ಜನತೆ ಎಚ್ಚೆತ್ತುಕೊಳ್ಳುವುದೆಂದು?

Update: 2018-05-18 18:31 GMT

ಮಾನ್ಯರೇ,

ಇದು ಡಿಜಿಟಲ್ ಯುಗ. ಎಲ್ಲವೂ ಕೂತಲ್ಲೇ, ನಿಂತಲ್ಲೇ ಕೆಲಸ ಆಗಬೇಕೆಂಬ ಹಂಬಲ. ಹೀಗಾಗಿ ಆನ್‌ಲೈನ್ ಬ್ಯುಸಿನೆಸ್, ಆನ್‌ಲೈನ್ ಫ್ರೆಂಡ್‌ಶಿಪ್, ಆನ್‌ಲೈನ್ ಮ್ಯಾರೇಜ್ ಎಂಬ ಕಾನ್ಸೆಪ್ಟ್ ಹುಟ್ಟಿಕೊಂಡಿದೆ. ಮ್ಯಾರೇಜ್ ಸೈಟ್‌ವೊಂದರಲ್ಲಿ ಯುವಕನೋರ್ವ ಯುವತಿಯಿಂದ ಲಕ್ಷ ಲಕ್ಷ ಹಣ ಪಡೆದು ಮೋಸ ಮಾಡಿದ ಘಟನೆ ಮೊನ್ನೆ ಯಷ್ಟೇ ವರದಿಯಾಗಿತ್ತು. ಇದರ ಜೊತೆಗೆ ಫೇಸ್‌ಬುಕ್‌ನಲ್ಲಿ ಸಹ ಖಾಸಗಿ ಕಂಪೆನಿ ಉದ್ಯೋಗಿಯೊಬ್ಬರಿಗೆ ಸೈಬರ್ ವಂಚಕರು, ಔಷಧ ತಯಾರಿಸುವ ಬೀಜಗಳನ್ನು ಕಡಿಮೆ ಬೆಲೆಗೆ ನೀಡುವುದಾಗಿ ನಂಬಿಸಿ ರೂ. 39 ಲಕ್ಷ ಪಡೆದು ಮೋಸ ಮಾಡಿದ ಘಟನೆ ಇತ್ತೀಚೆಗೆ ಬೆಂಗಳೂರಲ್ಲಿ ಬೆಳಕಿಗೆ ಬಂದಿದೆ. ಈ ವರದಿಗಳು ಮತ್ತಷ್ಟು ಆತಂಕ ಸೃಷ್ಟಿಸಿದೆ.
ಆನ್‌ಲೈನ್ ವ್ಯವಸ್ಥೆಯ ಬಳಕೆ ಹೆಚ್ಚಾಗುತ್ತಿದ್ದಂತೆ ಇತ್ತ ಆನ್‌ಲೈನ್ ಮೋಸದಾಟವೂ ಹೆಚ್ಚಾಗುತ್ತಿದೆ. ಮಾಹಿತಿಯ ಕೊರತೆಯಿಂದ ಜನರು ಮೋಸಕ್ಕೊಳಗಾಗುತ್ತಿದ್ದಾರೆ. ಯಾವುದು ಸತ್ಯ, ಅಸತ್ಯ ಎಂಬುದರ ಬಗ್ಗೆ ಯೋಚನೆ ಮಾಡದೆ ಸುಲಭವಾಗಿ ಅಮಾಯಕರು ವಂಚಕರಿಗೆ ಬಲಿಯಾಗುತ್ತಿದ್ದಾರೆ. ಆನ್‌ಲೈನ್‌ನಲ್ಲಿ ಸುಲಭವಾಗಿ ಜನರನ್ನು ವಂಚನೆ ಮಾಡುವ ಜಾಲವೇ ಇದೆ. ಅದರಲ್ಲೂ ಸುಲಭದಲ್ಲಿ ಹಣ ಗಳಿಸುವುದು ಹೇಗೆ..? ಹಣ ಹ್ಯಾಕ್ ಮಾಡುವುದು ಹೇಗೆ..? ಇಂತಹ ಟೈಟಲ್‌ಗಳಲ್ಲಿ ಯೂಟ್ಯೂಬ್‌ನಲ್ಲಿ ವೀಡಿಯೋ ಮಾಡಿ ಅಪ್‌ಲೋಡ್ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹವುಗಳು ಜನರನ್ನು ಅದರಲ್ಲೂ ಮುಖ್ಯವಾಗಿ ಯುವಕರನ್ನು ಹಾದಿ ತಪ್ಪಿಸುತ್ತಿದೆ. ಹೀಗಾಗಿ ಇಂತಹ ಅಪರಾಧ ಎಸಗುವವರ ವಿರುದ್ಧ ಸೈಬರ್ ಪೊಲೀಸರು ಸಾಕಷ್ಟು ಎಚ್ಚರಿಕೆ ವಹಿಸಿ ಸೂಕ್ತ ಕ್ರಮಗಳನ್ನು ತೆಗೆದುಕೊಂಡು ತಕ್ಕ ಶಿಕ್ಷೆ ನೀಡಬೇಕಾಗಿದೆ.

Writer - ಶಂಶೀರ್ ಬುಡೋಳಿ, ಬಂಟ್ವಾಳ

contributor

Editor - ಶಂಶೀರ್ ಬುಡೋಳಿ, ಬಂಟ್ವಾಳ

contributor

Similar News