ಬಿಜೆಪಿಗಿಂತ ಅಧಿಕ ಮತ ಪಡೆದರೂ ಕಾಂಗ್ರೆಸ್ ಸ್ಥಾನ ಕಳೆದುಕೊಂಡಿದ್ದೇಕೆ?

Update: 2018-05-16 04:04 GMT

ಬೆಂಗಳೂರು, ಮೇ 16: ರಾಜ್ಯ ವಿಧಾನಸಭೆಗೆ 2013ರಲ್ಲಿ ನಡೆದ ಚುನಾವಣೆಯಲ್ಲಿ 122 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್ ಈ ಬಾರಿ ಕೇವಲ 78 ಸ್ಥಾನಗಳನ್ನಷ್ಟೇ ಬಗಲಿಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ವಿವಿಧ ಪಕ್ಷಗಳ ನಡುವಿನ ಮತ ಹಂಚಿಕೆಯ ಪ್ರಮಾಣವನ್ನು ಗಮನಿಸಿದರೆ, ಕಾಂಗ್ರೆಸ್ ಕಳೆದ ಬಾರಿಗಿಂತ ಹೆಚ್ಚು ಮತಗಳನ್ನು ಪಡೆದಿರುವುದು ಕಂಡುಬರುತ್ತದೆ

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಶೇಕಡ 36.6 ಮತಗಳನ್ನು ಪಡೆದಿದ್ದರೆ, ಈ ಬಾರಿ ಪಕ್ಷದ ಮತ ಗಳಿಕೆ ಪ್ರಮಾಣ ಶೇಕಡ 38ಕ್ಕೆ ಹೆಚ್ಚಿದೆ. ಬಿಜೆಪಿಗಿಂತ 26 ಸ್ಥಾನಗಳು ಕಾಂಗ್ರೆಸ್‌ಗೆ ಕಡಿಮೆ ಲಭ್ಯವಾಗಿದ್ದರೂ, ಕಾಂಗ್ರೆಸ್ ಪಕ್ಷ, ಬಿಜೆಪಿಗಿಂತ ಶೇಕಡ ಎರಡರಷ್ಟು ಅಧಿಕ ಮತ ಗಳಿಸಿದೆ. ಐದು ವರ್ಷಗಳ ಹಿಂದೆ ಬಿಜೆಪಿ ಒಡೆದ ಮನೆಯಾಗಿತ್ತು. ಆದರೆ ಈ ಬಾರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮಾಜಿ ಬಂಡಾಯ ನಾಯಕ ಶ್ರೀರಾಮುಲು ಪಕ್ಷದ ತೆಕ್ಕೆಗೆ ಬಂದಿದ್ದರಿಂದ ತನ್ನ ಮತವನ್ನು ಕ್ರೋಢೀಕರಿಸುವಲ್ಲಿ ಬಿಜೆಪಿ ಯಶಸ್ವಿಯಾಗಿರುವುದು ಕಾಂಗ್ರೆಸ್ ಪಾಲಿಗೆ ಮುಳುವಾಯಿತು.

ಕಳೆದ ಬಾರಿ ಬಿಜೆಪಿ ಮತಗಳಿಕೆ ಪ್ರಮಾಣ ಶೇಕಡ 19.9 ಆಗಿತ್ತು. ಲೋಕಸಭಾ ಚುನಾವಣೆಯಲ್ಲಿ ಶೇಕಡ 43.4 ಮತಗಳನ್ನು ಪಡೆದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಶೇಕಡ 36.2ರಷ್ಟು ಮತಗಳನ್ನು ಪಡೆದಿದೆ. ಕಾಂಗ್ರೆಸ್ ಪಕ್ಷ 2013ರ ಚುನಾವಣೆಯಲ್ಲಿ ಶೇಕಡ 36.6 ಮತಗಳನ್ನು ಪಡೆದಿತ್ತು. ಮರುವರ್ಷ ನಡೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಮತ ಪಾಲು ಶೇಕಡ 41.2 ಆಗಿದ್ದು, ಈ ಬಾರಿ ಶೇಕಡ 38ರಷ್ಟು ಮತ ಪಡೆಯುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ. ಜೆಡಿಎಸ್ 2013ರ ಚುನಾವಣೆಯಲ್ಲಿ ಶೇಕಡ 20.2ರಷ್ಟು ಮತ ಪಡೆದಿತ್ತು. ಈ ಬಾರಿ ಶೇಕಡ 19.3ರಷ್ಟು ಮತ ಸೆಳೆದಿದೆ.

ಆದರೆ 2013ರ ಚುನಾವಣೆಯಲ್ಲಿ ಮೂರೂ ಬಣಗಳ ಒಟ್ಟು ಮತ ಪ್ರಮಾಣ ಶೇಕಡ 32 ಆಗಿತ್ತು. ಈ ಬಾರಿ ಶೇಕಡ 4ರಷ್ಟು ಅಲೆ ಬಿಜೆಪಿ ಪರವಾಗಿ ಬೀಸಿದ್ದರಿಂದ ಮತ ಪ್ರಮಾಣ ಶೇಕಡ 36ಕ್ಕೆ ಹೆಚ್ಚಿರುವುದು ಬಿಜೆಪಿಗೆ ಹೆಚ್ಚು ಸ್ಥಾನಗಳನ್ನು ಗೆಲ್ಲಲು ನೆರವಾಯಿತು. ಅಂತೆಯೇ ಬಿಜೆಪಿಯ ಮತಗಳು ಕಾಂಗ್ರೆಸ್‌ನಂತೆ ಚದುರದೇ, ಕೆಲ ಕ್ಷೇತ್ರಗಳಲ್ಲಿ ಕೇಂದ್ರೀಕೃತವಾದದ್ದು ಕೂಡಾ ಆ ಪಕ್ಷಕ್ಕೆ ವರದಾನವಾಯಿತು. ಇವೆಲ್ಲ ಕಾರಣದಿಂದ ಅಧಿಕ ಸ್ಥಾನಗಳು ಬಿಜೆಪಿ ಪಾಲಾದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News