ರೆಟಿನೋಬ್ಲಾಸ್ಟೋಮಾ ಖಾಯಿಲೆಗೆ ಸೂಕ್ತ ಚಿಕಿತ್ಸೆ ಅಗತ್ಯ

Update: 2018-05-17 17:31 GMT

ಬೆಂಗಳೂರು, ಮೇ 17: ಇತ್ತೀಚಿನ ವರ್ಷಗಳಲ್ಲಿ ನವಜಾತ ಶಿಶುನಿಂದ ಐದು ವರ್ಷದ ಮಕ್ಕಳವರೆಗೂ ರೆಟಿನೋಬ್ಲಾಸ್ಟೋಮಾ ಪ್ರಕರಣ ಹೆಚ್ಚಾಗುತ್ತಿದೆ ಎಂದು ನೇತ್ರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ರೆಟಿನೋಬ್ಲಾಸ್ಟೋಮಾ ಜೀವಕ್ಕೆ ಬೆದರಿಕೆ ಒಡ್ಡುವ ಕಣ್ಣಿನ ಕ್ಯಾನ್ಸರ್ ಆಗಿದ್ದು, ನವಜಾತ ಶಿಶು ಹಾಗೂ ಸಣ್ಣ ಮಕ್ಕಳ ಕಣ್ಣಿನಲ್ಲಿ ಕಂಡುಬರುವ ಯಾವುದೇ ಅಸಹಜ ಲಕ್ಷಣ ಕುರಿತಂತೆ ಬೇಗ ತಪಾಸಣೆ ಮಾಡಿಸಬೇಕಾದ ಅಗತ್ಯವಿದೆ. ಅಲ್ಲದೆ, ನಿರಂತರವಾಗಿ ಹಸುಳೆ ಮತ್ತು ಮಕ್ಕಳ ನೇತ್ರ ತಪಾಸಣೆ ಮಾಡಿಸುವುದರಿಂದ ಅಪಾಯಕಾರಿ ಕಣ್ಣಿನ ಕ್ಯಾನ್ಸರ್ ಪತ್ತೆ ಮಾಡಬಹುದು. ಚಿಕ್ಕವರಿದ್ದಾಗಲೇ ಬರುವ ಅಂಧತ್ವವನ್ನು ತಡೆಯಬಹುದಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಜಾಗತಿಕವಾಗಿ ಪ್ರತಿವರ್ಷ 8 ಸಾವಿರ ಹೊಸ ಪ್ರಕರಣಗಳು ವರದಿಯಾಗುತ್ತಿವೆ. 1500 ಪ್ರಕರಣಗಳು ಭಾರತದಲ್ಲಿ ದಾಖಲಾಗುತ್ತಿವೆ. ಆದರೆ, ಸರಿಯಾದ ಅರಿವು ಮೂಡಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಕರಣ ದಾಖಲಾಗುತ್ತಿಲ್ಲ ಹಾಗೂ ಪತ್ತೆಯಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಸಣ್ಣದಾಗಿ ಹೊಳೆಯುವ ಬಿಳಿಚುಕ್ಕಿ, ಮೆಳ್ಳುಗಣ್ಣು, ಕಣ್ಣು ಊದಿರುವುದು, ಸದಾ ನೀರು ಸುರಿಯುವುದು ಗುರುತುಗಳು ಕಂಡು ಬಂದರೆ ಈ ರೋಗದ ಲಕ್ಷಣಗಳು ಎಂದು ಗುರುತಿಸಬಹುದಾಗಿದೆ. ಆರ್‌ಬಿ ಹೆಚ್ಚಾದಂತೆಲ್ಲ ಬಿಳಿ ಹೆಚ್ಚು ಕಾಣುತ್ತದೆ. ಕೆಲವೊಮ್ಮೆ ಕಾಣುವುದಿಲ್ಲ. ಇದು ಬೆಳೆದಂತೆ ಕಣ್ಣಿನಲ್ಲಿ ನೋವು ಬರುತ್ತದೆ. ಕೆಂಪಾಗುತ್ತದೆ. ಊದುತ್ತದೆ. ಈ ಹಂತದಲ್ಲಿ ಪತ್ತೆ ಮಾಡದಿದ್ದರೆ, ಚಿಕಿತ್ಸೆ ನೀಡದಿದ್ದರೆ ಕ್ಯಾನ್ಸರ್ ಕಣ್ಣಿನ ಹೊರಕ್ಕೂ ಹರಡುತ್ತದೆ. ಕ್ರಮೇಣ ಮೆದುಳಿಗೆ ಹಬ್ಬುವ ಅಪಾಯವಿದೆ. ಅಲ್ಲದೆ, ದೇಹದ ಇತರ ಭಾಗಗಳಿಗೂ ಹರಡಿದರೆ ಜೀವಕ್ಕೆ ಅಪಾಯ ತರುವ ಪ್ರಮಾದವಿದೆ ಎಂದು ತಿಳಿಸಿದ್ದಾರೆ.

ಆರ್‌ಬಿ ಖಾಯಿಲೆಯನ್ನು ಬೇಗನೆ ಪತ್ತೆ ಮಾಡಿದರೆ ಸಂಪೂರ್ಣವಾಗಿ ಗುಣಪಡಿಸಲು ಸಾಧ್ಯ. ಅರಿವು ಮೂಡಿಸುವ ಮೂಲಕ ಅನೇಕ ಜೀವ ಉಳಿಸಬಹುದು. ಫ್ಲಾಷ್ ಫೋಟೋಗ್ರಫಿಯಲ್ಲಿ ಮಕ್ಕಳ ಕಣ್ಣಿನಲ್ಲಿ ಬಿಳಿ ಚುಕ್ಕೆ ಕಂಡರೆ ಅದು ಆತಂಕದ ವಿಷಯ. ತಕ್ಷಣ ಗಮನಹರಿಸಬೇಕು ಎಂದು ರೆಟಿನೊಬ್ಲಾಸ್ಟೋಮ ತಜ್ಞ ಡಾ. ಫೈರೋಜ್ ಪಿ.ಮಂಜನ್‌ದಿಡ ಹೇಳಿದ್ದಾರೆ.

ರೆಟಿನೋಬ್ಲಾಸ್ಟೊಮ ಹೊಂದಿರುವ ಮಕ್ಕಳಿಗೆ ಪರೀಕ್ಷೆ ಹಾಗೂ ಸಮಾಲೋಚನೆ ಮಾಡುವಸೌಲಭ್ಯ ದೊರಕಬೇಕು. ಈಗ ದೊರಕುತ್ತಿರುವ ಚಿಕಿತ್ಸೆ ಹೊರತುಪಡಿಸಿ ಹೊಸ ಮಾದರಿ ಚಿಕಿತ್ಸೆಗೆ ಭಾರತದಲ್ಲಿ ಸಂಶೋಧನೆ ನಡೆಯಬೇಕಿದೆ ಎಂದು ನಾರಾಯಣ ನೇತ್ರಾಲಯದ ಅಧ್ಯಕ್ಷರು ಡಾ.ಕೆ. ಭುಜಂಗಶೆಟ್ಟಿ ಅಭಿಪ್ರಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News