×
Ad

ಇನ್ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಮೋದಿಯನ್ನು ಹೊಗಳಿದ್ದರೇ?: ವೈರಲ್ ಪೋಸ್ಟ್ ಹಿಂದಿನ ಸತ್ಯಾಂಶ ಇಲ್ಲಿದೆ

Update: 2018-05-19 13:38 IST

ಬೆಂಗಳೂರು, ಮೇ 19: ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಅವರು ಪ್ರಧಾನಿ ಮೋದಿಯನ್ನು ಹೊಗಳಿದ್ದಾರೆಂಬ ಪೋಸ್ಟ್ ಒಂದು ಫೇಸ್ ಬುಕ್ ಮತ್ತು ವಾಟ್ಸ್ಆ್ಯಪ್ ನಲ್ಲಿ ವೈರಲ್ ಆಗಿದ್ದರೂ ಇದೊಂದು ನಕಲಿ ಪೋಸ್ಟ್ ಎಂದು Altnews.in ಹೇಳಿದೆ.

‘‘ಶ್ರೀ ಎನ್ ಆರ್ ನಾರಾಯಣ ಮೂರ್ತಿ - ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ 15ನೇ ಆಗಸ್ಟ್ ಭಾಷಣದ ನಂತರ ಅವರ ಭಾಷಣವನ್ನು ಮತ್ತೆ ನೋಡಿದೆ. ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ ಮೊದಲ ಬಾರಿ ನನ್ನ ದೇಶ ಸುರಕ್ಷಿತವಾಗಿದೆ ಎಂದು ನನಗೆ ಗೊತ್ತಿದೆ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ ವಿದೇಶಿ ನೆಲದಲ್ಲಿ ರಾಜಕಾರಣಿಯೊಬ್ಬನ ಭಾಷಣಕ್ಕೆ 20,000 ಭಾರತೀಯರು ಸೇರಿದ್ದು ಮೊದಲ ಬಾರಿ ಎಂದು ತಿಳಿದಿದೆ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ ಪ್ರತಿಯೊಬ್ಬ ಅನಿವಾಸಿ ಭಾರತೀಯ ಹೆಮ್ಮೆ ಪಟ್ಟಿದ್ದು ಇದೇ ಮೊದಲ ಬಾರಿ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಭಾರತೀಯ ಪ್ರಧಾನಿಯನ್ನು 80 ದೇಶಗಳು ಕೇಳುತ್ತಿರುವುದು ಇದೇ ಮೊದಲ ಬಾರಿ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ ಪಾಕಿಸ್ತಾನವನ್ನು ಸಂಪೂರ್ಣ ಹದ್ದುಬಸ್ಸಿನಲ್ಲಿಡಲಾಗಿದ್ದು ಹಾಗೂ ಚೀನಾಕ್ಕೆ ಭಯ ಮೂಡಿದ್ದು ಇದೇ ಮೊದಲ ಬಾರಿ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ತಾನೇ ಏಕೈಕ ದೊಡ್ಡ ಶಕ್ತಿಯಲ್ಲವೆಂದು ಅಮೆರಿಕಾಗೆ ಮೊದಲ ಬಾರಿ ತಿಳಿದು ಬಂದಿದೆ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ ತಾನು ಮಾತ್ರ ಅತ್ಯಂತ ಪ್ರಸಿದ್ಧ ರಾಜಕಾರಣಿಯಲ್ಲ ಎಂದು ಒಬಾಮಗೆ ಪ್ರಥಮ ಬಾರಿ ಮನವರಿಕೆಯಾಗಿದೆ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ನಾವೇಕೆ ಆಗಿದ್ದೇವೆ ಎಂದು ಮೊದಲ ಬಾರಿ ಜಗತ್ತಿಗೆ ಗೊತ್ತಾಗಿದೆ".

"ಮೋದಿ ಅತ್ಯುತ್ತಮ ಪ್ರಧಾನಿ ಎಂದು ಹೇಳುವುದಿಲ್ಲ, ಆದರೆ ಮೊದಲ ಬಾರಿಗೆ ನಾನೊಬ್ಬ ಹೆಮ್ಮೆಯ ಭಾರತೀಯ ಎಂದು ನನಗೆ ಗೊತ್ತಾಗಿದೆ"...  ಹೀಗೆ ನಾರಾಯಣ ಮೂರ್ತಿಯವರು ಮೋದಿಯನ್ನು ಹೊಗಳಿದ್ದಾರೆ ಎನ್ನುವ ಪೋಸ್ಟ್ ಗಳು ವೈರಲ್ ಆಗಿತ್ತು.

ಆದರೆ ಈ ಬಗ್ಗೆ ನಾರಾಯಣ ಮೂರ್ತಿ ಅವರ ಕಾರ್ಯದರ್ಶಿ ಎ ಜಿ ಪಾಂಡುರಂಗ ಅವರ ಮೂಲಕ Altnews.in ಸ್ಪಷ್ಟೀಕರಣ ಕೇಳಿದಾಗ ‘‘ನನಗೆ ಪ್ರಧಾನಿ ಮೋದಿ ಮೇಲೆ ಗೌರವವಿದೆಯಾದರೂ ಇವುಗಳು ನನ್ನ ಮಾತುಗಳಲ್ಲ,’’ ಎಂದು ನಾರಾಯಣ ಮೂರ್ತಿ ಪ್ರತಿಕ್ರಿಯಿಸಿದ್ದಾರೆ.

ಇದೇ ಸಂದೇಶವೊಂದನ್ನು ಡಿಸೆಂಬರ್ 5, 2015ರಂದು ಆಶಿಶ್ ಕುಮಾರ್ ಶರ್ಮಾ ಎಂಬಾತ ಮಾಡಿದ್ದು ಅದು 50,000 ಕ್ಕೂ ಅಧಿಕ ಬಾರಿ ಶೇರ್ ಆಗಿದೆ. ಆದರೆ ಮೊದಲ ಬಾರಿ ಈ ಪೋಸ್ಟ್ ನಲ್ಲಿ ಅದು ನಾರಾಯಣ ಮೂರ್ತಿ ಅವರ ಮಾತೆಂದು ಬಿಂಬಿಸಲಾಗಿರಲಿಲ್ಲ ಹಾಗೂ ಮೊದಿ ಸೆಪ್ಟೆಂಬರ್ 2014ರಲ್ಲಿ ಮ್ಯಾಡಿಸನ್ ಸ್ಕ್ವೇರ್ ಭಾಷಣ ಮಾಡಿದ ನಂತರ ಇದು ಶೇರ್ ಆಗಿತ್ತು.

ಆದರೆ ಇತ್ತೀಚೆಗೆ ಇದೇ ಸಂದೇಶ ಇದು ನಾರಾಯಣ ಮೂರ್ತಿ ಅವರು ಮೋದಿಯನ್ನು ಹೊಗಳಿದ್ದು ಎಂಬರ್ಥದಲ್ಲಿ ಸಂದೇಶಗಳು ಹರಿದಾಡುತ್ತಿವೆ. ಹೀಗೆಂದು ಮೊದಲು ಬರೆದವರು ಮನೀಶಾ ಎಂಬವರು. ಆಶ್ಚರ್ಯವೆಂದರೆ ಈಕೆಯನ್ನು ಪ್ರಧಾನಿ ಟ್ವಿಟ್ಟರ್ ನಲ್ಲಿ ಫಾಲೋ ಮಾಡುತ್ತಿದ್ದಾರೆ.

ನವೆಂಬರ್ 2016ರಲ್ಲಿ ಕೂಡ ನಾರಾಯಣಮೂರ್ತಿ ಅವರ ಮಾತೆಂದು ಇದೇ ಪೋಸ್ಟ್ ಅನ್ನು ರೇಣುಕಾ ಜೈನ್ ಎಂಬವರು ಟ್ವಿಟ್ಟರ್ ನಲ್ಲಿ ಶೇರ್ ಮಾಡಿದ್ದರು. ಈಕೆಯನ್ನೂ ಮೋದಿ ಫಾಲೋ ಮಾಡುತ್ತಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News