ಬಿಎಸ್‌ವೈ ಮೂರು ದಿನಗಳ ಮುಖ್ಯಮಂತ್ರಿ: ರಾಮಲಿಂಗಾರೆಡ್ಡಿ
ಬೆಂಗಳೂರು, ಮೇ 17: ಬಿಜೆಪಿಯವರಿಗೆ ಯಾವುದೆ ಜವಾಬ್ದಾರಿ ಇಲ್ಲ, ಕೇವಲ ಅಧಿಕಾರ ಬೇಕು. ಅದಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ಯಡಿಯೂರಪ್ಪ ಕೇವಲ ಮೂರು ದಿನಗಳ ಮುಖ್ಯಮಂತ್ರಿ, ಆನಂತರ ಅವರು ಅಧಿಕಾರದಿಂದ ಕೆಳಗಿಳಿಯಲಿದ್ದಾರೆ ಎಂದು ಮಾಜಿ ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2008ರಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬಂದಾಗ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಶಾಸಕರನ್ನು ರಾಜೀನಾಮೆ ಕೊಡಿಸಿ, ಉಪ ಚುನಾವಣೆಗಳನ್ನು ನಡೆಸಿದರು. ಬಳ್ಳಾರಿಯ ಗಣಿ ಹಣ ಇತ್ತಲ್ಲ, ಅದನ್ನು ಖರ್ಚು ಮಾಡಿದರು ಎಂದು ಆರೋಪಿಸಿದರು.
ರಾಜ್ಯಪಾಲರಿಗೆ ಬಿಜೆಪಿ ಎಷ್ಟು ಶಾಸಕರ ಪಟ್ಟಿಯನ್ನು ನೀಡಿದೆ ಎಂಬುದು ನನಗೆ ಗೊತ್ತಿಲ್ಲ. ನಾಳೆ ಸುಪ್ರೀಂಕೋರ್ಟ್‌ಗೆ ಯಾವ ಪಟ್ಟಿಯನ್ನು ನೀಡುತ್ತಾರೋ ನೋಡೋಣ. ಇಬ್ಬರು ಶಾಸಕರು ನಮ್ಮ ಸಂಪರ್ಕಕ್ಕೆ ಸಿಗುತ್ತಿಲ್ಲ. ಆದರೆ, ಅವರು ಬಂದು ನಮ್ಮ ಜೊತೆ ಕೈ ಜೋಡಿಸಲಿದ್ದಾರೆ ಎಂದು ರಾಮಲಿಂಗಾರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಕೇಂದ್ರದಲ್ಲಿ ಅವರದ್ದೇ ಪಕ್ಷದ ಸರಕಾರ ಇರುವುದರಿಂದ ಸಂವಿಧಾನಾತ್ಮಕ ಹುದ್ದೆಯಲ್ಲಿರುವವರನ್ನು ತಮ್ಮ ಅಗತ್ಯಕ್ಕೆ ತಕ್ಕಂತೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. 2008ರಲ್ಲಿಯೂ ರೈತರ ಸಾಲ ಮನ್ನಾ ಮಾಡುವ ಭರವಸೆಯೊಂದಿಗೆ ಯಡಿಯೂರಪ್ಪ ಅಧಿಕಾರಕ್ಕೆ ಬಂದಿದ್ದರು. ಆದರೆ, ವಿಧಾನಪರಿಷತ್ತಿನಲ್ಲಿ ಉಗ್ರಪ್ಪ ರೈತರ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿದಾಗ, ನಮ್ಮ ಬಳಿ ನೋಟು ಮುದ್ರಣ ಮಾಡುವ ಯಂತ್ರ ಇಲ್ಲ ಎಂದು ಯಡಿಯೂರಪ್ಪ ಉತ್ತರಿಸಿದ್ದನ್ನು ಅವರು ಉಲ್ಲೇಖಿಸಿದರು.
ಮೂರು ದಿನಗಳಲ್ಲಿ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯುತ್ತಾರೆ ಎಂಬುದು ಗೊತ್ತು. ಆದುದರಿಂದ, ರೈತರ ಸಾಲ ಮನ್ನಾ ಮಾಡುವ ಘೋಷಣೆ ಮಾಡಿದ್ದಾರೆ. ಆದರೆ, ವಾಸ್ತವವಾಗಿ ರೈತರ 50 ಸಾವಿರ ರೂ.ವರೆಗಿನ ಸಾಲ ಮನ್ನಾ ಮಾಡಿದ್ದು ನಮ್ಮ ಸರಕಾರ ಎಂದು ಅವರು ಹೇಳಿದರು.
ರಾಷ್ಟ್ರೀಕೃತ ಬ್ಯಾಂಕುಗಳಲ್ಲಿನ ರೈತರ ಸಾಲ ಮನ್ನಾ ಮಾಡುವಂತೆ ನಮ್ಮ ಮುಖ್ಯಮಂತ್ರಿ ಎಷ್ಟು ಮನವಿ ಮಾಡಿದರೂ ಪ್ರಧಾನಿ ಬಿಡಿಗಾಸು ಕೊಟ್ಟಿಲ್ಲ. ಇದೇ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಪ್ರಧಾನಿ ಎದುರು ತುಟಿ ಬಿಚ್ಚಿಲ್ಲ ಎಂದು ರಾಮಲಿಂಗಾರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರಂತೆ ನಾವು ಶಾಸಕರ ಖರೀದಿಗೆ ಆಪರೇಷನ್ ಕಾಂಗ್ರೆಸ್ ಮಾಡುವ ಅಗತ್ಯವಿಲ್ಲ. 117 ಶಾಸಕರ ಸಂಖ್ಯಾಬಲ ನಮಗಿದೆ. ಬಿಜೆಪಿಯವರಂತೆ ನಾವು ಕೆಟ್ಟ ರಾಜಕಾರಣ ಮಾಡುವುದಿಲ್ಲ ಎಂದು ರಾಮಲಿಂಗಾರೆಡ್ಡಿ ಹೇಳಿದರು.