×
Ad

ನರೇಂದ್ರ ಮೋದಿಯ ದ್ವಿಮುಖ ನೀತಿ ಬಯಲು: ಎಚ್.ಡಿ.ಕುಮಾರಸ್ವಾಮಿ

Update: 2018-05-17 17:04 IST

ಬೆಂಗಳೂರು, ಮೇ 17: ಪ್ರಧಾನಿ ನರೇಂದ್ರಮೋದಿ ರಾಜ್ಯದಲ್ಲಿ ಅತ್ಯಂತ ಕೆಟ್ಟ ರಾಜಕಾರಣಕ್ಕೆ ನಾಂದಿ ಹಾಡಿದ್ದಾರೆ. ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸುವುದಾಗಿ ಹೇಳುವ ಅವರ ದ್ವಿಮುಖ ನೀತಿ ಹಾಗೂ ಗೋಮುಖ ವ್ಯಾಘ್ರತನ ಬಟಾ ಬಯಲಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಸರಕಾರ ರಚನೆಗೆ ಬಿಜೆಪಿಗೆ ಆಹ್ವಾನ ನೀಡಿರುವ ರಾಜ್ಯಪಾಲರ ನಿರ್ಣಯವನ್ನು ಖಂಡಿಸಿ ಗುರುವಾರ ವಿಧಾನಸೌಧ ಹಾಗೂ ವಿಕಾಸಸೌಧದ ನಡುವೆ ಇರುವ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರು ನಡೆಸಿದ ಪ್ರತಿಭಟನಾ ಧರಣಿಯಲ್ಲಿ ಪಾಲ್ಗೊಂಡಿದ್ದ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಯಡಿಯೂರಪ್ಪಗೆ ಬಹುಮತ ಸಾಬೀತುಪಡಿಸಲು ರಾಜ್ಯಪಾಲರು 15 ದಿನ ಕಾಲಾವಕಾಶ ನೀಡಿರುವುದು ಕೆಟ್ಟ ರಾಜಕೀಯ ಪರಂಪರೆಗೆ ನಾಂದಿಯಾಗಿದೆ. ದೇಶವನ್ನು ಭ್ರಷ್ಟಾಚಾರದ ಸೋಂಕಿನಿಂದ ಶುಚಿಗೊಳಿಸುತ್ತೇವೆ ಎಂದು ಹೇಳುವವರ ದ್ವಿಮುಖ ನೀತಿ ಈಗ ಜನರಿಗೆ ಅರ್ಥವಾಗಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

2008-09ರಲ್ಲಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲು ಪ್ರತಿಯೊಬ್ಬ ಶಾಸಕರಿಗೆ 25-30 ಕೋಟಿ ರೂ.ನೀಡಿ ರಾಜೀನಾಮೆ ಕೊಡಿಸಿ ಆಪರೇಷನ್ ಕಮಲ ಮಾಡಿದ್ದರು. ಈ ಬಾರಿಯೂ ಅದೇ ತಂತ್ರಗಾರಿಕೆ ಅನುಸರಿಸಲು ಬಿಜೆಪಿ ಮುಂದಾಗಿದೆ ಎಂದು ಕುಮಾರಸ್ವಾಮಿ ದೂರಿದರು.

ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷದ ಯಾವ ಶಾಸಕರೂ ಬಿಜೆಪಿಯವರು ಲೂಟಿ ಮಾಡಿರುವ ಹಣವನ್ನು ಸ್ವೀಕರಿಸುವುದಿಲ್ಲ. ಬಿಜೆಪಿಯಲ್ಲಿ ಯಡಿಯೂರಪ್ಪ ನಾಯಕತ್ವದಿಂದ ಬೇಸತ್ತ 12ಕ್ಕೂ ಹೆಚ್ಚು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ಸಿದ್ಧರಿದ್ದಾರೆ ಎಂದು ಅವರು ಹೇಳಿದರು.

ಪ್ರಮಾಣ ವಚನ ಸ್ವೀಕಾರಕ್ಕೆ ರಾಜ್ಯಪಾಲರು, ಯಡಿಯೂರಪ್ಪಗೆ ಆಹ್ವಾನ ನೀಡಿರುವುದು ಸಂವಿಧಾನ ವಿರೋಧಿಯಾಗಿದೆ. ಅವರು ಪ್ರಮಾಣ ವಚನ ಸ್ವೀಕರಿಸಿ ಮುಖ್ಯಮಂತ್ರಿ ಏನೋ ಆಗಿದ್ದಾರೆ. ಆದರೆ, ಸದನದಲ್ಲಿ ಬಹುಮತವನ್ನು ಹೇಗೆ ಸಾಬೀತುಪಡಿಸುತ್ತಾರೆ? ರಾಜ್ಯಪಾಲರು ಕೇಂದ್ರ ಸರಕಾರದ ಏಜೆಂಟರಂತೆ ವರ್ತಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದರು.

ನಾವು ನಮ್ಮ ಸಂಖ್ಯಾಬಲವನ್ನು ಪ್ರದರ್ಶಿಸುವ ಉದ್ದೇಶದಿಂದಲೇ ಪ್ರತಿಭಟನೆ ನಡೆಸಿದ್ದೇವೆ. ಮತ್ತೆ ರಾಜ್ಯಪಾಲರನ್ನು ಭೇಟಿ ಮಾಡುವ ಅಗತ್ಯ ಕಂಡು ಬರುತ್ತಿಲ್ಲ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News