ಪದವೀಧರ, ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆ ಅಧಿಸೂಚನೆ

Update: 2018-05-16 15:14 GMT

ಬೆಂಗಳೂರು, ಮೇ 16: ರಾಜ್ಯ ವಿಧಾನಸಭಾ ಚುನಾವಣೆ ಮುಗಿಯುತ್ತಿದ್ದಂತೆ ವಿಧಾನಪರಿಷತ್ತಿನ ಪದವೀಧರರ ಹಾಗೂ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಅಧಿಸೂಚನೆ ಹೊರಬಿದ್ದಿದ್ದು, ನಾಮಪತ್ರ ಸಲ್ಲಿಕೆ ಮಾಡಲು ಮೇ 22 ರಂದು ಕೊನೆ ದಿನಾಂಕ ನಿಗದಿ ಮಾಡಲಾಗಿದೆ.

ಚುನಾವಣೆಯಲ್ಲಿ ಸ್ಪರ್ಧೆ ಮಾಡಬಯಸುವ ಅಭ್ಯರ್ಥಿಗಳು ಬೆಂಗಳೂರಿನ ಪ್ರಾದೇಶಿಕ ಆಯುಕ್ತರ ಕಚೇರಿಯಿಂದ ನಾಮಪತ್ರ ನಮೂನೆ ಪಡೆದುಕೊಂಡು ಮೇ 22 ರೊಳಗೆ ಸಲ್ಲಿಸಬಹುದಾಗಿದೆ. ನಾಮಪತ್ರವನ್ನು ಮೇ 23 ರಂದು ಪರಿಶೀಲನೆ ನಡೆಸಲಿದ್ದು, ಮೇ 25 ರೊಳಗೆ ಉಮೇದುವಾರಿಕೆ ಹಿಂಪಡೆಯಲು ಅವಕಾಶ ನೀಡಲಾಗಿದೆ.

ಜೂ.8 ರಂದು ಬೆಳಿಗ್ಗೆ 8 ರಿಂದ 4 ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಜೂ.17 ರಂದು ಮತ ಎಣಿಕೆ ನಡೆಯಲಿದ್ದು, ಎಲ್ಲ ಚುನಾವಣೆ ಪ್ರಕ್ರಿಯೆಗಳು ಜೂ.15 ರಂದು ಪೂರ್ಣಗೊಳ್ಳುತ್ತದೆ. ಬೆಂಗಳೂರು ಪದವೀಧರ ಕ್ಷೇತ್ರ ವ್ಯಾಪ್ತಿಯಲ್ಲಿ ಬಿಬಿಎಂಪಿ, ಬೆಂಗಳೂರು ನಗರ ಜಿಲ್ಲೆ, ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳು ಒಳಗೊಂಡಿವೆ. ಆಗ್ನೇಯ ಶಿಕ್ಷಕರ ವ್ಯಾಪ್ತಿಗೆ ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳು ಸೇರಿವೆ.

ಬೆಂಗಳೂರು ಪದವೀಧರ ಕ್ಷೇತ್ರದ ಅಭ್ಯರ್ಥಿಗಳು ಹಾಗೂ ಆಗ್ನೇಯ ಕ್ಷೇತ್ರದ ಅಭ್ಯರ್ಥಿಗಳು ಆಯಾ ಕ್ಷೇತ್ರದ ಕಚೇರಿಗಳಲ್ಲಿ ಅರ್ಜಿ ಸಲ್ಲಿಸಬೇಕು. ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಚುನಾವಣಾಧಿಕಾರಿಗಳ ಕಚೇರಿಗೆ ಅಭ್ಯರ್ಥಿ ಹಾಗೂ ಇತರೆ ನಾಲ್ಕು ಜನ ಸೂಚಕರು ಸೇರಿದಂತೆ ಐದು ಜನರು ಪ್ರವೇಶಿಸಲು ಅವಕಾಶವಿರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News