ಮೂಗಿನಲ್ಲಿ ಬೆರಳು ತೂರಿಸುವ ಅಭ್ಯಾಸವಿದೆಯೇ? ಜೋಕೆ, ಅದು ನಿಮ್ಮ ಆರೋಗ್ಯಕ್ಕೆ ಹಾನಿಕರ....

Update: 2018-05-17 11:39 GMT

ಹಲವಾರು ಜನರು ಆಗಾಗ್ಗೆ ಮೂಗಿನಲ್ಲಿ ಬೆರಳು ತೂರಿಸಿ ಕೆದಕುವ ಕೆಟ್ಟ ಅಭ್ಯಾಸವನ್ನು ಹೊಂದಿದ್ದಾರೆ. ಕೆಲವರು ಬಹಿರಂಗವಾಗಿ ಅಲ್ಲದಿದ್ದರೂ ಯಾರೂ ತಮ್ಮನ್ನು ನೋಡುತ್ತಿಲ್ಲ ಎನ್ನುವುದನ್ನು ಖಚಿತ ಪಡಿಸಿಕೊಂಡು ಈ ಕೆಲಸ ಮಾಡುತ್ತಿರುತ್ತಾರೆ.

ಮೂಗಿನಲ್ಲಿ ಬೆರಳು ಹಾಕುವುದು ನೋಡುವವರಿಗೆ ಅಸಹ್ಯವನ್ನುಂಟು ಮಾಡುವುದು ಮಾತ್ರವಲ್ಲ,ಅದು ವ್ಯಕ್ತಿಯ ಆರೋಗ್ಯವನ್ನೂ ಹಾಳು ಮಾಡುವ ಕೆಟ್ಟ ಅಭ್ಯಾಸವಾಗಿದೆ. ಇದರ ಅಡ್ಡ ಪರಿಣಾಮಗಳು ಇಲ್ಲಿವೆ.....

► ಮೂಗಿನಿಂದ ರಕ್ತಸ್ರಾವ

ಮೂಗಿನಲ್ಲಿ ಬೆರಳು ತೂರಿಸುವ ಕಾಯಂ ಅಭ್ಯಾಸವಿರುವವರಿಗೆ ಮೂಗಿನಿಂದ ರಕ್ತಸ್ರಾವ ಸಾಮಾನ್ಯ ವಿದ್ಯಮಾನವಾಗಿದೆ. ಮೂಗಿನ ಒಳಭಾಗದ ಚರ್ಮವು ನಮ್ಮ ಹೊರಗಿನ ಚರ್ಮಕ್ಕಿಂತ ಹೆಚ್ಚು ಮೃದುವಾಗಿರುವುದರಿಂದ ರಭಸದಿಂದ ಮೂಗಿನ ಹೊರಳೆಗಳನ್ನು ಕೆದಕುವುದರಿಂದ ಉಗುರುಗಳು ತಾಗಿ ಅದಕ್ಕೆ ಸುಲಭವಾಗಿ ಹಾನಿಯುಂಟಾಗುತ್ತದೆ. ಇದು ರಕ್ತಸ್ರಾವಕ್ಕೆ ಕಾರಣವಾಗುತ್ತದೆ. ಈ ರಕ್ತಸ್ರಾವದಿಂದ ಸಂಪೂರ್ಣವಾಗಿ ಗುಣಮುಖವಾಗಲು ಸಮಯ ತಗುಲುತ್ತದೆ,ಆದರೆ ಮೂಗನ್ನು ಕೆದಕುವ ಅಭ್ಯಾಸದಲ್ಲಿ ಅದೇನೋ ಸುಖವನ್ನು ಅನುಭವಿಸುವವರು ಚೇತರಿಸಿಕೊಳ್ಳುವ ಮೊದಲೇ ಮತ್ತೆ ಆ ಕೆಲಸವನ್ನು ಮಾಡುತ್ತಾರೆ ಮತ್ತು ಮೂಗಿಗೆ ಇನ್ನಷ್ಟು ಹಾನಿಯನ್ನು ಮಾಡಿಕೊಳ್ಳುತ್ತಾರೆ.

► ಮೂಗಿನ ಮೃದ್ವಸ್ಥಿಗೆ ಗಾಯ

ಮೂಗಿನಲ್ಲಿ ಬೆರಳು ಹಾಕಿ ಕೆದಕುವುದರಿಂದ ಎರಡೂ ಹೊರಳೆಗಳ ನಡುವಿನ ತೆಳುವಾದ ಮೃದ್ವಸ್ಥಿಗೆ ಹಾನಿಯಾಗುತ್ತದೆ. ಮೂಗಿನಲ್ಲಿ ಅಂಟಿಕೊಂಡಿರುವ ಲೋಳೆಯನ್ನು ಉಗುರುಗಳಿಂದ ಕೆದಕುವಾಗ ಮೃದ್ವಸ್ಥಿಗೆ ಗಾಯವಾಗಿ ರಕ್ತ ಸುರಿಯುತ್ತದೆ. ಈ ಗಾಯಗಳು ಬೇಗನೆ ಮಾಯುವುದಿಲ್ಲ ಮತ್ತು ನೋವನ್ನುಂಟು ಮಾಡುತ್ತವೆ.

► ಸೋಂಕುಗಳಿಗೆ ಆಹ್ವಾನ

ಮೂಗಿನಲ್ಲಿ ಬೆರಳು ತೂರಿಸಿ ಕೆದಕಿದಾಗ ಸ್ವಲ್ಪ ಸಿಂಬಳ ಮತ್ತು ಕೊಳೆ ಉಗುರುಗಳ ಕೆಳಗೆ ಸೇರಿಕೊಳ್ಳುತ್ತವೆ ಮತ್ತು ಇದು ಬ್ಯಾಕ್ಟೀರಿಯಾಗಳು ಬೆಳೆಯಲು ಉತ್ತಮ ತಾಣವಾಗುತ್ತದೆ. ಈ ಬ್ಯಾಕ್ಟೀರಿಯಾಗಳು ಶರೀರವನ್ನು ಪ್ರವೇಶಿಸಿ ಸೋಂಕನ್ನುಂಟು ಮಾಡುತ್ತವೆ. ಈ ಕೆಟ್ಟ ಅಭ್ಯಾಸ ಶರೀರದ ರೋಗ ನಿರೋಧಕ ಶಕ್ತಿಯನ್ನು ಕ್ಷೀಣಿಸುತ್ತದೆ.

► ಅತ್ಯಂತ ಅನೈರ್ಮಲ್ಯಕಾರಿ

ಕೆಲವರು ಮೂಗಿನಲ್ಲಿ ಬೆರಳಾಡಿಸಿದ ಬಳಿಕ ಸ್ವಚ್ಛವಾಗಿ ಕೈ ತೊಳೆದುಕೊಳ್ಳದೆ ಆಹಾರ ಸೇವಿಸುತ್ತಾರೆ ಅಥವಾ ಗಾಯಕ್ಕೆ ಮುಲಾಮು ಲೇಪನ ಅಥವಾ ಅಂತಹುದೇ ಇತರ ಕೆಲಸಗಳನ್ನು ಮಾಡುತ್ತಾರೆ. ಇದು ಅತ್ಯಂತ ಹೊಲಸು ಅಭ್ಯಾಸವಾಗಿದ್ದು,ಆರೋಗ್ಯದ ಮೇಲೆ ಗಂಭೀರ ಪರಿಣಾಮವನ್ನುಂಟು ಮಾಡುತ್ತದೆ.

► ಮೂಗಿನ ರೋಮಕುಳಿಗಳಲ್ಲಿ ಮೊಡವೆಗಳು

ಕೆಲವರ ಚರ್ಮ ಅತ್ಯಂತ ಸಂವೇದನಾಶೀಲವಾಗಿದ್ದು,ಸಣ್ಣ ಪ್ರಚೋದನೆಯಿಂದಲೂ ತೀವ್ರವಾಗಿ ಕೆರಳುತ್ತದೆ. ಇಂತಹವರಿಗೆ ಮೂಗನ್ನು ಕೆದಕುವುದು ನೋವನ್ನುಂಟು ಮಾಡುತ್ತದೆ ಮತ್ತು ಮೂಗಿನಲ್ಲಿಯ ರೋಮಗಳ ಕುಳಿಗಳಲ್ಲಿ ಮೊಡವೆಗಳುಂಟಾಗುತ್ತವೆ. ಈ ಮೊಡವೆಗಳು ಯಾತನಾದಾಯಕವಾಗಿದ್ದು,ಅತ್ಯಂತ ಅನಾರೋಗ್ಯಕಾರಿಯಾಗಿವೆ.

► ಸೈನಸಿಟಿಸ್‌ಗೆ ಕಾರಣ

 ಕೆಲವು ಸಂದರ್ಭಗಳಲ್ಲಿ ವ್ಯಕ್ತಿಯು ಶೀತದಿಂದ ಬಳಲುತ್ತಿದ್ದರೆ ಮತ್ತು ಸೈನಸ್‌ಗಳು ಮುಚ್ಚಿಕೊಂಡಿದ್ದರೆ ನಿರಂತರವಾಗಿ ಮೂಗನ್ನು ಕೆದಕುವುದು ಸೈನಸಿಟಿಸ್‌ಗೆ ಕಾರಣವಾಗುತ್ತದೆ. ಉಗುರುಗಳಲ್ಲಿಯ ಬ್ಯಾಕ್ಟೀರಿಯಾಗಳು ಸೋಂಕನ್ನುಂಟು ಮಾಡುವುದರಿಂದ ಇನ್ನಷ್ಟು ಉರಿಯೂತವುಂಟಾಗುತ್ತದೆ. ಬ್ಯಾಕ್ಟೀರಿಯಾಗಳು ಸೈನಸ್‌ಗಳಲ್ಲಿ ಸೇರಿಕೊಂಡು ಇನ್ನಷ್ಟು ಅಭಿವೃದ್ಧಿಗೊಂಡು ಮೂಗಿನ ದ್ವಾರದಲ್ಲಿ ಸೋಂಕನ್ನು ಇನ್ನಷ್ಟು ಹೆಚ್ಚುವಂತೆ ಮಾಡುತ್ತವೆ.

► ಇತರ ಸೋಂಕುಗಳು

ಕೊಳಕು ಬೆರಳುಗಳನ್ನು ಮೂಗಿನಲ್ಲಿ ತೂರಿಸಿದಾಗ ಹೊರಗಿನ ಬ್ಯಾಕ್ಟೀರಿಯಾ ಅಥವಾ ವೈರಸ್‌ಗಳು ಸೇರಿಕೊಳ್ಳುತ್ತವೆ ಮತ್ತು ಇವು ಸುಲಭವಾಗಿ ಶ್ವಾಸನಾಳಕ್ಕೆ ವರ್ಗಾವಣೆಗೊಂಡು ಶರೀರದೊಳಗೆ ಪ್ರವೇಶಿಸುತ್ತವೆ. ಇದರಿಂದ ಅಪಾಯಕಾರಿ ಸೋಂಕುಗಳುಂಟಾಗಿ ಆರೋಗ್ಯವು ಕೆಡಬಹುದು.

 ಮೂಗಿನಲ್ಲಿ ಬೆರಳು ತೂರಿಸುವುದು ನಿಮಗೆ ಅನಿವಾರ್ಯವಾಗಿದ್ದರೆ ಹಾಗೆ ಮಾಡುವ ಮುನ್ನ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಮೂಗನ್ನು ಸ್ವಚ್ಛಗೊಳಿಸಲು ಟಿಶ್ಯೂ ಪೇಪರ್ ಬಳಸುವುದು ಉತ್ತಮ ಮತ್ತು ಆ ಕೆಲಸವಾದ ಬಳಿಕ ಮತ್ತೊಮ್ಮೆ ಕೈಗಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಿ. ಮೂಗಿನ ಸ್ವಚ್ಛತೆಯನ್ನು ಸರಿಯಾಗಿ ಕಾಪಾಡಿಕೊಳ್ಳಿ. ಮೂಗು ತೀವ್ರ ಒಣಗಿದೆ ಅಥವಾ ಉರಿಯುತ್ತಿದೆ ಎಂದಿದ್ದರೆ ಅಲ್ಪ ಪ್ರಮಾಣದಲ್ಲಿ ಸಾಮಾನ್ಯ ಪೆಟ್ರೋಲಿಯಂ ಜೆಲ್ಲಿಯನ್ನು ಮೂಗಿನ ಒಳಭಾಗದಲ್ಲಿ ಲೇಪಿಸಿ. ಇದರಿಂದ ನಿಮ್ಮ ಮೂಗು ಕೆದಕುವ ಅಭ್ಯಾಸದಿಂದ ಆಗಿರಬಹುದಾದ ಗಾಯಗಳು ಮಾಯಲೂ ನೆರವಾಗುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News