ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೋರೇಟರ್ ಮೇಲೆ ಹಲ್ಲೆ
ಬೆಂಗಳೂರು, ಮೇ 14: ಬಿಬಿಎಂಪಿಯ ಮಾಜಿ ಕಾರ್ಪೋರೇಟರ್‌ವೊಬ್ಬರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಇಲ್ಲಿನ ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಎನ್‌ಎಂಎಚ್ ಬಳಿ ಬೆಳಗ್ಗೆ 6:30ರ ಸುಮಾರಿಗೆ ಬಿಬಿಎಂಪಿಯ ಮಾವಳ್ಳಿ ವಾರ್ಡ್‌ನ ಮಾಜಿ ಸದಸ್ಯ ವೇದವ್ಯಾಸ ಭಟ್ ಮೇಲೆ ಬೈಕ್‌ನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ ಎನ್ನಲಾಗಿದೆ..
ಪತ್ರಿಕೆಯೊಂದರ ಏಜೆನ್ಸಿ ನಡೆಸುತ್ತಿದ್ದ ವೇದವ್ಯಾಸ ಭಟ್ ಬೆಳಗ್ಗೆ ಪತ್ರಿಕೆಗಳ ಬಗ್ಗೆ ವಿಚಾರಣೆ ಮಾಡಲು ಹೋದಾಗ ಈ ಘಟನೆ ನಡೆದಿದೆ. ಹತ್ತು ವರ್ಷಗಳ ಹಿಂದೆ ಕಾರ್ಪೋರೇಟರ್ ಆಗಿದ್ದ ಇವರು, ಬಿಜೆಪಿಯಲ್ಲಿದ್ದಾರೆ ಎಂದು ತಿಳಿದುಬಂದಿದ್ದು, ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ ಎಂದು ವೇದವ್ಯಾಸ ಭಟ್ ಆರೋಪ ಮಾಡಿದ್ದಾರೆ.
ಸದ್ಯ ವೇದವ್ಯಾಸ ಭಟ್ ಪ್ರಾಣಪಾಯದಿಂದ ಪಾರಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜಕೀಯ ದ್ವೇಷದಿಂದಲೇ ಈ ಹಲ್ಲೆ ನಡೆದಿದೆ ಎಂದು ಶಂಕಿಸಲಾಗಿದ್ದು, ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಡಿಸಿಪಿ ಶರಣಪ್ಪ ತಿಳಿಸಿದ್ದಾರೆ.