×
Ad

ಬೆಂಗಳೂರು: ಮಿಲ್ಲತ್ ಡೈರೆಕ್ಟರಿ ಡಿಜಿಟಲೀಕರಣಕ್ಕೆ ರಹ್ಮಾನ್‌ಖಾನ್ ಸಲಹೆ

Update: 2018-05-14 21:52 IST

ಬೆಂಗಳೂರು, ಮೇ 14: ಬೇದಾರೆ ಮಿಲ್ಲತ್ ಪಬ್ಲಿಕೇಷನ್ ಹೊರತರುತ್ತಿರುವ ಮಿಲ್ಲತ್ ಡೈರೆಕ್ಟರಿಯನ್ನು ಮುಂದಿನ ದಿನಗಳಲ್ಲಿ ಡಿಜಿಟಲೀಕರಣಗೊಳಿಸುವಂತೆ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್‌ಖಾನ್ ಸಲಹೆ ನೀಡಿದ್ದಾರೆ.

ಸೋಮವಾರ ನಗರದ ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿರುವ ಗ್ರಂಥಾಲಯ ಸಭಾಂಗಣದಲ್ಲಿ ‘ಮಿಲ್ಲತ್ ಡೈರೆಕ್ಟರಿ 2018-19’ ಬಿಡುಗಡೆಗೊಳಿಸಿ ಅವರು ಮಾತನಾಡಿದರು.

ಸಮುದಾಯದ ಎಲ್ಲ ಸಂಘ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು, ಐಎಎಸ್, ಕೆಎಎಸ್, ಐಪಿಎಸ್ ಅಧಿಕಾರಿಗಳು, ಪತ್ರಕರ್ತರು, ಮದ್ರಸಾಗಳು, ಮಸೀದಿಗಳು, ಅನಾಥಾಶ್ರಮ, ಆಸ್ಪತ್ರೆಗಳು, ರಾಜಕಾರಣಿಗಳು ಸೇರಿದಂತೆ ಎಲ್ಲರ ದೂರವಾಣಿ ಸಂಖ್ಯೆಗಳನ್ನು ಹೊಂದಿರುವ ಈ ಡೈರೆಕ್ಟರಿಯು ಮಾಹಿತಿಯ ಕಣಜವಾಗಿದೆ ಎಂದು ಅವರು ಹೇಳಿದರು.

ಕಳೆದ 13 ವರ್ಷಗಳಿಂದ ಹೊರ ಬರುತ್ತಿರುವ ಈ ಡೈರೆಕ್ಟರಿಯಲ್ಲಿ ಪ್ರತಿ ವರ್ಷ ಹೊಸ ಹೊಸ ಮಾಹಿತಿಗಳು ಸೇರ್ಪಡೆಯಾಗುತ್ತಿರುತ್ತದೆ. ಇಡೀ ರಾಜ್ಯದಲ್ಲಿ ಸಮುದಾಯಕ್ಕೆ ಸಂಬಂಧಿಸಿದ ಅಗತ್ಯ ಸಂಪರ್ಕ ಮಾಹಿತಿಗಳು ಇದರಲ್ಲಿ ಲಭ್ಯವಿದೆ ಎಂದು ರಹ್ಮಾನ್‌ಖಾನ್ ತಿಳಿಸಿದರು.

ಇಂದು ನಾವು ಸಂಪರ್ಕ ಕ್ರಾಂತಿಯ ಯುಗದಲ್ಲಿದ್ದೇವೆ. ಮನುಷ್ಯನ ಜೀವನ ಕ್ರಮ ಬದಲಾಗಿದ್ದು, ಯಾರ ಬಳಿಯೂ ಸಮಯವಿಲ್ಲದಂತಾಗಿದೆ. ಪ್ರತಿಯೊಂದು ಮಾಹಿತಿಯನ್ನು ಅಂತರ್ಜಾಲ ತಾಣ, ಮೊಬೈಲ್ ಮೂಲಕ ಪಡೆಯಲು ಜನರು ಉತ್ಸುಕರಾಗಿದ್ದಾರೆ. ಆದುದರಿಂದ, ಈ ಡೈರೆಕ್ಟರಿಯನ್ನು ಡಿಜಿಟಲೀಕರಣಗೊಳಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದರು.

ಈ ಬಾರಿಯ ಚುನಾವಣೆಯಲ್ಲಿ ಮುಸ್ಲಿಮರು ಭಾವನಾತ್ಮಕವಾಗಿ ಪಾಲ್ಗೊಂಡಿದ್ದಾರೆ. ಚುನಾವಣೆಯ ಫಲಿತಾಂಶ ಏನೇ ಬರಲಿ, ನಾವು ಅದನ್ನು ಒಪ್ಪಬೇಕು. ಈ ನಾಗರಿಕ ಸಮಾಜದ ಬಹುದೊಡ್ಡ ಭಾಗ ಮುಸ್ಲಿಮರಾಗಿದ್ದಾರೆ. ನಮ್ಮ ದೇಶವು ಹಲವು ಸಮಾಜ, ಸಮುದಾಯಗಳ ಗುಚ್ಛ. ನಮ್ಮ ಸಂವಿಧಾನವು ಈ ಎಲ್ಲ ಸಮಾಜಗಳನ್ನು ಒಂದುಗೂಡಿಸಿದೆ ಎಂದು ರಹ್ಮಾನ್‌ಖಾನ್ ಹೇಳಿದರು.

ಆದರೆ, ಕೆಲವು ದುಷ್ಟ ಶಕ್ತಿಗಳು ಈ ಐಕ್ಯತೆಗೆ ಭಂಗ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ನಾವು ಇಂತಹ ಪ್ರಯತ್ನಗಳಿಗೆ ತಡೆಯೊಡ್ಡುವ ಕೆಲಸ ಮಾಡಬೇಕು. ಈ ಚುನಾವಣೆಯಲ್ಲಿ ಒಂದು ನಿರ್ದಿಷ್ಟ ಪಕ್ಷದ ಮುಖಂಡರು ನಮ್ಮ ಸಮುದಾಯವನ್ನೆ ಗುರಿಯನ್ನಾಗಿಸಿಕೊಂಡು ಭಾಷಣಗಳನ್ನು ಮಾಡಿರುವುದನ್ನು ನಾವು ಕಂಡಿದ್ದೇವೆ ಎಂದು ಅವರು ತಿಳಿಸಿದರು.

ಆದುದರಿಂದ, ಮುಂದಿನ ದಿನಗಳಲ್ಲಿ ನಮ್ಮ ಸಮುದಾಯದ ಜನಪ್ರತಿನಿಧಿಗಳು, ಯಾವುದೇ ತೀರ್ಮಾನಗಳನ್ನು ಕೈಗೊಳ್ಳುವ ಮೂಲಕ ಪರಸ್ಪರ ಚರ್ಚೆ ಮಾಡಿ ಮುಂದುವರೆಯುವುದು ಉತ್ತಮ. ನಮ್ಮ ಸ್ವಾರ್ಥಕ್ಕಾಗಿ ಕೈಗೊಳ್ಳುವ ತೀರ್ಮಾನಗಳು ಭವಿಷ್ಯದಲ್ಲಿ ಸಮುದಾಯದ ಪಾಲಿಗೆ ಮಾರಕವಾಗಬಾರದು ಎಂಬ ಎಚ್ಚರಿಕೆಯನ್ನು ಸದಾ ಗಮನದಲ್ಲಿಟ್ಟುಕೊಳ್ಳಬೇಕು ಎಂದು ರಹ್ಮಾನ್‌ಖಾನ್ ಹೇಳಿದರು.

ನಾವು ನಮ್ಮ ಸ್ವಾರ್ಥವನ್ನು ಬದಿಗಿಟ್ಟು ದೇಶದ ಐಕ್ಯತೆ, ಸಮಗ್ರತೆ ಹಾಗೂ ಸಮುದಾಯದ ಏಳಿಗೆಗಾಗಿ ಶ್ರಮಿಸಬೇಕು. ಯಾವುದೆ ಧರ್ಮ, ಸಮುದಾಯದವರಿರಲಿ, ಈ ಸಮಾಜದ ಭಾಗವಾಗಿಯೆ ಬದುಕಬೇಕು. ಸಮಾಜವನ್ನು ಬಿಟ್ಟು ನಾವು ಬದುಕಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಉಲಮಾ ಹಾಗೂ ರಾಜಕೀಯ ಮುಖಂಡರು ಮಾಡಬೇಕು ಎಂದು ಅವರು ಕರೆ ನೀಡಿದರು.

ಸಾಮಾಜಿಕ ಜಾಲತಾಣಗಳ ಬಳಕೆ ಹೆಚ್ಚಾಗಿದೆ. ಯಾವ ಸಂದೇಶಗಳನ್ನು ನಾವು ಕಳುಹಿಸುತ್ತಿದ್ದೇವೆ ಎಂಬ ಕನಿಷ್ಠ ಅರಿವು ಕೆಲವೊಮ್ಮೆ ನಮಗಿರುವುದಿಲ್ಲ. ಒಂದು ಕ್ಷಣದಲ್ಲಿ ಆದ ಆಚಾರ್ತುಯದಿಂದ ನಾವು ಟೀಕೆಗಳಿಗೆ ಗುರಿಯಾಗಬೇಕಾಗುತ್ತದೆ. ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಸ್ವೇಚ್ಛಾಚಾರ ಮಾಡಬಾರದು ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಅಮೀರೆ ಶರೀಅತ್ ವೌಲಾನ ಸಗೀರ್‌ಅಹ್ಮದ್‌ಖಾನ್, ಡೈಲಿ ಪಾಸ್ಬಾನ್ ಪತ್ರಿಕೆಯ ಪ್ರಧಾನ ಸಂಪಾದಕ ಮುಹಮ್ಮದ್ ಉಬೇದುಲ್ಲಾ ಶರೀಫ್, ರಾಜ್ಯ ವಕ್ಫ್ ಬೋರ್ಡ್ ಮಾಜಿ ಅಧ್ಯಕ್ಷ ಡಾ.ಮುಹಮ್ಮದ್ ಯೂಸುಫ್, ಬೇದಾರೆ ಮಿಲ್ಲತ್ ಪಬ್ಲಿಕೇಷನ್ ಮುಖ್ಯಸ್ಥ ಅಬ್ದುಲ್ ಖಾಲಿಖ್, ಸೈಯ್ಯದ್ ಶಾಹಿದ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News