಮಹಡಿ ಕೊಠಡಿ ಸಂಖ್ಯೆ 201, 202ನಲ್ಲಿ ಹಾಗೂ ಬೆಂಗಳೂರು ದಕ್ಷಿಣ-ಕಿತ್ತೂರುರಾಣಿ ಚೆನ್ನಮ್ಮ ಆಡಿಟೋರಿಯಂನಲ್ಲಿ ನಡೆಸಲಾಗುವುದೆಂದು ದಯಾನಂದ್ ವಿವರಿಸಿದರು.
ಸಿಬ್ಬಂದಿಗಳೆಷ್ಟು?: ಮತ ಎಣಿಕೆ ಪ್ರಕ್ರಿಯೆಯಲ್ಲಿ 14 ಸೂಪರ್‌ವೈಸರ್‌ಗಳ ಸಮ್ಮುಖದಲ್ಲಿ 14 ಸಹಾಯಕರು ಮತ ಎಣಿಕೆ ನಡೆಸಲಿದ್ದಾರೆ. ಈ ವೇಳೆ 14 ಮೈಕ್ರೋ ಅಬ್ಸರ್‌ವರ್‌ಗಳು ಎಣಿಕೆಯ ನಿಗಾವಹಿಸಲಿದ್ದಾರೆ. ಒಟ್ಟಾರೆ ಮತ ಎಣಿಕೆ ಕಾರ್ಯಕ್ಕೆ 104 ಸೂಕ್ಷ್ಮ ವೀಕ್ಷಕರು, 104 ಎಣಿಕೆ ಮೇಲ್ವಿಚಾರಕರು, 208 ಮತ ಎಣಿಕೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದರು.
ಟಿವಿ ಪರದೆ: ಪ್ರತಿ ಸುತ್ತಿನ ಮತ ಎಣಿಕೆ ಮಾಹಿತಿ ಸ್ಥಳದಲ್ಲಿಯೇ ಟಿವಿ ಪರದೆಯಲ್ಲಿ ಪ್ರದರ್ಶಿಸಲಾಗುವುದು. ಜೊತೆಗೆ ಕಂಪ್ಯೂಟರ್, ಜೆರಾಕ್ಸ್ ಯಂತ್ರಗಳ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಹೇಳಿದರು.
ವಾಹನ ನಿಲುಗಡೆ: ಮತ ಎಣಿಕೆ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಏಜೆಂಟ್ ಸೇರಿದಂತೆ ಇತರೆ ಸಿಬ್ಬಂದಿಗಳ ವಾಹನ ನಿಲುಗಡೆಗೆ ಫ್ರೀಡಂ ಪಾರ್ಕ್‌ನ ಆವರಣದಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.