×
Ad

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಪೈಪೋಟಿ

Update: 2018-05-16 19:42 IST

ಬೆಂಗಳೂರು, ಮೇ 16: ರಾಜ್ಯದಲ್ಲಿ ಅತಂತ್ರ ವಿಧಾನಸಭೆ ರಚನೆಯಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯ ಕಸರತ್ತು ಒಂದೆಡೆಯಾದರೆ, ಮತ್ತೊಂದೆಡೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ತೀವ್ರ ಪೈಪೋಟಿ ಎದುರಾಗಿದೆ.

ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವವರು ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರಕಾರದಲ್ಲಿ ಉಪ ಮುಖ್ಯಮಂತ್ರಿಯಾಗುವ ಸಾಧ್ಯತೆಯಿರುವುದರಿಂದ ಹಿರಿಯ ಮುಖಂಡರ ನಡುವೆ ಸ್ಪರ್ಧೆ ಏರ್ಪಟ್ಟಿದ್ದು, ತಮ್ಮ ಮಟ್ಟದಲ್ಲಿ ಸಾಧ್ಯವಾದಷ್ಟು ಲಾಬಿಯನ್ನು ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಹಂಗಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪರಾಭವಗೊಂಡಿರುವ ಹಿನ್ನೆಲೆಯಲ್ಲಿ ಅವರು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆಯಾಗುವ ಸಾಧ್ಯತೆಗಳಿಲ್ಲ. ಆದುದರಿಂದ, ಈಗ ಸ್ಪರ್ಧೆಯಲ್ಲಿ ಪ್ರಮುಖವಾಗಿ ಹಿರಿಯ ಮುಖಂಡರಾದ ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ, ರಾಮಲಿಂಗಾರೆಡ್ಡಿ, ಎಚ್.ಕೆ.ಪಾಟೀಲ್, ಎಂ.ಬಿ.ಪಾಟೀಲ್ ಮುಂಚೂಣಿಯಲ್ಲಿದ್ದಾರೆ.

ಇಂದು ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆದಿದ್ದರೂ, ಜೆಡಿಎಸ್ ಜೊತೆ ಸೇರಿ ಸರಕಾರ ರಚನೆ ಮಾಡಬೇಕಾದ ಅನಿವಾರ್ಯತೆ ಕುರಿತು ಚರ್ಚೆ ನಡೆಸಲಾಗಿದೆಯೆ ಹೊರತು, ಶಾಸಕಾಂಗ ಪಕ್ಷದ ನಾಯಕನ ಆಯ್ಕೆ ಸಂಬಂಧ ಯಾವುದೆ ಚರ್ಚೆ ನಡೆಸದಿರುವಂತೆ ಹೈಕಮಾಂಡ್ ಸೂಚನೆ ನೀಡಿದೆ ಎನ್ನಲಾಗಿದೆ.

ಬಿಜೆಪಿ ಪಕ್ಷವು ಯಡಿಯೂರಪ್ಪ ಹಾಗೂ ಜೆಡಿಎಸ್ ಪಕ್ಷವು ಎಚ್.ಡಿ.ಕುಮಾರಸ್ವಾಮಿಯನ್ನು ತನ್ನ ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿವೆ. ಆದರೆ, ಕಾಂಗ್ರೆಸ್‌ನಲ್ಲಿ ಮಾತ್ರ ಪೈಪೋಟಿ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News