ರಾಜ್ಯದ ಜನತೆ ಸಮ್ಮಿಶ್ರ ಸರಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ: ವಿ.ಎಸ್.ಉಗ್ರಪ್ಪ

Update: 2018-05-17 15:17 GMT

ಬೆಂಗಳೂರು, ಮೇ 17: ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್‌ಗೆ ಸ್ಪಷ್ಟ ಬಹುಮತ ಕೊಡದೆ ಸಮ್ಮಿಶ್ರ ಸರಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ವಿ.ಎಸ್.ಉಗ್ರಪ್ಪ ಅಭಿಪ್ರಾಯಿಸಿದರು.

ಗುರುವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನತೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡದಿದ್ದರೂ ಅಸಂವಿಧಾನಿಕವಾಗಿ ಸರಕಾರ ರಚಿಸುವ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಿದೆ. ಬಿಜೆಪಿಯ ಈ ಎಲ್ಲ ಅಕ್ರಮಗಳನ್ನು ದೇಶದ ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ ಎಂದು ತಿಳಿಸಿದರು.

ರಾಜಭವನ ಬಿಜೆಪಿ ಕಚೇರಿಯಾಗಿದೆ: ಸಂವಿಧಾನಕ್ಕೆ ಬದ್ಧವಾಗಿ ಪ್ರಜಾಪ್ರಭುತ್ವ ಮೌಲ್ಯಗಳಿಗೆ ಅನುಸಾರವಾಗಿ ಕಾರ್ಯನಿರ್ವಹಿಸಬೇಕಿದ್ದ ರಾಜ್ಯಪಾಲರು, ತಮ್ಮ ಕಚೇರಿಯನ್ನು ಬಿಜೆಪಿ ಪಕ್ಷದ ಕಚೇರಿಯಾಗಿ ಪರಿವರ್ತಿಸಿಕೊಂಡು, ಸಂವಿಧಾನ ಬಾಹಿರ ಕೃತ್ಯದಲ್ಲಿ ತೊಡಗಿದ್ದಾರೆ. ಇವರ ವರ್ತನೆಯ ಕುರಿತು ರಾಜ್ಯದ ಜನತೆ ಆಕ್ರೋಶಗೊಂಡಿದ್ದಾರೆ ಎಂದು ಅವರು ಕಿಡಿಕಾರಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚುನಾವಣೆಗೂ ಮುನ್ನ 150 ಸ್ಥಾನಗಳನ್ನು ಪಡೆಯುತ್ತೇವೆಂದು ಹೇಳಿದ್ದರು. ಪ್ರಧಾನಿ ನರೇಂದ್ರ ಮೋದಿ ರಾಜ್ಯದೆಲ್ಲೆಡೆ ಸುತ್ತಾಡಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ವಿರುದ್ಧ ಸುಳ್ಳಿನ ಮಹಾಪೂರವನ್ನೆ ಕಟ್ಟಿದ್ದರು. ಇವರ ಹಸಿ ಸುಳ್ಳುಗಳನ್ನು ಮನಗಂಡ ಜನತೆ ಬಿಜೆಪಿಯನ್ನು ಸೋಲಿಸಿದ್ದಾರೆ. ಆದರೂ ಜನಾದೇಶಕ್ಕೆ ವಿರುದ್ಧವಾಗಿ ಬಿಜೆಪಿ ಅಧಿಕಾರ ನಡೆಸಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರ ಸರಕಾರ ತನ್ನ ರಾಜಕೀಯ ಸ್ವಾರ್ಥಕ್ಕಾಗಿ ಚುನಾವಣಾ ಆಯೋಗ, ಆದಾಯ ತೆರೆಗೆ ಇಲಾಖೆಯನ್ನು ದುರುಪಯೋಗ ಪಡಿಸಿಕೊಂಡಿರುವುದು ಸ್ಪಷ್ಟವಾಗಿದೆ. ದೇಶದ ಇತಿಹಾಸದಲ್ಲಿ ಕೇಂದ್ರ ಸರಕಾರವೊಂದು ಸಂವಿಧಾನಕ್ಕೆ ಕಿಂಚಿತ್ತೂ ಬೆಲೆ ಕೊಡದೆ ನಡೆದುಕೊಳ್ಳುತ್ತಿರುವುದು ಇದೇ ಮೊದಲು. ಇವೆಲ್ಲ ಅನೀತಿಗಳಿಗೆ ಪ್ರಧಾನಿ ನರೇಂದ್ರ ಮೋದಿಯೇ ಪ್ರಮುಖ ಕಾರಣವೆಂದು ಅವರು ಆಪಾದಿಸಿದರು.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಬಿಜೆಪಿ ನಾಯಕರು ಪ್ರಜಾಪ್ರಭುತ್ವ ಮೌಲ್ಯಗಳನ್ನು ಬದಿಗೊತ್ತಿ ಅಸಂವಿಧಾನಿಕವಾಗಿ ರಾಜ್ಯಾಧಿಕಾರ ಹಿಡಿಯಲು ಪ್ರಯತ್ನಿಸುತ್ತಿದ್ದಾರೆ. ಬಿಜೆಪಿಯ ಈ ಎಲ್ಲ ಕಪಟ ನೀತಿಗಳನ್ನು ರಾಜ್ಯದ ಜನತೆ ಗಮನಿಸುತ್ತಿದ್ದಾರೆ. ಹೀಗಾಗಿ 2019ರ ಲೋಕಸಭಾ ಚುನಾವಣೆಯಲ್ಲಿ ಜನತೆಯೆ ತಕ್ಕ ಪಾಠ ಕಲಿಸಲಿದ್ದಾರೆ.
-ವಿ.ಎಸ್.ಉಗ್ರಪ್ಪ, ಕಾಂಗ್ರೆಸ್ ಮುಖಂಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News