ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ಆಯ್ಕೆ

Update: 2018-05-16 13:04 GMT

ಬೆಂಗಳೂರು, ಮೇ 16: ಜಾತ್ಯತೀತ ಜನತಾದಳದ ಶಾಸಕಾಂಗ ಪಕ್ಷದ ನಾಯಕರಾಗಿ ಕುಮಾರಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಪಕ್ಷದ ಹಿರಿಯ ಶಾಸಕ ಜಿಟಿ ದೇವೇಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಎಚ್‌ಡಿ.ಕುಮಾರಸ್ವಾಮಿ, ನಾಡಿನ ಜನತೆಗೆ ತನ್ನ ಪಕ್ಷದ ಹಾಗೂ ಬಿಎಸ್ಪಿ ಪಕ್ಷದ ಕಾರ್ಯಕರ್ತರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಫಲಿತಾಂಶ ನಮಗೆ ಸಂತೋಷ ನೀಡಿಲ್ಲ. ಪ್ರಧಾನಿ ನರೇಂದ್ರ ಮೋದಿಯವರ ವರ್ಚಸ್ಸಿನಿಂದ ಹಾಗೂ ಶ್ರಮದಿಂದ ಬಿಜೆಪಿ 104 ಸೀಟುಗಳನ್ನು ಗೆದ್ದುಕೊಂಡಿದ್ದಲ್ಲ ಎಂದು ಹೇಳಿದರು..

ದೇಶಾದ್ಯಂತ ಬಿಜೆಪಿ ನೇತೃತ್ವದಲ್ಲಿ ಕೋಮುವಾದ ಶಕ್ತಿಗಳು ನಡೆಸುತ್ತಿರುವ ಅವಾಂತರಗಳನ್ನು ತಪ್ಪಿಸಲು ಹಾಗೂ ಎಚ್.ಡಿ.ದೇವೇಗೌಡ ಅವರ ಜಾತ್ಯತೀತ ತತ್ವಕ್ಕೆ ಮಾನ್ಯತೆ ಕೊಟ್ಟು ಕಾಂಗ್ರೆಸ್ ಸಹಕಾರದಿಂದ ಸರಕಾರ ರಚಿಸಲು ಬಯಸಿದ್ದೇನೆ ಎಂದು ತಿಳಿಸಿದರು.

ಈ ಹಿಂದೆ ಬಿಜೆಪಿ ಜೊತೆ ಸರಕಾರ ರಚಿಸುವ ಮೂಲಕ ನನ್ನ ತಂದೆ ಎಚ್.ಡಿ.ದೇವೇಗೌಡರಿಗೆ ನೋವು ತರಿಸಿದ್ದೇನೆ. ಆ ತಪ್ಪುನ್ನು ತಿದ್ದುಕೊಳ್ಳುವುದಕ್ಕೆ ಮತ್ತೊಂದು ಅವಕಾಶ ಸಿಕ್ಕಿದ್ದು, ಯಾವುದೆ ಕಾರಣಕ್ಕೂ ಬಿಜೆಪಿ ಜೊತೆ ಹೋಗುವುದಿಲ್ಲವೆಂದು ತಿಳಿಸಿದರು.

ಕಾಂಗ್ರೆಸ್‌ಗೆ ಕೃತಜ್ಞತೆ: ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡುವ ಸಲುವಾಗಿ ಕಾಂಗ್ರೆಸ್ ನಾಯಕರು ಜೆಡಿಎಸ್‌ಗೆ ಬೇಷರತ್ ಬೆಂಬಲ ನೀಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞತೆ ಸಲ್ಲಿಸಲಾಗುವುದು. ಜನಪರ ಸರಕಾರ ನಡೆಸುವುದಕ್ಕಾಗಿ ಕಾಂಗ್ರೆಸ್ ಬೆಂಬಲದೊಂದಿಗೆ ಅಧಿಕಾರ ನಡೆಸುವುದು ಸೂಕ್ತವಾಗಿದೆ ಎಂದು ಅವರು ಅಭಿಪ್ರಾಯಿಸಿದರು.

'ನಾನು ಯಾವುದೇ ಬಿಜೆಪಿ ನಾಯಕರನ್ನು ಭೇಟಿಯಾಗಿಲ್ಲ. ಮೈತ್ರಿ ಕುರಿತು ವಿವರ ನೀಡುವುದು ಈಗ ಅಪ್ರಸ್ತುತ. ಯಾವುದೇ ಬೆಳವಣಿಗೆ ಬಗ್ಗೆ ನಾನು ಚಿಂತಿಸುವುದಿಲ್ಲ. ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಾನು ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ನಮಗೆ ಅವಕಾಶ ನೀಡಲು ಕೇಳುತ್ತೇವೆ. ಕಾಂಗ್ರೆಸ್ ನನಗೆ ಬೇಷರತ್ ಬೆಂಬಲ ನೀಡಿದೆ. ರಾಜ್ಯಪಾಲರು ಏನು ಮಾಡುತ್ತಾರೆಂದು ಗೊತ್ತಿಲ್ಲ’’ ಎಂದು ಕುಮಾರಸ್ವಾಮಿ ಹೇಳಿದ್ದಾರೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News