ಮುನಿರತ್ನ ಚೆನ್ನಾಗಿಯೇ ಅಭಿನಯಿಸುತ್ತಾರೆ: ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು
ಬೆಂಗಳೂರು, ಮೇ 14: ಶಾಸಕ ಮುನಿರತ್ನ ನನ್ನ ಮೇಲೆ ಗುರುತಿಚೀಟಿ ಅವ್ಯವಹಾರ ಆರೋಪ ಹೊರಿಸಿದ್ದು, ನನ್ನ ಮನಸ್ಸಿಗೆ ಅತೀವ ನೋವು ತಂದಿದೆ. ಚಿತ್ರ ನಿರ್ಮಾಪಕ ಮುನಿರತ್ನ ಚೆನ್ನಾಗಿಯೇ ಅಭಿನಯವನ್ನು ಮಾಡುತ್ತಾರೆಂದು ರಾಜರಾಜೇಶ್ವರಿನಗರ ಬಿಜೆಪಿ ಅಭ್ಯರ್ಥಿ ತುಳಸಿ ಮುನಿರಾಜು ಲೇವಡಿ ಮಾಡಿದ್ದಾರೆ.
ಸೋಮವಾರ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುನಿರತ್ನ ನಡೆಸಿದ ಅವ್ಯವಹಾರವನ್ನು ಬಯಲಿಗೆಳೆದಿದ್ದೇ ನಾನು. ಆದರೆ, ಅವರು ನನ್ನ ಮೇಲೆಯೇ ಆರೋಪ ಹೊರಿಸುತ್ತಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಆರು ತಿಂಗಳಿನಿಂದ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಬಡವರಿಗೆ ಅಲ್ಲಿನ ಶಾಸಕ ಮುನಿರತ್ನ ವಿವಿಧ ರೀತಿಯಲ್ಲಿ ಆಮಿಷವೊಡ್ಡುತ್ತಿದ್ದರು. ಸೀರೆ, ಕುಕ್ಕರ್, ನೀರಿನ ಕ್ಯಾನ್‌ಗಳನ್ನು ಹಂಚುತ್ತಿದ್ದರು. ಮತದಾರರ ಗುರುತಿನ ಚೀಟಿ ಪಡೆದು ಆಮಿಷವೊಡ್ಡಿದ್ದಾರೆ ಎಂದು ದೂರಿದರು.
ಕ್ಷೇತ್ರದ ವಿವಿಧೆಡೆಗಳಲ್ಲಿ ಮುನಿರತ್ನ ಬೆಂಬಲಿಗರು ಆಮಿಷ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಕ್ಷೇತ್ರದ ಲಕ್ಷ್ಮೀದೇವಿನಗರದಲ್ಲಿ ತಮಿಳುನಾಡಿನಿಂದ ಬಂದ ತೃತೀಯ ಲಿಂಗಿಗಳಿದ್ದಾರೆ. ಅಲ್ಲಿಗೆ ಪ್ರಚಾರಕ್ಕೆ ತೆರಳಲು ನಮಗೆ ಅವಕಾಶ ನೀಡಿಲ್ಲ. ಮೂರು ತಿಂಗಳಿಂದ ಶಾಸಕ ಮುನಿರತ್ನ ಪಟಾಲಂ ಮೇಲೆ ಕಣ್ಣಿಟ್ಟಿದ್ದೆವು ಎಂದು ಹೇಳಿದರು. ಚುನಾವಣೆ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪ್ರಚಾರದ ಉದ್ದೇಶಕ್ಕಾಗಿ ಬಿಜೆಪಿ ರಾಷ್ಟ್ರೀಯ ನಾಯಕ ಅಮಿತ್ ಶಾ ನೇತೃತ್ವದಲ್ಲಿ ಸಮಾವೇಶವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಕಲ್ಲು ತೂರಾಟ ನಡೆಸಿ ಸಮಾವೇಶ ವಿಫಲಗೊಳಿಸುವ ಸಂಚು ನಡೆದಿತ್ತು ಎಂದು ಅವರು ಆರೋಪಿಸಿದರು.