5ನೇ ಬಾರಿ ಐಪಿಎಲ್‌ನಲ್ಲಿ 500ಕ್ಕೂ ಅಧಿಕ ರನ್ ಗಳಿಸಿದ ಕೊಹ್ಲಿ

Update: 2018-05-15 18:33 GMT

ಹೊಸದಿಲ್ಲಿ, ಮೇ 15: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ ಈ ವರ್ಷದ ಐಪಿಎಲ್‌ನಲ್ಲೂ ಗಮನಾರ್ಹ ಸಾಧನೆ ಮಾಡಿದ್ದಾರೆ. 29ರ ಹರೆಯದ ಕೊಹ್ಲಿ ಐಪಿಎಲ್‌ನಲ್ಲಿ ಐದನೇ ಬಾರಿ 500 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ. ಕೊಹ್ಲಿ 2011ರ ಆವೃತಿಯ ಐಪಿಎಲ್‌ನಲ್ಲಿ ಮೊದಲ ಬಾರಿ 500ಕ್ಕೂ ಅಧಿಕ ರನ್(557) ಗಳಿಸಿದ್ದರು. 2013 ಹಾಗೂ 2015ರಲ್ಲಿ ಕ್ರಮವಾಗಿ 634 ಹಾಗೂ 505 ರನ್ ಗಳಿಸಿದ್ದಾರೆ.

2016ರ ಆವೃತ್ತಿಯ ಐಪಿಎಲ್‌ನಲ್ಲಿ ಆರ್‌ಸಿಬಿ ಪರ 973 ರನ್ ಗಳಿಸಿ ಅತ್ಯಂತ ಯಶಸ್ವಿ ಬಲಗೈ ದಾಂಡಿಗನೆಂಬ ಕೀರ್ತಿಗೆ ಭಾಜನರಾಗಿದ್ದರು.

  ಆರ್‌ಸಿಬಿ ಇಂದೋರ್‌ನಲ್ಲಿ ಪಂಜಾಬ್ ತಂಡವನ್ನು 10 ವಿಕೆಟ್‌ಗಳಿಂದ ಮಣಿಸುವ ಮೂಲಕ ಸತತ ಎರಡನೇ ಜಯ ದಾಖಲಿಸಿತ್ತು. ಉಮೇಶ್ ಯಾದವ್ ಬೌಲಿಂಗ್ ದಾಳಿಗೆ ಪಂಜಾಬ್‌ನ ಮಧ್ಯಮ ಕ್ರಮಾಂಕದ ದಾಂಡಿಗರು ತತ್ತರಿಸಿದ್ದರು. ಪಂಜಾಬ್ 88 ರನ್‌ಗೆ ಆಲೌಟಾಗಿದ್ದು, ಮೂವರು ದಾಂಡಿಗರು ರನೌಟಾಗಿದ್ದರು. 89 ರನ್ ಚೇಸಿಂಗ್ ಮಾಡಿದ ಆರ್‌ಸಿಬಿ ಸುಲಭ ಜಯ ದಾಖಲಿಸಿತು. ವಿರಾಟ್ ಕೊಹ್ಲಿ(48) ಹಾಗೂ ಪಾರ್ಥಿವ್ ಪಟೇಲ್(44) ಔಟಾಗದೇ ಕ್ರೀಸ್‌ನಲ್ಲಿದ್ದರು. ಈಗೆಲುವಿನ ಮೂಲಕ ಆರ್‌ಸಿಬಿ ರನ್‌ರೇಟ್ ಹೆಚ್ಚಾಗಿತ್ತು. ಪ್ಲೆ-ಆಫ್‌ಗೆ ಅರ್ಹತೆ ಪಡೆಯುವ ಅವಕಾಶವನ್ನೂ ಹೆಚ್ಚಿಸಿದೆ.

ಈ ವರ್ಷದ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡ ಕೊಹ್ಲಿ ಬ್ಯಾಟಿಂಗ್‌ನ್ನು ಹೆಚ್ಚು ಅವಲಂಬಿಸಿದೆ. ಆದರೆ, ಬೌಲಿಂಗ್ ವಿಭಾಗದಲ್ಲಿ ಸಮಸ್ಯೆ ಎದುರಿಸುತ್ತಿದೆ. ಕಳೆದ ಪಂಜಾಬ್ ವಿರುದ್ಧ ಪಂದ್ಯ ಹೊರತುಪಡಿಸಿ ಉಳಿದೆಲ್ಲಾ ಪಂದ್ಯಗಳಲ್ಲಿ ಆರ್‌ಸಿಬಿ ಬೌಲರ್‌ಗಳು ರನ್ ಬಿಟ್ಟುಕೊಟ್ಟಿದ್ದರು. ಪ್ಲೇ-ಆಫ್‌ನಲ್ಲಿ ಸ್ಪರ್ಧೆಯಲ್ಲಿರಬೇಕಾದರೆ ಆರ್‌ಸಿಬಿ ತಂಡ ಉಳಿದೆರಡು ಪಂದ್ಯಗಳನ್ನು ಜಯಿಸಲೇಬೇಕಾಗಿದೆ.

ಬೆಂಗಳೂರು ಫ್ರಾಂಚೈಸಿ ಆರ್‌ಸಿಬಿ ಮೂರು ಬಾರಿ ಐಪಿಎಲ್ ಫೈನಲ್‌ನಲ್ಲಿ ಆಡಿತ್ತು. ಆದರೆ, ಟ್ರೋಫಿ ಎತ್ತಲು ವಿಫಲವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News