ರಾಜ್ಯಪಾಲರ ಕ್ರಮ ಖಂಡಿಸಿ ಪ್ರಗತಿಪರರಿಂದ ರಾಜಭವನ ಮುತ್ತಿಗೆ

Update: 2018-05-17 12:34 GMT

ಬೆಂಗಳೂರು, ಮೇ 17: ಸರಕಾರ ರಚನೆಗೆ ಬಹುಮತವಿಲ್ಲದಿದ್ದರೂ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಅವಕಾಶ ನೀಡಿದ್ದನ್ನು ಖಂಡಿಸಿ ಪ್ರಗತಿಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಸಾಹಿತಿಗಳು, ಚಿಂತಕರು ರಾಜಭವನಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಪ್ರೆಸ್‌ಕ್ಲಬ್‌ನಿಂದ ರಾಜಭವನದವರೆಗೂ ಮೆರವಣಿಗೆ ನಡೆಸಿ ಬಹುಮತವಿಲ್ಲದಿದ್ದರೂ ಯಾವ ಆಧಾರದ ಮೇಲೆ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ನೀಡಿದ್ದಾರೆ ಹಾಗೂ ಬಹುಮತ ಸಾಬೀತು ಮಾಡಿದರೂ ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ಅವಕಾಶ ನೀಡಲು ನಿರಾಕರಿಸಿದ್ದನ್ನು ತೀವ್ರವಾಗಿ ಖಂಡಿಸಿ ರಾಜ್ಯಪಾಲ ವಜುಭಾಯಿ ವಾಲಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳು ಕೂಗಿದರು.

ಈ ಸಂದರ್ಭದಲ್ಲಿ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಕೋಮು ಸೌಹಾರ್ದ ವೇದಿಕೆಯ ಕೆ.ಎಲ್.ಅಶೋಕ್, ಪತ್ರಕರ್ತ ಇಂದೂಧರ ಹೊನ್ನಾಪುರ ಸೇರಿದಂತೆ ನಿಯೋಗ ರಾಜ್ಯಪಾಲ ವಜುಭಾಯಿ ವಾಲಾರನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಯಾವ ಆಧಾರದ ಮೇಲೆ ಅವಕಾಶ ನೀಡಲಾಗಿದೆ ಎಂದು ಪ್ರಶ್ನಿಸಿದರು.

ಅನಂತರ ಮಾಧ್ಯಮದೊಂದಿಗೆ ಮಾತನಾಡಿದ ಮಾಜಿ ಅಡ್ವೋಕೇಟ್ ಜನರಲ್ ರವಿವರ್ಮ ಕುಮಾರ್, ಚುನಾವಣೆಯ ಫಲಿತಾಂಶದ ನಂತರ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಘೋಷಣೆ ಮಾಡಿ ಸರಕಾರ ರಚನೆಗೆ ಹಕ್ಕು ಮಂಡಿಸಲು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರೆ ಅವಕಾಶ ನೀಡುವುದಿಲ್ಲ. ಆದರೆ, ಬಿಜೆಪಿಗೆ ತಕ್ಷಣ ಅವಕಾಶ ನೀಡಿದ್ದಾರೆ. ಈ ಪ್ರಕ್ರಿಯೆ ಅತ್ಯಂತ ಖಂಡನೀಯವಾಗಿದೆ ಎಂದರು.

ಕುಮಾರಸ್ವಾಮಿ ಹಕ್ಕುಮಂಡನೆ ಮಾಡಿದ್ದರೂ, ರಾಜ್ಯಪಾಲರು ಬಹುಮತವಿಲ್ಲದ ಪಕ್ಷವನ್ನು ರಾತ್ರೋ ರಾತ್ರಿ ಆಹ್ವಾನಿಸಿ ಸರಕಾರ ರಚನೆಗೆ ಆಹ್ವಾನ ನೀಡಿದ್ದಾರೆ. ರಾಜಭವನದ ಮಾಹಿತಿ ಯಾರಿಗೂ ತಿಳಿಯುವುದಿಲ್ಲ. ಆದರೆ, ರಾಜ್ಯಪಾಲರು ಅಧಿಕೃತ ಆಹ್ವಾನ ನೀಡುವ ಮೊದಲೇ ಬಿಜೆಪಿ ಶಾಸಕ ಸುರೇಶ್ ಕುಮಾರ್ ಸಾಮಾಜಿಕ ಜಾಲತಾಣದಲ್ಲಿ ಯಡಿಯೂರಪ್ಪ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ ಎಂದು ಬರೆದುಕೊಳ್ಳುತ್ತಾರೆ. ಅಂದರೆ, ರಾಜ್ಯಪಾಲರು ಸಂವಿಧಾನಾತ್ಮಕವಾಗಿ ಕೆಲಸ ಮಾಡುತ್ತಿದ್ದಾರಾ ಅಥವಾ ಬಿಜೆಪಿ ಕೈಗೊಂಬೆಯಾಗಿ ಕೆಲಸ ಮಾಡುತ್ತಿದ್ದಾರಾ ಎಂದು ಪ್ರಶ್ನಿಸಿದರು.

ಬಹುಸಂಖ್ಯಾ ಬಲವನ್ನು ಹೊಂದಿರುವವರಿಗೆ ಸಂಪುಟ ರಚನೆ ಮಾಡಿ ಅಧಿಕಾರ ನಡೆಸಲು ಅವಕಾಶ ಕಲ್ಪಿಸಬೇಕಾಗಿರುವುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ಆದರೆ, 104 ಸ್ಥಾನಗಳನ್ನು ಹೊಂದಿರುವ ಬಿಜೆಪಿ ಪಕ್ಷ ಸಮಯ ಕೊಡಿ ಬಹುಮತ ಸಾಬೀತು ಮಾಡುತ್ತೇವೆ ಎಂದ ತಕ್ಷಣ, ಸಂವಿಧಾನದ ವಿರುದ್ಧವಾಗಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಲು ಅವಕಾಶ ಪ್ರಕಟಿಸಿದ್ದಾರೆ. ರಾಜ್ಯಪಾಲರಿಗೆ ಸಂವಿಧಾನ ಅರ್ಥವಾಗುತ್ತಿಲ್ಲವಾ ಅಥವಾ ಗಣಿತ ಬರುವುದಿಲ್ಲವಾ ಎಂದು ವ್ಯಂಗ್ಯವಾಡಿದರು.

ಹಿರಿಯ ವಿಚಾರವಾದಿ ಎ.ಕೆ.ಸುಬ್ಬಯ್ಯ ಮಾತನಾಡಿ, ದೇಶದಲ್ಲಿ ಪ್ರಜಾತಂತ್ರದ ಕಗ್ಗೂಲೆ ನಡೆಯುತ್ತಿದ್ದು, ಅದರಲ್ಲಿ ಪ್ರಥಮ ಅಪರಾಧಿಯಾಗಿ ಪ್ರಧಾನಿ ಮೋದಿ ಹಾಗೂ ಎರಡನೆ ಅಪರಾಧಿಯಾಗಿ ರಾಜ್ಯಪಾಲ ವಜುಭಾಯ್ ವಾಲ ನಿಲ್ಲುತ್ತಾರೆ. ಈ ಇಬ್ಬರೂ ಸೇರಿ ರಾಜ್ಯದಲ್ಲಿ ಪ್ರಜಾತಂತ್ರ ವ್ಯವಸ್ಥೆಯನ್ನು ದಮನ ಮಾಡಲು ಮುಂದಾಗಿದ್ದಾರೆ. ಬಹುಮತವಿಲ್ಲದಿದ್ದರೂ ಸರಕಾರ ರಚನೆ ಮಾಡಲು ಅವಕಾಶ ನೀಡುವ ಮೂಲಕ ಸಂವಿಧಾನ ವಿರೋಧಿ ಧೋರಣೆ ಅನುಸರಿಸುತ್ತಿದ್ದಾರೆ ಎಂದು ದೂರಿದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಜಿ.ಸಿದ್ದರಾಮಯ್ಯ ಮಾತನಾಡಿ, ಜನರು ಆಯ್ಕೆ ಮಾಡಿ ಕಳಿಸಿದ ಜನಪ್ರತಿನಿಧಿಗಳಿಂದು ಜನರಿಗೆ ದ್ರೋಹ ಬಗೆಯುತ್ತಿದ್ದಾರೆ. ಯಾರು ಪಕ್ಷಾಂತರ ಮಾಡಲು ತಯಾರಾಗಿದ್ದಾರೆ, ಅವರು ಕ್ಷೇತ್ರಕ್ಕೆ ಪ್ರವೇಶಿಸಿದರೆ ಅಲ್ಲಿಂದ ಓಡಿಸಬೇಕು ಎಂದ ಅವರು, ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಸಂವಿಧಾನ ಬದಲಿಸುತ್ತೇವೆ ಎನ್ನುತ್ತಿದ್ದವರು, ಈಗ ಸಂವಿಧಾನವನ್ನು ಧಿಕ್ಕರಿಸಿ ಪರೋಕ್ಷವಾಗಿ ಬದಲಾವಣೆ ಮಾಡುವ ಸೂಚನೆ ನೀಡಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News