ರಾಜ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿದ ಶಾಸಕ ಮುನಿರತ್ನ
ಬೆಂಗಳೂರು, ಮೇ 14: ನ್ಯಾಯಾಲಯದಿಂದ ಜಾಮೀನು ಮಂಜೂರಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ, ದಿಢೀರ್ ಬೆಳವಣಿಗೆಯೊಂದರಲ್ಲಿ ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದ್ದಾರೆ.
ಸೋಮವಾರ ನಗರದ ಎಸಿಎಂಎಂ ಕೋರ್ಟ್‌ನಿಂದ ಜಾಮೀನು ಮಂಜೂರಾದ ನಂತರ ಇಲ್ಲಿನ ಶೇಷಾದ್ರಿ ರಸ್ತೆಯಲ್ಲಿರುವ ರಾಜ್ಯ ಮುಖ್ಯ ಚುನಾವಣಾ ಕಚೇರಿಯಲ್ಲಿ ಶಾಸಕ ಮುನಿರತ್ನ, ಚುನಾವಣಾಧಿಕಾರಿಗಳ ಜೊತೆ ಮಾತುಕತೆ ನಡೆಸಿದ್ದಾರೆ ಎಂದು ಗೊತ್ತಾಗಿದೆ.
ಕೇಂದ್ರದ ಒತ್ತಡ: ಕೇಂದ್ರ ಸರಕಾರ, ಚುನಾವಣಾ ಆಯೋಗದ ಮೇಲೆ ಒತ್ತಡ ಹೇರಿ ರಾಜರಾಜೇಶ್ವರಿನಗರ ಕ್ಷೇತ್ರದ ಚುನಾವಣೆ ಮುಂದೂಡಲಾಗಿದೆ. ಅಲ್ಲದೆ, ರಾಜರಾಜೇಶ್ವರಿನಗರ ಕಾಂಗ್ರೆಸ್ ಅಭ್ಯರ್ಥಿ ವಜಾ ಮಾಡಬೇಕೆಂದು ಬಿಜೆಪಿ ಆಯೋಗದ ಮೇಲೆ ಒತ್ತಡ ಹೇರುವುದು ಸರಿಯಲ್ಲ ಎಂದು ಸಂಸದ ಡಿ.ಕೆ.ಸುರೇಶ್ ಆಕ್ಷೇಪಿಸಿದರು.
ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಭೇಟಿ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮತದಾರರ ಗುರುತಿನ ಚೀಟಿ ಪತ್ತೆ ಪ್ರಕರಣದ ಹಿಂದೆ ಬಿಜೆಪಿ ಕೈವಾಡವಿದೆ. ಆದುದರಿಂದ ಈ ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಕೋರಿ ಆಯೋಗಕ್ಕೆ ದಾಖಲೆಗಳನ್ನು ಸಲ್ಲಿಸಿದ್ದೇವೆ ಎಂದರು.
ರಾಜ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಅವರು ನಮ್ಮ ಮನವಿಯನ್ನು ಆಲಿಸಿದ್ದು, ಪ್ರಕರಣ ಸಂಬಂಧ ನಿಷ್ಪಕ್ಷಪಾತ ತನಿಖೆ ನಡೆಸುವ ಭರವಸೆ ನೀಡಿದ್ದಾರೆ ಎಂದು ಸುರೇಶ್ ತಿಳಿಸಿದರು. ಈ ವೇಳೆ ಶಾಸಕ ಮುನಿರತ್ನ ಸೇರಿದಂತೆ ಕಾಂಗ್ರೆಸ್ ಮುಖಂಡರು ಹಾಜರಿದ್ದರು.