ಬೆಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ದಾನಿಯಿಂದ ಏಳು ಮಂದಿಗೆ ಮರುಜೀವ

Update: 2018-05-17 12:44 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 17: ಯಶವಂತಪುರದಲ್ಲಿರುವ ಸ್ಪರ್ಶ ಆಸ್ಪತ್ರೆಯಲ್ಲಿ ಮೆದುಳು ನಿಷ್ಕ್ರಿಯಗೊಂಡಿದ್ದ 42 ವರ್ಷದ ಚಂದ್ರು ಎಂಬ ಮೃತ ದಾನಿಯಿಂದ ಪಡೆದುಕೊಂಡಿದ್ದ ಅಂಗಾಂಗಗಳನ್ನು 7 ಮಂದಿಗೆ ಜೋಡಿಸುವ ಮೂಲಕ ಮರು ಜೀವ ನೀಡಲಾಗಿದೆ.

ಚಂದ್ರು ಅವರ ಲಿವರ್, ಎರಡು ಕಿಡ್ನಿ ಮತ್ತು ಹೃದಯದ ಕವಾಟುಗಳನ್ನು ಪಡೆದುಕೊಂಡು ಏಳು ಮಂದಿಗೆ ಯಶಸ್ವಿಯಾಗಿ ಕಸಿ ಮಾಡಲಾಗಿದೆ. ಕಾರ್ಯನಿಮಿತ್ತ 2018ರ ಮೇ 13ರ ಸಂಜೆ 6 ಗಂಟೆಗೆ ಆಟೋರಿಕ್ಷಾದಲ್ಲಿ ಚಂದ್ರು ಪ್ರಯಾಣಿಸುತ್ತಿದ್ದ ವೇಳೆ, ಹಠಾತ್ತನೆ ಎದುರಿಗೆ ಬಂದ ಬಸ್‌ನಿಂದ ಪಾರಾಗಲು ಆಟೋ ಚಾಲಕ ಹಾಕಿದ ಬ್ರೇಕ್‌ನಿಂದಾಗಿ ಚಂದ್ರು ಆಟೋದಿಂದ ಕೆಳಗೆ ಬಿದ್ದಿದ್ದರು. ಈ ವೇಳೆ ಅವರ ತಲೆಗೆ ತೀವ್ರವಾದ ಪೆಟ್ಟು ಬಿದ್ದಿತ್ತು. ಈ ಅಪಘಾತವು ದೇವನಹಳ್ಳಿ ಬೆಳ್ಳೂರು ಕ್ರಾಸ್ ಬಳಿ ನಡೆದಿದ್ದು, ಪ್ರಾಥಮಿಕ ಚಿಕಿತ್ಸೆಯ ಬಳಿಕ ವೆಂಟಿಲೇಟರ್‌ನಲ್ಲಿ ಚಂದ್ರು ಅವರನ್ನು ಸ್ಪರ್ಶ ಆಸ್ಪತ್ರೆಗೆ ಕರೆತರಲಾಗಿತ್ತು. ರಾತ್ರಿಯ ವೇಳೆಗೆ ಚಂದ್ರು ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಘೋಷಿಸಿದ್ದರು.

ಖುದ್ದು ಆಟೋ ಚಾಲಕರಾಗಿದ್ದ ಚಂದ್ರು ಅವರು ಅಪಘಾತದಲ್ಲಿ ಆಟೋದಿಂದ ಕೆಳಗೆ ಬಿದ್ದ ಪೆಟ್ಟಿಗೆ ಅವರ ಮೆದುಳು ನಿಷ್ಕ್ರಿಯಗೊಂಡಿತ್ತು. ಅಂಗಾಂಗ ದಾನ ಮಾಡುವುದನ್ನು ಉತ್ತೇಜಿಸುವ ಸರಕಾರದ ಜೀವ ಸಾರ್ಥಕತೆ ಯೋಜನೆಯಡಿಯಲ್ಲಿ ಚಂದ್ರು ಅವರ ಪತ್ನಿ ಯಶೋಧಾ ಮತ್ತು ಅವರ ಸಮೀಪದ ಬಂಧುಗಳ ಮನವೊಲಿಸಿ ಅಂಗಾಗ ದಾನ ಮಾಡಲು ಕೇಳಿಕೊಳ್ಳಲಾಗಿತ್ತು. ಅಂತಿಮ ನಿರ್ಧಾರ ಕೈಗೊಂಡ ಯಶೋಧಾ ಅವರು ಅಂಗಾಂಗ ದಾನಕ್ಕೆ ಒಪ್ಪಿಕೊಂಡು 7ಮಂದಿಗೆ ಮರು ಜೀವನ ನೀಡಿದ ಪ್ರೇರಕ ಶಕ್ತಿಯಾಗಿದ್ದರು.

ಅಂಗಾಂಗ ದಾನ ಮಾಡಲು ಒಪ್ಪಿದ ಬಳಿಕ ಮೊದಲಿಗೆ ಲಿವರ್‌ಅನ್ನು ಕಸಿ ಮಾಡಲಾಯಿತು. ಸ್ಪರ್ಶ ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ಕೈಗೊಂಡ ಲಿವರ್ ಕಸಿಯನ್ನು ಡಾ.ಮ್ಯಾಥ್ಯೂ, ಡಾ.ರಾಜೀವ ಲೋಚನ, ಡಾ.ಮಲ್ಲಿಕಾರ್ಜುನ ಸಕ್ಪಾಲ್ ಮತ್ತು ಅವರ ತಂಡದವರು ಯಶಸ್ವಿಯಾಗಿ ನೆರವೇರಿಸಿದ್ದರು. ಒಂದು ಕಿಡ್ನಿಯನ್ನು ಸ್ಪರ್ಶ ಆಸ್ಪತ್ರೆಯ ಡಾ.ರಾಮಚಂದ್ರ, ಡಾ.ಅವಿನಾಶ್ ಮತ್ತು ಅವರ ತಂಡದವರು ಯಶಸ್ವಿಯಾಗಿ ನೆರವೇರಿಸಿದ್ದರು.

ಮತ್ತೊಂದು ಕಿಡ್ನಿ ಮತ್ತು ಹೃದಯದ ಕವಾಟುಗಳನ್ನು ಸರಕಾರದ ಜೀವ ಸಾರ್ಥಕ ಯೋಜನೆಯಡಿ ಹಂಚಿಕೆ ಮಾಡಿದಂತೆ ಕ್ರಮವಾಗಿ ಮೈಸೂರಿನ ಜೆಎಸ್‌ಎಸ್ ಹಾಸ್ಪಿಟಲ್ ಮತ್ತು ನಾರಾಯಣ ಹೆಲ್ತ್ ಸಿಟಿಗೆ ಕಳುಹಿಸಿಕೊಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News