×
Ad

ಸೋಲಿನ ಭೀತಿಯಿಂದ ಬೋಪಯ್ಯ ನೇಮಕಕ್ಕೆ ಆಕ್ಷೇಪ: ಶೋಭಾ ಕರಂದ್ಲಾಜೆ

Update: 2018-05-18 21:48 IST

ಬೆಂಗಳೂರು, ಮೇ 19: ‘ಚುನಾವಣೆಯ ಸೋಲಿನಿಂದ ಹತಾಶೆಗೊಂಡಿರುವ ಕಾಂಗ್ರೆಸ್ ಮುಖಂಡರು, ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯರ ನೇಮಕಕ್ಕೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದು, ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.

ಶುಕ್ರವಾರ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬೋಪಯ್ಯ ಈ ಹಿಂದೆಯೂ ವಿಧಾನಸಭೆ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. 2008ರಲ್ಲಿ ಕಾಂಗ್ರೆಸ್ ನೇಮಿಸಿದ್ದ ರಾಮೇಶ್ವರ ಠಾಕೂರ್ ರಾಜ್ಯಪಾಲರಾಗಿದ್ದರು. ಕಾಂಗ್ರೆಸ್‌ಗೆ ಆಗ ಸ್ಪೀಕರ್ ಬಗ್ಗೆ ತಕರಾರು ಇರಲಿಲ್ಲ. ಹೀಗೇಕೆ ಆಕ್ಷೇಪಿಸುತ್ತಿದ್ದಾರೆಂದು ವಾಗ್ದಾಳಿ ನಡೆಸಿದರು.

ಚುನಾವಣೆ ಸಂದರ್ಭ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಪರಸ್ಪರ ಸ್ಪರ್ಧೆಗಿಳಿದಿದ್ದರು. ಎಷ್ಟೋ ಊರುಗಳಲ್ಲಿ ಬಿಗು ಪರಿಸ್ಥಿತಿ ಇತ್ತು. ಇಂದಿಗೂ ಪರಿಸ್ಥಿತಿ ತಿಳಿಯಾಗಿಲ್ಲ. ನಾಯಕರು ಒಂದಾದ ತಕ್ಷಣ ಕಾರ್ಯಕರ್ತರು ಒಂದಾಗಲು ಸಾಧ್ಯವಿಲ್ಲ ಎಂದು ಲೇವಡಿ ಮಾಡಿದರು.

ಜೆಡಿಎಸ್-ಕಾಂಗ್ರೆಸ್ ರಾಜ್ಯ ಮಟ್ಟದಲ್ಲಿ ಮೈತ್ರಿ ಮಾಡಿಕೊಂಡರೆ ಕ್ಷೇತ್ರದಲ್ಲಿ ಕಾರ್ಯಕರ್ತರಿಗೆ ಮುಖತೋರಿಸಲು ಸಾಧ್ಯವಿಲ್ಲವೆಂಬ ಭೀತಿ ಕಾಂಗ್ರೆಸ್ ಶಾಸಕರಲ್ಲಿದೆ ಎಂದ ಅವರು, ತಮ್ಮ ಶಾಸಕರು ಹತಾಶರಾಗಿರುವುದನ್ನು ತಿಳಿದಿರುವ ಕಾಂಗ್ರೆಸ್ ನಾಯಕರು ಈಗ ಸ್ಪೀಕರ್ ಆಯ್ಕೆಯನ್ನು ಪ್ರಶ್ನಿಸುತ್ತಿದ್ದಾರೆ ಎಂದರು.

ಯಾರು ಏನೇ ಹೇಳಿದರೂ ನಾಳೆ ಹಂಗಾಮಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರ ನೇತೃತ್ವದಲ್ಲಿ ಅಧಿವೇಶನ ನಡೆಯಲಿದೆ. ನಮ್ಮ ಪರ 120ಕ್ಕೂ ಹೆಚ್ಚು ಶಾಸಕರಿದ್ದು, ಮುಖ್ಯಮಂತ್ರಿ ಯಡಿಯೂರಪ್ಪ ಬಹುಮತ ಸಾಬೀತುಪಡಿಸಲಿದ್ದಾರೆಂದು ಅವರು ಭರವಸೆ ವ್ಯಕ್ತಪಡಿಸಿದರು.

ಪ್ರಧಾನಿ ಮೋದಿ, ಅಮಿತ್ ಶಾ ನೇತೃತ್ವದಲ್ಲಿ ಬಿಜೆಪಿ 22 ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಸೋನಿಯಾ-ರಾಹುಲ್ ನೇತೃತ್ವದಲ್ಲಿ ನೀವು ಮಾಡಿರುವ ಸಾಧನೆ ಏನು? ಇಂದಿರಾಗಾಂಧಿ ಕಾಲದಲ್ಲಿ ಕಾಂಗ್ರೆಸ್ ಆಳ್ವಿಕೆ ನಡೆಸುತ್ತಿದ್ದ ರಾಜ್ಯಗಳಿಗಿಂತಲೂ ಈಗ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ ಹೆಚ್ಚು ಎಂದರು. ಗೋಷ್ಠಿಯಲ್ಲಿ ಶಾಸಕ ಅರಗ ಜ್ಞಾನೇಂದ್ರ, ಪಕ್ಷದ ಮುಖಂಡರಾದ ವಾಮನಾಚಾರ್ಯ, ಅನ್ವರ್ ಮಾಣಿಪ್ಪಾಡಿ, ಭಾರತಿ ಶೆಟ್ಟಿ ಹಾಜರಿದ್ದರು.

‘ಅಧಿಕಾರದಲ್ಲಿದ್ದಾಗ ಹಿಟ್ಲರ್, ಗದಾಫಿಯಂತೆ ನಡೆದುಕೊಂಡವರಿಗೆ ಈಗ ಭಯ ಕಾಡುತ್ತಿದೆ. 130ರಷ್ಟಿದ್ದ ಕಾಂಗ್ರೆಸ್ ಶಾಸಕರ ಸಂಖ್ಯೆ 78ಕ್ಕೆ ಕುಸಿದಿದೆ. ಇದಕ್ಕೆ ಅವರ ಅಹಂಕಾರದ ವರ್ತನೆಯೆ ಮೂಲ ಕಾರಣ. ಇಂತಹವರಿಗೆ ಮೋದಿ ಮತ್ತು ಅಮಿತ್ ಶಾ ಬಗ್ಗೆ ಮಾತನಾಡುವ ಅರ್ಹತೆಯೇ ಇಲ್ಲ’
-ಶೋಭಾ ಕರಂದ್ಲಾೆ ಬಿಜೆಪಿ ಪ್ರಧಾನ ಕಾರ್ಯದರ್ಶಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News