ಶಾಸಕರ ಖರೀದಿಸುವ ಪ್ರಕ್ರಿಯೆ ಪ್ರಜಾಪ್ರಭುತ್ವ ವಿರೋಧಿ: ಹುಚ್ಚ ವೆಂಕಟ್

Update: 2018-05-16 15:12 GMT

ಬೆಂಗಳೂರು, ಮೇ 16: ಹೆಚ್ಚು ಶಾಸಕ ಸ್ಥಾನಗಳನ್ನು ಪಡೆದಿದ್ದಾರೆ ಎಂಬ ಕಾರಣಕ್ಕೆ ಬಿಜೆಪಿ ಶಾಸಕರನ್ನು ಖರೀದಿ ಮಾಡಲು ಮುಂದಾಗಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ವಿರೋಧಿ ನೀತಿಯಾಗಿದೆ ಎಂದು ನಟ ಹುಚ್ಚ ವೆಂಕಟ್ ದೂರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲರು ಬಹುಮತವಿರುವವರಿಗೆ ಸರಕಾರ ರಚನೆ ಮಾಡಲು ಅವಕಾಶ ನೀಡಬೇಕು. ಅದನ್ನು ಬಿಟ್ಟು ಅನಗತ್ಯವಾಗಿ ಬಿಜೆಪಿಗೆ ಕಾಲಾವಕಾಶ ನೀಡುವ ಮೂಲಕ ಕುದುರೆ ವ್ಯಾಪಾರಕ್ಕೆ ಅವಕಾಶ ನೀಡುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿ ಕುದುರೆ ವ್ಯಾಪಾರದಿಂದ ಶಾಸಕರನ್ನು ಖರೀದಿ ಮಾಡಿದರೆ ಅವರ ಕೈಯಲ್ಲಿ ರಾಜೀನಾಮೆ ಕೊಡಿಸಿ, ಮರು ಚುನಾವಣೆ ಮಾಡಬೇಕು. ಅದಕ್ಕಾಗಿ ಸಾರ್ವಜನಿಕ ತೆರಿಗೆ ಹಣವನ್ನು ಖರ್ಚು ಮಾಡಬೇಕಾಗುತ್ತದೆ. ಅಲ್ಲದೆ, ಕೆಟ್ಟ ರಾಜಕೀಯಕ್ಕೆ ನಾಂದಿ ಹಾಡಿದಂತಾಗುತ್ತದೆ. ಆದುದರಿಂದಾಗಿ, ರಾಜ್ಯಪಾಲರು ಬಹುಮತಕ್ಕೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಪಕ್ಷಾಂತರ ಮಾಡುವ ಶಾಸಕರು ನಿಮಗೆ ಮತ ಹಾಕಿದ ಜನರನ್ನು ನೆನಸಿಕೊಳ್ಳಬೇಕು. ನಿಮ್ಮ ಮೇಲೆ ನಂಬಿಕೆಯಿಟ್ಟು ಮತ ಹಾಕಿರುತ್ತಾರೆ. ನೀವು ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹೋದರೆ ಜನರಿಗೆ ಮೋಸ ಮಾಡಿದಂತಾಗುತ್ತದೆ. ಅಲ್ಲದೆ, ಹಣಕ್ಕಾಗಿ ನಿಮ್ಮನ್ನು ನೀವು ಮಾರಿಕೊಳ್ಳಬಾರದು ಎಂದು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News