ಶಾಸಕರ ಮೇಲೆ ಗೂಂಡಾಗಿರಿಗೆ ಅವಕಾಶ ನೀಡುವುದಿಲ್ಲ: ಮುಖ್ಯಮಂತ್ರಿ ಯಡಿಯೂರಪ್ಪ

Update: 2018-05-17 15:13 GMT

ಬೆಂಗಳೂರು, ಮೇ 17: ‘ಜೆಡಿಎಸ್-ಕಾಂಗ್ರೆಸ್ ಶಾಸಕರನ್ನು ರೆಸಾರ್ಟ್‌ನಲ್ಲಿ ಇಟ್ಟುಕೊಂಡಿದ್ದು, ಅವರ ಮೇಲೆ ಗೂಂಡಾಗಿರಿ ನಡೆಸಲಾಗುತ್ತಿದೆ. ಆದರೆ, ನಮ್ಮದೇ ಸರಕಾರವಿದ್ದು, ಗೂಂಡಾಗಿರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ’ ಎಂದು ನೂತನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಎಚ್ಚರಿಸಿದ್ದಾರೆ.

ಗುರುವಾರ ಬಿಜೆಪಿ ಕಚೇರಿಯಲ್ಲಿ ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಬಹುಮತ ಸಾಬೀತು ಮಾಡುವುದರಲ್ಲಿ ರಾಜ್ಯದ ಜನತೆ ಹಾಗೂ ಪಕ್ಷದ ಶಾಸಕರು ಸೇರಿದಂತೆ ಯಾರೊಬ್ಬರಿಗೂ ಅನುಮಾನ ಬೇಡ ಎಂದು ಇದೇ ವೇಳೆ ಸ್ಪಷ್ಟಣೆ ನೀಡಿದರು.

ವಿಧಾನಸಭೆ ಚುನಾವಣೆಗೆ ಮುನ್ನ ಪರಸ್ಪರ ಕೆಸರೆರೆಚಾಟದಲ್ಲಿ ತೊಡಗಿದ್ದ ಕಾಂಗ್ರೆಸ್-ಜೆಡಿಎಸ್ ಈಗ ಅಪ್ಪಿಕೊಳ್ಳುತ್ತಿದ್ದಾರೆ ಎಂದು ಆಕ್ಷೇಪಿಸಿದ ಅವರು, ಎರಡು ಉಪ ಚುನಾವಣೆಗಳು ಎದುರಾಗಬಹುದು. ಆ ಕ್ಷೇತ್ರಗಳನ್ನು ನಾವು ಗೆಲ್ಲಲೇಬೇಕು ಎಂದು ಕರೆ ನೀಡಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಕ್ಷೇತ್ರಗಳ ಪೈಕಿ 28 ಕ್ಷೇತ್ರದಲ್ಲೂ ನಾವು ಗೆದ್ದೇ ಗೆಲ್ಲುತ್ತೇವೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಪ್ರಯತ್ನಿಸಬೇಕು ಎಂದ ಅವರು, ಕರ್ನಾಟಕ ರಾಜ್ಯ ಸೇರಿದಂತೆ 22 ರಾಜ್ಯದಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಅಮಿತ್ ಶಾ ನಾಯಕತ್ವದಲ್ಲಿ ನಮಗೆ ಜಯಸಿಕ್ಕಿದೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಬೇಡ, ಬಿಜೆಪಿ ಬೇಕು. ದೇಶದಲ್ಲಿ ರಾಹುಲ್ ಗಾಂಧಿ ಬೇಡ, ರಾಜ್ಯದಲ್ಲಿಯೂ ಸಿದ್ದರಾಮಯ್ಯ ಬೇಡ. ಬದಲಿಗೆ ಮೋದಿ, ಅಮಿತ್ ಶಾ, ಯಡಿಯೂರಪ್ಪ ಬೇಕು ಎಂದು ರಾಜ್ಯದ ಜನತೆ ಸಂದೇಶ ಕೊಟ್ಟಿದ್ದಾರೆ ಎಂದು ಹೇಳಿದರು.

ರಾಜ್ಯದ ಜನತೆ ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷವನ್ನು ತಿರಸ್ಕಾರ ಮಾಡಿದ್ದಾರೆ. ಆದರೂ, ಆ ಪಕ್ಷಗಳ ನಾಯಕರು ಹಿಂಬಾಗಿಲ ಮೂಲಕ ಅಧಿಕಾರವನ್ನು ಹಿಡಿಯಲು ಹುನ್ನಾರ ನಡೆಸಿದ್ದಾರೆ. ಇದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ನುಡಿದರು.

ಬಾದಾಮಿ ಕ್ಷೇತ್ರದಲ್ಲಿ ಶ್ರೀರಾಮುಲು ಇನ್ನೆರಡು ದಿನ ಇದ್ದಿದ್ದರೆ, ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆದ ಗತಿಯೇ ಆಗುತ್ತಿತ್ತು ಎಂದ ಅವರು, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಜನರೇ ಮಾಲಕರು. ಅವರು ಉತ್ತರ ಕೊಟ್ಟಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News