ಬೆಂಗಳೂರು: ಬಹುಮತವುಳ್ಳವರಿಗೆ ಸರಕಾರ ರಚನೆಗೆ ಅವಕಾಶ ನೀಡಲು ಆಗ್ರಹಿಸಿ ಪ್ರತಿಭಟನೆ

Update: 2018-05-16 17:27 GMT

ಬೆಂಗಳೂರು, ಮೇ 16: ಸಂವಿಧಾನಾತ್ಮಕವಾಗಿ ಬಹುಮತ ಹೊಂದಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ಸರಕಾರ ರಚನೆ ಮಾಡಲು ರಾಜ್ಯಪಾಲರು ಅವಕಾಶ ನೀಡಬೇಕು ಎಂದು ಆಗ್ರಹಿಸಿ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ನಗರದ ಪುರಭವನ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವೆುತ್ರಿಗೆ ಒಪ್ಪಿಕೊಂಡಿದ್ದು, ಸರಕಾರದ ರಚನೆ ಮಾಡಲು ಅಗತ್ಯವಾದ ಬಹುಮತ ಪಡೆದುಕೊಂಡಿದ್ದಾರೆ. ಆದರೆ, ರಾಜ್ಯಪಾಲರು ಸರಕಾರ ರಚನೆಗೆ ಆಹ್ವಾನಿಸದೇ ಪ್ರಜಾತಂತ್ರ ವ್ಯವಸ್ಥೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು, ಚುನಾವಣೆಗೂ ಮೊದಲೇ ಬಿಜೆಪಿಯ ಕೇಂದ್ರ ಸಚಿವ ಅನಂತ್‌ಕುಮಾರ್ ಹೆಗಡೆ ನಾವು ಸಂವಿಧಾನ ಬದಲಾವಣೆ ಮಾಡಲು ಬಂದಿದ್ದೇವೆ ಎಂಬ ಹೇಳಿಕೆ, ಇದೀಗ ಫಲಿತಾಂಶದ ನಂತರದಲ್ಲಿ ನಡೆಯುತ್ತಿರುವ ಬೆಳವಣಿಗೆಯಲ್ಲಿ ಕಂಡು ಬರುತ್ತಿದೆ ಎಂದು ಹೇಳಿದರು.

ಯಾವುದೇ ಚುನಾವಣೆಯ ನಂತರ ಸ್ಪಷ್ಟ ಬಹುಮತ ಸಿಗದಿದ್ದ ಪಕ್ಷದಲ್ಲಿ ಮೈತ್ರಿ ಸರಕಾರ ರಚನೆ ಮಾಡಲು ಅವಕಾಶವಿದೆ. ದೊಡ್ಡ ಪಕ್ಷ ಯಾವುದು ಎಂಬುದು ಮುಖ್ಯವಲ್ಲ. ಯಾರಿಗೆ ಹೆಚ್ಚು ಬಹುಮತವಿದೆ ಎಂಬುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರಕಾರ ರಚಿಸಲು ಸಂಪೂರ್ಣ ಅಧಿಕಾರವಿದೆ ಎಂದ ಅವರು, ಗೋವಾ, ಮೇಘಾಲಯ, ನಾಗಲ್ಯಾಂಡ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಮೈತ್ರಿ ಸರಕಾರ ನಡೆಸುತ್ತಿದೆ. ಅಲ್ಲದೆ, ಮೈತ್ರಿ ಸರಕಾರ ನಡೆಸಲು ನ್ಯಾಯಾಲಯದ ತೀರ್ಪು ಇದೆ. ಆದರೆ, ರಾಜ್ಯದಲ್ಲಿರುವ ರಾಜ್ಯಪಾಲರು ಬಿಜೆಪಿ ಪಕ್ಷದ ಏಜೆಂಟ್ ಆಗಿ ವರ್ತಿಸುತ್ತಿದ್ದಾರೆ ಎಂದು ದೂರಿದರು.

ಬಿಜೆಪಿ ಮತ್ತು ಸಂಘಪರಿವಾರಕ್ಕೆ ಅವರ ಅಜೆಂಡಾವನ್ನು ಜಾರಿ ಮಾಡಲು ಕಾಂಗ್ರೆಸ್ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರ ಅಡ್ಡಿಯಾಗುತ್ತದೆ ಎಂಬ ಕಾರಣದಿಂದ ಕೇಂದ್ರ ಸರಕಾರ ಪರೋಕ್ಷವಾಗಿ ಸಂವಿಧಾನವನ್ನು ದುರ್ಬಲ ಮಾಡುತ್ತಾ, ಸಂವಿಧಾನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದಾರೆ. ಇದರ ವಿರುದ್ಧ ಜಾತ್ಯತೀತರೆಲ್ಲ ಸಂಘಟಿತರಾಗಬೇಕಿದೆ ಎಂದು ಅವರು ಕರೆ ನೀಡಿದರು.

ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ವಿಮಲಾ ಮಾತನಾಡಿ, ಪ್ರಜಾಪ್ರಭುತ್ವ ದೇಶದಲ್ಲಿಂದು ಬಿಜೆಪಿ ಪ್ರಜಾಪ್ರಭುತ್ವ ಹಾಗೂ ಪ್ರಜಾತಂತ್ರವನ್ನು ಕಗ್ಗೂಲೆ ಮಾಡುತ್ತಿದೆ. ಸಂವಿಧಾನವನ್ನು ನಾಶ ಮಾಡಲು ಮುಂದಾಗಿದ್ದು, ಅದರ ಭಾಗವಾಗಿ ಸಂವಿಧಾನ ಬದಲಿಸುತ್ತೇವೆ ಎಂದಿದ್ದವರು ಈಗ ಅಧಿಕಾರಕ್ಕಾಗಿ ಪೈಪೋಟಿ ನಡೆಸುತ್ತಿದ್ದಾರೆ ಎಂದು ಹೇಳಿದರು.

ಸಂಘಟನೆ ಮುಖಂಡ ಮಂಜುನಾಥ್ ಮಾತನಾಡಿ, ಜನತಂತ್ರ ವ್ಯವಸ್ಥೆ ಆತಂಕದ ಸ್ಥಿತಿಯಲ್ಲಿದ್ದು, ಪ್ರಜಾಪ್ರಭುತ್ವದ ಮೇಲೆ ಘೋರವಾದ ದಾಳಿ ನಡೆಯುತ್ತಿದೆ. ಕದ್ದುಮುಚ್ಚಿ ಪ್ರಜಾತಂತ್ರ ದಿವಾಳಿಯಾಗುತ್ತಿದೆ. ಈ ಸಂದರ್ಭದಲ್ಲಿ ಬಿಜೆಪಿಯನ್ನು ಮಟ್ಟ ಹಾಕುವ ರೀತಿಯಲ್ಲಿ ಜನ ಚಳವಳಿ ಕಟ್ಟಬೇಕಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ಕೋಮುವಾದಿಗಳಿಗೆ ಅಧಿಕಾರ ನೀಡಬಾರದು ಎಂದು ಬಲಿಷ್ಠವಾದ ಹೋರಾಟ ರೂಪಿಸಬೇಕು. ರಾಜ್ಯದಲ್ಲಿ ಮೌಲ್ಯಯುತವಾದ ಸರಕಾರ ರೂಪಗೊಳ್ಳಬೇಕು ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಡಾ.ವಿಜಯಮ್ಮ, ಮಾಜಿ ಸಚಿವೆ ಬಿ.ಟಿ.ಲಲಿತಾನಾಯಕ್, ಕೋಮು ಸೌಹಾರ್ದ ವೇದಿಕೆಯ ಎಲ್.ಅಶೋಕ್, ಸಿಪಿಎಂ ಮುಖಂಡರಾದ ಕೆ.ಪ್ರಕಾಶ್, ಮೀನಾಕ್ಷಿ ಸುಂದರಂ, ಜನವಾದಿ ಮಹಿಳಾ ಸಂಘಟನೆಯ ಕೆ.ಎಸ್.ಲಕ್ಷ್ಮಿ, ಜನಶಕ್ತಿಯ ಗೌರಿ, ಕೆವಿಎಸ್‌ನ ಸಂಜಯ್ ಸೇರಿದಂತೆ ವಿವಿಧ ಪ್ರಗತಿಪರ ಸಂಘಟನೆಯ ಕಾರ್ಯಕರ್ತರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News