ಯಡಿಯೂರಪ್ಪ ನಿರ್ಧಾರಕ್ಕೆ ಡಿ.ಕೆ.ಶಿವಕುಮಾರ್ ವ್ಯಂಗ್ಯ

Update: 2018-05-17 16:25 GMT

ಬೆಂಗಳೂರು, ಮೇ 17: ಯಡಿಯೂರಪ್ಪ ಮುಖ್ಯಮಂತ್ರಿಯಾಗುತ್ತಿದ್ದಂತೆ ಶಾಸಕರು ತಂಗಿರುವ ರಾಮನಗರದ ಬಿಡದಿಯಲ್ಲಿರುವ ರೆಸಾರ್ಟ್‌ಗೆ ಒದಗಿಸಲಾಗಿದ್ದ ಪೊಲೀಸ್ ಭದ್ರತೆಯನ್ನು ಹಿಂಪಡೆಯಲಾಗಿದೆ. ಇವರ ಅಧಿಕಾರದಲ್ಲಿ ಶಾಸಕರಿಗೆ ರಕ್ಷಣೆ ಇಲ್ಲದಿದ್ದರೆ, ಇನ್ನು ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.

ಗುರುವಾರ ನಗರದ ಖಾಸಗಿ ಹೊಟೇಲ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಶಾಸಕರನ್ನು ರಕ್ಷಿಸಲು ಪೊಲೀಸರ ಅಗತ್ಯವಿಲ್ಲ. ಜನರು ಹಾಗೂ ಪಕ್ಷದ ಕಾರ್ಯಕರ್ತರೇ ನಮ್ಮ ರಕ್ಷಣೆಗಿದ್ದಾರೆ. ನಾವು ರಾಜ್ಯದ ಹೊರಗೆ ಹೋಗುವುದಿಲ್ಲ. ಇಲ್ಲೇ ಇರುತ್ತೇವೆ ಎಂದರು.

ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಿದ್ದಂತೆ ರಾಜ್ಯಪಾಲರ ಮೂಲಕ ಒಬ್ಬ ಶಾಸಕರನ್ನು ನಾಮನಿರ್ದೇಶನ ಮಾಡಿಸಿದ್ದಾರೆ. ಪೊಲೀಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ರಾಜ್ಯದಲ್ಲಿ ಯಾವ ರೀತಿಯ ಅಲೆ ಆರಂಭವಾಗಿದೆ ಎಂಬುದಕ್ಕೆ ಈ ನಿದರ್ಶನಗಳೇ ಸಾಕ್ಷಿ. ಇದು ಖಂಡನೀಯ ಎಂದು ಶಿವಕುಮಾರ್ ಹೇಳಿದರು.

ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮಾತನಾಡಿ, ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸಿದ ಕೂಡಲೆ ನಾಲ್ವರು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದಾರೆ. ಚಿಕ್ಕಮಗಳೂರು ಎಸ್ಪಿ ಅಣ್ಣಾಮಲೈಯವರನ್ನು ರಾಮನಗರಕ್ಕೆ ವರ್ಗಾವಣೆ ಮಾಡಿದ್ದಾರೆ. ಬಹುಮತ ಸಾಬೀತು ಪಡಿಸದೆ ಇವರು ಅಧಿಕಾರಿಗಳನ್ನು ಹೇಗೆ ವರ್ಗಾವಣೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಸ್ಯಾಸ್ಪದವಾಗಿವೆ. ನಾವು ನಮ್ಮ 117 ಶಾಸಕರನ್ನು ರಕ್ಷಣೆ ಮಾಡುತ್ತೇವೆ. ಜೆಡಿಎಸ್ ಪಕ್ಷದ 38 ಶಾಸಕರು ನನ್ನ ಜೊತೆಯಲ್ಲಿದ್ದಾರೆ. ನಮ್ಮನ್ನು ವಿಭಜಿಸಲು ಯಾರಿಂದಲೂ ಸಾಧ್ಯವಿಲ್ಲ. ಎಲ್ಲ ಶಾಸಕರ ಜವಾಬ್ದಾರಿಯನ್ನು ನಾನೇ ಹೊತ್ತಿದ್ದೇನೆ. ಕಾಂಗ್ರೆಸ್ ನಾಯಕರು ಅವರ ಪಕ್ಷದ ಶಾಸಕರ ಜವಾಬ್ದಾರಿಯನ್ನು ತೆಗೆದುಕೊಂಡಿದ್ದಾರೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News