ರಾಜ್ಯಪಾಲರ ವಿರುದ್ಧ ಕಾಂಗ್ರೆಸ್‌ ನಾಯಕರು, ಕಾರ್ಯಕರ್ತರಿಂದ ರಾಜಭವನ ಚಲೋ

Update: 2018-05-18 16:39 GMT

ಬೆಂಗಳೂರು, ಮೇ 18: ಸಂವಿಧಾನ ಬಾಹಿರವಾಗಿ, ಪ್ರಜಾಪ್ರಭುತ್ವ ಮೌಲ್ಯಗಳನ್ನು ಬದಿಗೊತ್ತಿ ಬಿಜೆಪಿಗೆ ಅಧಿಕಾರ ನಡೆಸಲು ಅವಕಾಶ ನೀಡಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ವಜೂಭಾಯಿ ವಾಲಾರ ವಿರುದ್ಧ ಕಾಂಗ್ರೆಸ್‌ನ ಹಿರಿಯ ನಾಯಕರು ಹಾಗೂ ಸಾವಿರಾರು ಮಂದಿ ಕಾಂಗ್ರೆಸ್ ಕಾರ್ಯಕರ್ತರು ರಾಜಭವನ ಚಲೋ ನಡೆಸಿದರು.

ಶುಕ್ರವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿ ಮುಂಭಾಗ ಕಾಂಗ್ರೆಸ್‌ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಹಿರಿಯ ನಾಯಕರು ಸೇರಿದಂತೆ ಕಾಂಗ್ರೆಸ್‌ನ ಸಾವಿರಾರು ಕಾರ್ಯಕರ್ತರ ಜೊತೆಗೂಡಿ ರಾಜ್ಯಪಾಲರ ವಿರುದ್ಧ ಧಿಕ್ಕಾರ ಕೂಗುತ್ತಾ ರಾಜ್ಯಭವನ ಕಡೆಗೆ ಹೆಜ್ಜೆ ಹಾಕಿದರು.

ಕಾರ್ಯಕರ್ತರ ಬಂಧನ: ರಾಜ್ಯಭವನಕ್ಕೆ ಮುತ್ತಿಗೆ ಹಾಕಲು ಹೊರಟಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಇಂಡಿಯನ್ ಎಕ್ಸ್‌ಪ್ರೆಸ್ ಸಮೀಪದ ಕಾಫಿ ಬೋರ್ಡ್ ಬಳಿ ಪೊಲೀಸರು ತಡೆದರು. ಇದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ರಸ್ತೆ ಮಧ್ಯೆದಲ್ಲಿಯೆ ಪ್ರತಿಭಟನೆ ಕೈಗೊಂಡಾಗ ಅವರನ್ನು ಬಂಧಿಸಲಾಯಿತು.

ಈ ವೇಳೆ ಮಾಜಿ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಶಾಸಕರ ಸಂಖ್ಯಾಬಲವೇ ಮುಖ್ಯ. ಆದರೆ, ರಾಜ್ಯಪಾಲರು ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಸಂಖ್ಯಾಬಲ ಇಲ್ಲದ ಬಿಜೆಪಿಗೆ ಸರಕಾರ ರಚಿಸಲು ಅನುಮತಿ ಕೊಟ್ಟಿರುವುದನ್ನು ಕಾಂಗ್ರೆಸ್ ಜೊತೆಗೆ ಇಡೀ ರಾಜ್ಯದ ಜನತೆ ಖಂಡಿಸುತ್ತಿದ್ದಾರೆ ಎಂದು ತಿಳಿಸಿದರು.

ನಾವು ಒಗ್ಗಟ್ಟಾಗಿದ್ದೇವೆ: ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರು ಒಟ್ಟಾಗಿದ್ದೇವೆ. ನಮ್ಮಲ್ಲಿ ಯಾವುದೆ ಭಿನ್ನಾಭಿಪ್ರಾಯವಿಲ್ಲ. ಲಿಂಗಾಯತ ಶಾಸಕರನ್ನು ಬಿಜೆಪಿ ನಾಯಕರು ಹೈಜಾಕ್ ಮಾಡಲು ಸಾಧ್ಯವಿಲ್ಲ. ಹಾಗೂ ಪಕ್ಷೇತರ ಶಾಸಕರು ನಮ್ಮ ಜೊತೆ ಇದ್ದಾರೆ ಎಂದು ಅವರು ಹೇಳಿದರು.

ರಾಜ್ಯಪಾಲರ ಕಾನೂನು ಬಾಹಿರ ಆದೇಶಗಳಿಗೆ ಸುಪ್ರೀಂ ಕೋರ್ಟ್ ತಕ್ಕ ಶಾಸ್ತಿ ಮಾಡಿದೆ. ಈಗಲಾದರೂ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳನ್ನು, ಆಶಯಗಳನ್ನು ಎತ್ತಿ ಹಿಡಿಯಲಿ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News