ಬಿಜೆಪಿ ನಾಯಕರಿಂದ 150 ಕೋಟಿ ರೂ.ಆಮಿಷ: ವಿ.ಎಸ್.ಉಗ್ರಪ್ಪ ಆರೋಪ

Update: 2018-05-18 14:32 GMT

ಬೆಂಗಳೂರು, ಮೇ 18: ಸದನದಲ್ಲಿ ವಿಶ್ವಾಸಮತ ಗೆಲ್ಲಲು ವಾಮ ಮಾರ್ಗ ಅನುಸರಿಸುತ್ತಿರುವ ಬಿಜೆಪಿ ನಾಯಕರು, ಕಾಂಗ್ರೆಸ್ ಪಕ್ಷದ ಶಾಸಕರಿಗೆ ತಲಾ 150 ಕೋಟಿ ರೂ.ಗಳ ಆಮಿಷವನ್ನು ಒಡ್ಡುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ವಿ.ಎಸ್.ಉಗ್ರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ನಗರದ ಕ್ವೀನ್ಸ್‌ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ವಿಶ್ವಾಸಮತ ಗೆಲ್ಲಲು ನಿನ್ನೆಯ ವರೆಗೆ 25 ಕೋಟಿ ರೂ.ಗಳ ಆಮಿಷವೊಡ್ಡುತ್ತಿದ್ದ ಬಿಜೆಪಿ ನಾಯಕರು, ಈಗ 150 ಕೋಟಿ ರೂ.ಆಮಿಷವೊಡುತ್ತಿದ್ದಾರೆ ಎಂದು ದೂರಿದರು.

ಕೇಳಿದ ಸಚಿವ ಸ್ಥಾನ, ಜಿಲ್ಲಾ ಉಸ್ತುವಾರಿ ಹೊಣೆಗಾರಿಕೆಯನ್ನು ನೀಡುವುದಾಗಿ ಆಮಿಷವೊಡ್ಡಲಾಗುತ್ತಿದೆ ಎಂದ ಅವರು, ಇದೇ ಸಂದರ್ಭದಲ್ಲಿ ಮಾಜಿ ಸಚಿವ ಜನಾರ್ದನರೆಡ್ಡಿ, ರಾಯಚೂರು ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ದಡ್ಡಲ್‌ರೊಂದಿಗೆ ಮಾತುಕತೆ ನಡೆಸಿರುವ ಎನ್ನಲಾದ ಆಡಿಯೋ ಕ್ಲಿಪಿಂಗ್ ಅನ್ನು ಬಿಡುಗಡೆಗೊಳಿಸಿದರು.

ಬಸನಗೌಡ ಬುಡಕಟ್ಟು ವಾಲ್ಮೀಕಿ ಸಮಾಜದವರು. ಮಸ್ಕಿ ಕ್ಷೇತ್ರದ ಶಾಸಕ ಪ್ರತಾಪ್‌ಗೌಡ ಪಾಟೀಲ್‌ರನ್ನು ಸೆಳೆಯಲು ಬಿಜೆಪಿ ಪ್ರಯತ್ನ ಮಾಡುತ್ತಿದೆ. ಅದೇ ರೀತಿ ಇನ್ನಿತರ ವಾಲ್ಮೀಕಿ ಸಮಾಜದ ಶಾಸಕರನ್ನು ಗುರಿಯನ್ನಾಗಿ ಮಾಡುತ್ತಿದ್ದಾರೆ. ಈಗ ನಾವು ಬಿಡುಗಡೆ ಮಾಡಿರುವ ಆಡಿಯೋ ಕ್ಲಿಪ್ ಒಂದು ಸ್ಯಾಂಪಲ್ ಮಾತ್ರ ಎಂದು ಉಗ್ರಪ್ಪ ಹೇಳಿದರು.

ಬಿಜೆಪಿಯ ರಾಷ್ಟ್ರೀಯ ನಾಯಕರು ಬಹಳ ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಿದ್ದಾರೆ. ನಮ್ಮ ಯಾವ ಯಾವ ಶಾಸಕರಿಗೆ ಎಷ್ಟು ಮಟ್ಟದಲ್ಲಿ ಆಮಿಷಗಳನ್ನು ಒಡ್ಡಲಾಗುತ್ತಿದೆ ಅನ್ನೋ ರೆಕಾರ್ಡಿಂಗ್ ಇದೆ. ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದರು.

ವಾಮ ಮಾರ್ಗದಲ್ಲಿ ರಾಜ್ಯದ ಜನತೆಯನ್ನು ದಾರಿ ತಪ್ಪಿಸಲು ಪ್ರಯತ್ನಿಸಿದರೆ, ನರೇಂದ್ರಮೋದಿ, ಅಮಿತ್ ಶಾ, ಯಡಿಯೂರಪ್ಪ, ಜನಾರ್ದನರೆಡ್ಡಿಯನ್ನು ಜನ ಕ್ಷಮಿಸುವುದಿಲ್ಲ. ಆದುದರಿಂದ, ವಾಮ ಮಾರ್ಗವನ್ನು ಬಿಟ್ಟು ಮೊದಲು ಕೆ.ಜಿ.ಬೋಪಯ್ಯರನ್ನು ಹಂಗಾಮಿ ಸ್ಪೀಕರ್ ಆಗಿ ನೇಮಕ ಮಾಡಿರುವ ಆದೇಶವನ್ನು ಹಿಂಪಡೆದು, ಹಿರಿಯ ಶಾಸಕರನ್ನು ಆ ಸ್ಥಾನಕ್ಕೆ ನೇಮಕ ಮಾಡಲಿ ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News