ಬೆಂಗಳೂರು: ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಖಂಡಿಸಿ ಕಾಂಗ್ರೆಸ್ ಪ್ರತಿಭಟನೆ

Update: 2018-05-17 16:32 GMT

ಬೆಂಗಳೂರು, ಮೇ 17: ಬಹುಮತ ಇಲ್ಲದಿದ್ದರೂ, ಮುಖ್ಯಮಂತ್ರಿಯಾಗಿ ಬಿ.ಎಸ್.ಯಡಿಯೂರಪ್ಪ ಪ್ರಮಾಣ ವಚನ ಸ್ವೀಕಾರ ಮಾಡಿರುವುದಲ್ಲದೆ, ಇತರೆ ಪಕ್ಷದ ಶಾಸಕರನ್ನು ಹಣ ಕೊಟ್ಟು ಖರೀದಿಗೆ ಮುಂದಾಗಿ ಕುದುರೆ ವ್ಯಾಪಾರ ನಡೆಸುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಗುರುವಾರ ನಗರದ ಮೌರ್ಯ ವೃತ್ತದ ಬಳಿಯ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಕಾಂಗ್ರೆಸ್ ಕಾರ್ಯಕರ್ತರು, ಕುದುರೆಯೊಂದಕ್ಕೆ ಬಿಜೆಪಿಯ ನಾಯಕರ ಭಾವ ಚಿತ್ರ ಹಾಕಿ ವಿಭಿನ್ನವಾಗಿ ಪ್ರತಿಭಟನೆ ನಡೆಸಿ, ಪ್ರಧಾನಿ ನರೇಂದ್ರ ಮೋದಿ, ಬಿ.ಎಸ್.ಯಡಿಯೂರಪ್ಪ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ದೇಶದಲ್ಲಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನವನ್ನು ಬಲಿಕೊಟ್ಟು ಬಿಜೆಪಿ ಆಳ್ವಿಕೆ ಮಾಡುತ್ತಿದೆ. ಈಗ ಅದು ಕರ್ನಾಟಕಕ್ಕೂ ಕಾಲಿಟ್ಟಿದೆ. 104 ಶಾಸಕರನ್ನ ಹೊಂದಿರುವ ಬಿಜೆಪಿಗೆ ರಾಜ್ಯಪಾಲರು ಅವಕಾಶ ನೀಡಿರುವುದು ಅನುಮಾನಕ್ಕೆ ಅವಕಾಶ ನೀಡಿದೆ ಎಂದು ಪ್ರತಿಭಟನಾಕಾರರು ದೂರಿದರು.

ಗೋವಾ, ಮೇಘಾಲಯ, ಮಣಿಪುರದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನ ಬಂದಾಗ ಅವಕಾಶ ನೀಡಿರಲಿಲ್ಲ. ರಾಜ್ಯದಲ್ಲಿ ಜೆಡಿಎಸ್ ಕಾಂಗ್ರೆಸ್ ಒಂದಾಗಿ 117 ಸ್ಥಾನದ ಪತ್ರ ರಾಜ್ಯಪಾಲರಿಗೆ ನೀಡಿದ್ದರೂ ಬಿಜೆಪಿಗೆ ಅವಕಾಶ ನೀಡಿದ್ದಾರೆ. ಕುದುರೆ ವ್ಯಾಪಾರಕ್ಕೆ ಮುಂದಾಗಿರುವ ಬಿಜೆಪಿಗೆ ಧಿಕ್ಕಾರ ಎಂದು ಕಾಂಗ್ರೆಸ್ ಕಾರ್ಯಕರ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News