ನಿಮ್ಮ ಕೈಗಳು ಈ ಏಳು ಆರೋಗ್ಯ ಸಮಸ್ಯೆಗಳನ್ನು ಸೂಚಿಸುತ್ತವೆ ಗೊತ್ತೇ....?

Update: 2018-05-15 11:12 GMT

ಅದು ಹೃದಯಾಘಾತದ ಅಪಾಯ,ಪೌಷ್ಟಿಕಾಂಶಗಳ ಕೊರತೆ ಅಥವಾ ಥೈರಾಯ್ಡಿ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯವಾಗಿರಲಿ,ನಮ್ಮ ಕೈಗಳು ನಮ್ಮ ಆರೋಗ್ಯದ ಬಗ್ಗೆ ವಿವಿಧ ಸುಳಿವುಗಳನ್ನು ನೀಡುತ್ತವೆ.

ಆಗಾಗ್ಗೆ ಕೈಗಳನ್ನು ಸೂಕ್ಷ್ಮವಾಗಿ ವೀಕ್ಷಿಸುವುದರಿಂದ ನಮ್ಮ ಆರೋಗ್ಯದಲ್ಲಿಯ ಬದಲಾವಣೆಗಳನ್ನು ತಿಳಿದುಕೊಳ್ಳಲು ನೆರವಾಗುತ್ತದೆ. ನಮ್ಮ ಅಂಗೈಗಳು,ಉಗುರುಗಳು,ಬೆವರು ಗ್ರಂಥಿಗಳು ಮತ್ತು ವರ್ಣದ್ರವ್ಯ ಇವು ಸಂಭಾವ್ಯ ಕೊರತೆಗಳು ಮತ್ತು ಆರೋಗ್ಯ ಸ್ಥಿತಿಯ ಕುರಿತು ಭವಿಷ್ಯ ನುಡಿಯುತ್ತವೆ. ಈ ಬಗ್ಗೆ ಮಾಹಿತಿ ಇಲ್ಲಿದೆ........

►ಥೈರಾಯ್ಡ ಕಾರ್ಯ ನಿರ್ವಹಣೆ

ಊದಿಕೊಂಡ ಬೆರಳುಗಳು ಮತ್ತು ತಣ್ಣನೆಯ ಕೈಗಳು ಹೈಪೊಥೈರಾಯ್ಡಿಸಂ ಅಥವಾ ಥೈರಾಯ್ಡಿ ಗ್ರಂಥಿಯ ಕಡಿಮೆ ಕ್ರಿಯಾಶೀಲತೆಯನ್ನು ಮತ್ತು ಕೈಗಳಲ್ಲಿ ಕೆಂಪಾದ ಆಥವಾ ಒಣಚರ್ಮವು ಹೈಪರ್‌ಥೈರಾಯ್ಡಿಸಂ ಅಥವಾ ಥೈರಾಯ್ಡಿ ಗ್ರಂಥಿಯ ಅತಿ ಕಾರ್ಯಶೀಲತೆ,ಹೀಗೆ ಅದರ ಕಾರ್ಯನಿರ್ವಹಣೆಯಲ್ಲಿ ಏರುಪೇರನ್ನ್ನು ಸೂಚಿಸುತ್ತವೆ.

►ಪೌಷ್ಟಿಕಾಂಶ ಮಟ್ಟ

ಕೈಬೆರಳ ಉಗುರುಗಳು ಆಗಾಗ್ಗೆ ಮುರಿಯುತ್ತಿದ್ದರೆ ಹೆಚ್ಚಿನವರು ಅದನ್ನು ಕಡೆಗಣಿಸುತ್ತಾರೆ. ದುರ್ಬಲ ಉಗುರುಗಳು ಸತುವು,ವಿಟಾಮಿನ್ ಎ,ವಿಟಾಮಿನ್ ಸಿ ಅಥವಾ ಬಯೊಟಿನ್ ಕೊರತೆಯನ್ನು ಸೂಚಿಸಬಹುದು. ಅವು ಕ್ಯಾಲ್ಸಿಯಂ ಕೊರತೆ ಅಥವಾ ಹೈಪೊಕ್ಯಾಲ್ಸಿಮಿಯಾವನ್ನೂ ಸೂಚಿಸಬಹುದು. ಉಗುರುಗಳ ತುದಿಗಳು ದುರ್ಬಲವಾಗಿದ್ದರೆ ಅದು ಪ್ರೋಟಿನ್ ಕೊರತೆಯ ಸಂಕೇತವಾಗಿದೆ.

►ಹೈಪರ್‌ಹೈಡ್ರೊಸಿಸ್

 ವ್ಯಾಯಾಮ ಮಾಡುತ್ತಿದ್ದಾಗ ಅಥವಾ ಉದ್ವೇಗಕ್ಕೊಳಗಾದಾಗ ನಮ್ಮ ಕೈಗಳು ಬೆವರುವುದು ನಮ್ಮ ಅನುಭವಕ್ಕೆ ಬರುತ್ತಿರುತ್ತದೆ. ಆದರೆ ಕೆಲವೊಮ್ಮೆ ಯಾವುದೇ ಕಾರಣವಿಲ್ಲದೆ ಕೆಲವೊಮ್ಮೆ ಕೈಗಳು ಬೆವರಿನಲ್ಲಿ ತೊಯ್ದು ಯಾವುದೇ ಕೆಲಸವನ್ನು ಮಾಡಬೇಕಿದ್ದರೂ ಬೆವರನ್ನು ಒರೆಸಿಕೊಳ್ಳಬೇಕಾಗುತ್ತದೆ. ಇದು ಬೆವರು ಗ್ರಂಥಿಗಳ ಅತಿಯಾದ ಕ್ರಿಯಾಶೀಲತೆ ಅಥವಾ ಹೈಪರ್‌ಹೈಡ್ರೊಸಿಸ್ ಅನ್ನು ಸೂಚಿಸುತ್ತದೆ.

►ಹೃದಯದ ಸ್ಥಿತಿ

 ನಮ್ಮ ಮುಷ್ಟಿಯ ಶಕ್ತಿಯು ನಮ್ಮ ಹೃದಯವು ಎಷ್ಟು ಆರೋಗ್ಯಯುತವಾಗಿದೆ ಎನ್ನುವುದನ್ನು ಸೂಚಿಸುತ್ತದೆಯಲ್ಲದೆ ಹೃದಯಾಘಾತ ಅಥವಾ ಮಿದುಳಿನ ಆಘಾತದ ಅಪಾಯವನ್ನು ಲೆಕ್ಕ ಹಾಕಲೂ ನೆರವಾಗುತ್ತದೆ.

►ಪಾರ್ಕಿನ್ಸನ್ ಕಾಯಿಲೆ

ವಿಶ್ರಾಂತ ಸ್ಥಿತಿಯಲ್ಲಿದ್ದಾಗಲೂ ಯಾವುದೇ ಚಟುವಟಿಕೆಗಳನ್ನು ಮಾಡದೆ ಕೈಗಳ ನಡುಗುವಿಕೆಯು ಪಾರ್ಕಿನ್ಸನ್ ಕಾಯಿಲೆಯ ಸಂಕೇತವಾಗಬಹುದು. ಇದು ಹೆಚ್ಚಿನ ಜನರಲ್ಲಿ ಒತ್ತಡ,ಕೆಫೀನ್ ಸೇವನೆ ಅಥವಾ ಯಾವುದಾದರೂ ಚಟುವಟಿಕೆಯಲ್ಲಿ ನಿರತರಾಗಿದ್ದಾಗ ಕಾಣಿಸಕೊಳ್ಳುವ ಕೈಗಳ ನಡುಗುವಿಕೆಗಿಂತ ಭಿನ್ನವಾಗಿರುತ್ತದೆ.

►ಆಮ್ಲಜನಕದ ಮಟ್ಟ

ಅನೀಮಿಯಾ ಅಥವಾ ರಕ್ತಹೀನತೆಯು ಆರೋಗ್ಯಕರ ಕೆಂಪು ರಕ್ತಕಣಗಳ ಪ್ರಮಾಣವನ್ನು ತಗ್ಗಿಸುತ್ತದೆ ಮತ್ತು ಇದರಿಂದಾಗಿ ಶರೀರದ ಅಂಗಾಂಗಗಳಿಗೆ ಸಾಕಷ್ಟು ಆಮ್ಲಜನಕ ಪೂರೈಕೆಯಾಗುವದಿಲ್ಲ. ಕೈಗಳು ಮತ್ತು ಉಗುರಿನ ಬುಡಗಳು ಬಣ್ಣ ಕಳೆದುಕೊಂಡು ಪೇಲವವಾಗಿದ್ದರೆ ಅದು ರಕ್ತಹೀನತೆಯನ್ನು ಸೂಚಿಸಬಹುದು.

►ಗಜಕರ್ಣ ಅಥವಾ ಕಜ್ಜಿ

 ನೀವು ಕೈಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ಮಾಯಿಶ್ಚರೈಸರ್‌ಗಳನ್ನು ಬಳಸುತ್ತಿದ್ದರೂ ಅವು ಒರಟಾಗಿದ್ದರೆ, ಆಗಾಗ ತುರಿಸುತ್ತಿದ್ದರೆ ಮತ್ತು ದದ್ದುಗಳು ಕಾಣಿಸಿಕೊಳ್ಳುತ್ತಿದ್ದರೆ ಅದು ಗಜಕರ್ಣ ಅಥವಾ ಕಜ್ಜಿ ಅಪಾಯದ ಸಂಕೇತವಾಗಿರಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News