ರಾಜಕೀಯ ಅನಿಶ್ಚಿತತೆಗೆ ಕಾರಣವಾಗಿರುವ ತ್ರಿಶಂಕು ವಿಧಾನಸಭೆ

Update: 2018-05-16 10:27 GMT

ಕರ್ನಾಟಕದಲ್ಲಿ ತ್ರಿಶಂಕು ವಿಧಾನಸಭೆ ಮೂಡಿ ಬರುವುದರೊಂದಿಗೆ ರಾಜಕೀಯ ಅನಿಶ್ಚಿತತೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಗದ್ದುಗೆಯ ಮೇಲೆ ಟವೆಲ್ ಹಾಕಿದ್ದ ಸಿದ್ದರಾಮಯ್ಯ ಮತ್ತು ಬಿ.ಎಸ್.ಯಡಿಯೂರಪ್ಪ ಹೈರಾಣಾಗಿದ್ದಾರೆ. ಬಿಜೆಪಿ ಏಕೈಕ ದೊಡ್ಡಪಕ್ಷವಾಗಿರುವ ಹಿನ್ನೆಲೆಯಲ್ಲಿ ತನ್ನ ಬಳಿ ಅಗತ್ಯ ಸಂಖ್ಯೆಯ ಶಾಸಕರು ಇಲ್ಲದಿದ್ದರೂ ಸರಕಾರ ರಚನೆಗೆ ಹಕ್ಕು ಮಂಡಿಸಿದ ಬೆನ್ನಿಗೇ ಕಾಂಗ್ರೆಸ್ ಮತ್ತು ಜೆಡಿಎಸ್ ಅನುಕೂಲಸಿಂಧು ಮೈತ್ರಿಯನ್ನು ಮಾಡಿಕೊಂಡು ಸಮ್ಮಿಶ್ರ ಸರಕಾರ ರಚನೆಯ ಹಕ್ಕನ್ನು ಮಂಡಿಸಿರುವುದರಿಂದ ಆರಂಭದಲ್ಲಿ ಬಿಜೆಪಿಯ ಮುನ್ನಡೆಯಿಂದ ವಿಜಯೋತ್ಸಾಹದಲ್ಲಿದ್ದ ಪಕ್ಷದ ಕಾರ್ಯಕರ್ತರು ಭ್ರಮನಿರಸನ ಗೊಂಡಿದ್ದಾರೆ. 

ಹೇಗಾದರೂ ಮಾಡಿ ಅಧಿಕಾರಕ್ಕೇರಬೇಕೆಂಬ ಪ್ರಯತ್ನದಲ್ಲಿರುವ ಬಿಜೆಪಿಯೂ ಜೆಡಿಎಸ್ ಬೆಂಬಲಕ್ಕಾಗಿ ಎಲ್ಲ ಕಸರತ್ತುಗಳನ್ನೂ ಮಾಡುತ್ತಿದೆ. ಇದು ಕೈಗೂಡದಿದ್ದರೆ ಮತ್ತೊಮ್ಮೆ 'ಆಪರೇಷನ್ ಕಮಲ' ನಡೆಯುವ ಎಲ್ಲ ಲಕ್ಷಣಗಳೂ ಕಂಡು ಬರುತ್ತಿವೆ.

ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದೆ. 2014ರಲ್ಲಿ ಕೇಂದ್ರದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬಂದ ಬಳಿಕ ಕನಿಷ್ಠ ಎರಡು ರಾಜ್ಯಗಳ(ಗೋವಾ ಮತ್ತು ಮೇಘಾಲಯ) ರಾಜ್ಯಪಾಲರು ಅತಿದೊಡ್ಡ ಪಕ್ಷವನ್ನು ಸರಕಾರ ರಚನೆಗೆ ಆಹ್ವಾನಿಸುವ ಸಂಪ್ರದಾಯವನ್ನು ಕಡೆಗಣಿಸುವ ಮೂಲಕ ಹೊಸ ಪೂರ್ವನಿದರ್ಶನಗಳನ್ನು ಸ್ಥಾಪಿಸಿದ್ದನ್ನು ಜನರು ಮರೆತಿಲ್ಲ.

224 ಸದಸ್ಯಬಲದ ವಿಧಾನಸಭೆಯಲ್ಲಿ 104 ಸ್ಥಾನಗಳೊಡನೆ ಬಿಜೆಪಿಯು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಏಕಪಕ್ಷದ ಆಡಳಿತಕ್ಕೆ ಸ್ಪಷ್ಟ ಜನಾದೇಶ ದೊರಕಿಲ್ಲ. 222 ವಿಧಾನಸಭಾ ಕ್ಷೇತ್ರಗಳಲ್ಲಿ ಮಾತ್ರ ಚುನಾವಣೆಗಳು ನಡೆದಿವೆ. ಕೇವಲ ಮೂವರು ಪಕ್ಷೇತರರು ಗೆದ್ದಿರುವುದರಿಂದ ಇನ್ನಷ್ಟು ಹೆಚ್ಚಿನ ಬೆಂಬಲವನ್ನು ಕ್ರೋಢೀಕರಿಸುವ ಹೆಚ್ಚಿನ ಅವಕಾಶ ಬಿಜೆಪಿಗೆ ಇದ್ದಂತಿಲ್ಲ. ಮೂವರ ಪೈಕಿ ಓರ್ವ ಅಭ್ಯರ್ಥಿ ಬಿಎಸ್‌ಪಿ ಟಿಕೆಟ್‌ನಲ್ಲಿ ಗೆದ್ದಿದ್ದು,ಆ ಪಕ್ಷವು ಜೆಡಿಎಸ್‌ನೊಂದಿಗೆ ಚುನಾವಣಾ ಪೂರ್ವ ಮೈತ್ರಿಯನ್ನು ಮಾಡಿಕೊಂಡಿತ್ತು. ಇನ್ನೋರ್ವ ಅಭ್ಯರ್ಥಿಯನ್ನು ಕಾಂಗ್ರೆಸ್ ಬೆಂಬಲಿಸಿತ್ತು. ಇಂತಹ ಸನ್ನಿವೇಶದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಹಗ್ಗದ ಮೇಲಿನ ನಡಿಗೆಯ ಸವಾಲು ಎದುರಿಸುತ್ತಿದ್ದಾರೆ.

ಹೆಚ್ಚಿನ ಮತದಾನೋತ್ತರ ಸಮೀಕ್ಷೆಗಳು ರಾಜ್ಯದಲ್ಲಿ ತ್ರಿಶಂಕು ವಿಧಾನಸಭೆ ಸೃಷ್ಟಿಯಾಗಲಿದೆ ಎಂದು ಭವಿಷ್ಯ ನುಡಿದಿದ್ದವು. ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶ ನಿರೀಕ್ಷಿತವೇ ಆಗಿದೆ. ಆದರೆ ಜೆಡಿಎಸ್ ತನ್ನ ಗಮನಾರ್ಹ ಗಳಿಕೆ(37+ಬಿಎಸ್‌ಪಿ 1)ಯೊಂದಿಗೆ 'ಕಿಂಗ್‌ಮೇಕರ್' ಆಗುವ ಬದಲು 'ಕಿಂಗ್'ಆಗುವ ಸ್ಥಿತಿ ಸೃಷ್ಟಿಯಾಗಿರುವುದು ಹೆಚ್ಚಿನ ಚುನಾವಣಾ ಪಂಡಿತರನ್ನು ತಬ್ಬಿಬ್ಬುಗೊಳಿಸಿದೆ. ಎಚ್.ಡಿ.ಕುಮಾರಸ್ವಾಮಿ ಅವರು ತನ್ನ ಪಕ್ಷವು 'ಕಿಂಗ್‌ಮೇಕರ್'ಅಲ್ಲ.'ಕಿಂಗ್' ಆಗಲಿದೆ ಎಂದು ಆಗಾಗ್ಗೆ ಹೇಳಿಕೊಂಡಿದ್ದರಾದರೂ ಕಾಂಗ್ರೆಸ್ ಮತ್ತು ಬಿಜೆಪಿ ಇಂತಹ ಸ್ಥಿತಿಯೊಂದು ನಿರ್ಮಾಣವಾಗಲಿದೆ ಎನ್ನುವುದನ್ನು ಯೋಚಿಸಿರಲಿಲ್ಲ ಮತ್ತು ಈಗ ಜೆಡಿಎಸ್‌ನೊಂದಿಗೆ ಅನಿವಾರ್ಯ ಮೈತ್ರಿ ಮಾಡಿಕೊಳ್ಳಲು ಪರಸ್ಪರ ಪೈಪೋಟಿಗಿಳಿದಿವೆ.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರವನ್ನು ರಚಿಸಲು ಈಗ ನಡೆದಿರುವ ಪ್ರಯತ್ನಗಳ ಅಂತಿಮ ಫಲಶ್ರುತಿ ಏನೇ ಆಗಿರಬಹುದು,ಆದರೆ ಅಂತಹ ಸರಕಾರದ ಸಂಭಾವ್ಯ ಪಾಲುದಾರರು ಒತ್ತಡಗಳು, ಸೆಳೆತಗಳು, ಉದ್ವಿಗ್ನತೆ,ಬಿರುಕುಗಳು,ಸಂಘರ್ಷಗಳು ಮತ್ತು ಪ್ರತಿಷ್ಠೆಗಳ ಪೈಪೋಟಿ ಇವುಗಳನ್ನು ಎದುರಿಸಲು ಹಿಮಾಲಯದಷ್ಟು ಸಹನೆಯನ್ನು ಹೊಂದಿರುವುದು ಅಗತ್ಯವಾಗುತ್ತದೆ. ಪರಸ್ಪರರ ನಡುವಿನ ಮೈತ್ರಿಯನ್ನು ಮತ್ತು ಸಮ್ಮಿಶ್ರ ಸರಕಾರವನ್ನು ಕನಿಷ್ಠ 2019ರ ಲೋಕಸಭಾ ಚುನಾವಣೆಯವರೆಗಾದರೂ ಉಳಿಸಿಕೊಳ್ಳುವುದು ಬಹುದೊಡ್ಡ ಸವಾಲು ಆಗಿ ಕಾಡಲಿದೆ.

2004ರ ಚುನಾವಣೆಯಲ್ಲಿಯೂ ರಾಜ್ಯದ ಮತದಾರರು ಇಂತಹುದೇ ಅಸ್ಪಷ್ಟ ತೀರ್ಪನ್ನು ನೀಡಿದ್ದರು. ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ರಚಿಸಿ,ಮೊದಲೇ ಒಪ್ಪಿಕೊಂಡಂತೆ ತನ್ನ ಪಾಲಿನ ಅಧಿಕಾರಾವಧಿಯನ್ನು ಪೂರ್ಣಗೊಳಿಸಿದ ಬಳಿಕ ಜೆಡಿಎಸ್ ಬಿಜೆಪಿಗೆ ಅಧಿಕಾರವನ್ನು ಬಿಟ್ಟು ಕೊಡದೆ ಮಾತಿಗೆ ತಪ್ಪಿ ಸದನವು ವಿಸರ್ಜನೆಗೊಳ್ಳುವುದರೊಂದಿಗೆ ರಾಜ್ಯವು ರಾಜಕೀಯ ಅಸ್ಥಿರತೆಗೆ ಸಾಕ್ಷಿಯಾಗಿತ್ತು.

ಕರ್ನಾಟಕದಲ್ಲಿ ಬಿಜೆಪಿಯು ಅಧಿಕಾರಕ್ಕೆ ಬರುವುದನ್ನು ಶತಾಯಗತಾಯ ತಪ್ಪಿಸಲು ಕಾಂಗ್ರೆಸ್ ಬಯಸಿರುವುದರಿಂದ ಜೆಡಿಎಸ್ ಸರಕಾರವನ್ನು ಬೆಂಬಲಿಸಬೇಕಾದ ಅದರ ಅನಿವಾರ್ಯತೆ ಯಾರಿಗೂ ಅರ್ಥವಾಗುತ್ತದೆ. ಆದರೆ ಇದಕ್ಕಾಗಿ ಇಷ್ಟು ದಿನಗಳ ಕಾಲ ತಾನೇ ಟೀಕಿಸುತ್ತ ಬಂದಿದ್ದ ಎದುರಾಳಿಗೆ ಮುಖ್ಯಮಂತ್ರಿ ಸ್ಥಾನವನ್ನು ಬಿಟ್ಟುಕೊಟ್ಟು ದುಬಾರಿ ಬೆಲೆಯನ್ನು ತೆರಬೇಕಾಗಿದೆ. ಅಲ್ಲದೆ ಜೆಡಿಎಸ್ ಗೆಲುವಿನಲ್ಲಿ ಕಾವೇರಿ ನದಿ ಪಾತ್ರದ ಜಿಲ್ಲೆಗಳ ಹೆಚ್ಚಿನ ಕೊಡುಗೆಯಿರುವುದರಿಂಂದ ಹಳೆ ಮೈಸೂರು ಭಾಗದಲ್ಲಿ ತನ್ನ ಪ್ರಭಾವವಿರುವ ಸ್ಥಳಗಳಲ್ಲಿ ಜೆಡಿಎಸ್ ಬಲಗೊಳ್ಳಲು ಅವಕಾಶ ಮಾಡಿಕೊಟ್ಟು ತನ್ನನ್ನೇ ತಾನು ದುರ್ಬಲಗೊಳಿಸಿಕೊಳ್ಳುವ ಅನಿವಾರ್ಯ ಸಂಕಟವನ್ನೂ ಅದು ಎದುರಿಸಬೇಕಾಗುತ್ತದೆ. ಮೈಸೂರು ನಗರ ವ್ಯಾಪ್ತಿಯ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯನವರ ಸೋಲು ಇದಕ್ಕೆ ಸಂಕೇತವಾಗಿದೆ. ರಾಜ್ಯದ ದಕ್ಷಿಣದ ಜಿಲ್ಲೆಗಳಲ್ಲಿ ತನ್ನ ಬುನಾದಿಯನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ನ ಪ್ರಯತ್ನ ಕಾಂಗ್ರೆಸ್‌ಗೆ ಪ್ರತಿಕೂಲವನ್ನುಂಟು ಮಾಡಲಿದೆ.

ಲಿಂಗಾಯತ ಸಮುದಾಯಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿರುವುದು ಕಾಂಗ್ರೆಸ್‌ಗೆ ಹೆಚ್ಚಿನ ಲಾಭವನ್ನು ತಂದಿಲ್ಲ ಎನ್ನುವುದು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿಜೆಪಿಯ ಹೆಚ್ಚಿನ ಗೆಲುವುಗಳಿಂದ ಸ್ಪಷ್ಟವಾಗಿದೆ. ಲಿಂಗಾಯತ ಸಮುದಾಯವು ಬಿಜೆಪಿಯನ್ನು ಮತ್ತು ತನ್ನ ನಾಯಕ ಯಡಿಯೂರಪ್ಪ ಅವರಿಗೆ ಬಲವಾಗಿ ಬೆಂಬಲ ನೀಡಿರುವಂತಿದೆ.

ಇಂತಹ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷವೇನೋ ಸರಕಾರ ರಚನೆಯಿಂದ ಬಿಜೆಪಿಯನ್ನು ದೂರವಿಡಲು ಯಶಸ್ವಿಯಾಗಬಹುದು,ಆದರೆ ಇದಕ್ಕಾಗ ಅದು ತನ್ನ ಮತ ಬುನಾದಿಗೆ ಹಾನಿಯಾಗುವ ಅಪಾಯವನ್ನು ಎದುರಿಸಬೇಕಾಗಬಹುದು. ಆದರೆ ಕಾಂಗ್ರೆಸ್ ಈಗ ಜೆಡಿಎಸ್‌ಗೆ ನೀಡಲು ಬಯಸಿರುವ ಬೆಂಬಲವು 2019ರ ಲೋಕಸಭಾ ಚುನಾವಣೆಗೆ ಮೊದಲು ಚುನಾವಣಾ ಮೈತ್ರಿಯಾಗಿ ಪರಿವರ್ತನೆಗೊಂಡರೆ ಈ ನಡೆಯು ಅದಕ್ಕೆ ಲಾಭದಾಯಕವಾಗಬಹುದು. ಆದರೆ ರಾಜಭವನದಿಂದ ಯಾವ ನಿರ್ಧಾರ ಹೊರಬೀಳುತ್ತದೆ ಎನ್ನುವುದರ ಮೇಲೆ ಇದೆಲ್ಲ ಅವಲಂಬಿಸಿದೆ.

ರಾಜ್ಯದಲ್ಲಿ ಮೂರೂ ಪ್ರಮುಖ ಪಕ್ಷಗಳು ಪರಸ್ಪರ ಬದ್ಧವೈರಿಗಳಾಗಿರುವುದರಿಂದ ಇಲ್ಲಿ ಯಾವುದೇ ಮೈತ್ರಿ ಸ್ಥಿರವಾಗಿಲ್ಲ. ಆದರೆ ಇದೆಲ್ಲಕ್ಕಿಂತ ಹೆಚ್ಚಾಗಿ ಈ ಪಕ್ಷಗಳ ನಾಯಕರ ಮಹಾ ಪ್ರತಿಷ್ಠೆಗಳು ಅವುಗಳ ನಡುವಿನ ಮೈತ್ರಿಗೆ ದೊಡ್ಡ ಅಡ್ಡಿಯನ್ನು ನಿರ್ಮಿಸಿರುವುದು ಸುಳ್ಳಲ್ಲ.

Writer - ಎಂ.ಎ.ಸಿರಾಜ್

contributor

Editor - ಎಂ.ಎ.ಸಿರಾಜ್

contributor

Similar News