ವಿಶ್ವಾಸಮತಯಾಚನೆಗೆ ಅಸಮರ್ಥರಾಗಿ ಬಿಎಸ್ ವೈ ಪಲಾಯನ ಮಾಡಿದ್ದು ಪ್ರಜಾಪ್ರಭುತ್ವದ ಜಯ: ಸಿದ್ದರಾಮಯ್ಯ

Update: 2018-05-19 13:13 GMT

ಬೆಂಗಳೂರು, ಮೇ 19: ಮುಖ್ಯಮಂತ್ರಿ ಯಡಿಯೂರಪ್ಪ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ವಿಫಲರಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಪ್ರಕಟಿಸಿರುವುದು ಸಂವಿಧಾನ, ನ್ಯಾಯಾಂಗ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆಗೆ ಸಂದ ಗೆಲುವು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಶನಿವಾರ ವಿಧಾನಸಭೆಯ ವಿರೋಧ ಪಕ್ಷದ ಮೊಗಸಾಲೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವಾಸಮತಯಾಚನೆ ಮಾಡುವುದಾಗಿ ಒಪ್ಪಿಕೊಂಡು ಆನಂತರ ವಿಶ್ವಾಸಮತಯಾಚನೆ ಮಾಡದೆ ಅಸಮರ್ಥರಾಗಿ ಪಲಾಯನ ಮಾಡಿದ್ದಾರೆ ಎಂದರು.

ರೈತರ ಕಲ್ಯಾಣ ಮಾಡಬೇಕು, ಅವರಿಗೆ ನೆಮ್ಮದಿಯ ಬದುಕು ಕಲ್ಪಿಸಬೇಕು. ನೀರಾವರಿಗೆ ಒಂದು ಲಕ್ಷ ಕೋಟಿ ರೂ.ಮೀಸಲಿಡುತ್ತೇನೆ. ಅವರ ಸಾಲ ಮರು ಪಾವತಿ ಮಾಡುತ್ತೇನೆ ಎನ್ನುವ ಯಡಿಯೂರಪ್ಪ, ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ನನ್ನ ಬಳಿ ನೋಟು ಮುದ್ರಣ ಮಾಡುವ ಯಂತ್ರ ಇಲ್ಲ ಎಂದಿದ್ದರು ಎಂದು ಸಿದ್ದರಾಮಯ್ಯ ಟೀಕಿಸಿದರು.

ಯಡಿಯೂರಪ್ಪನಂತಹ ಢೋಂಗಿ, ಭ್ರಷ್ಟ, ರಾಜ್ಯದ ರಾಜಕಾರಣದಲ್ಲಿ ಇನ್ನೊಬ್ಬ ಸಿಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಅವರು ಹೊರಟಿದ್ದರು, ಕಾನೂನು, ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಸರಕಾರ ರಚನೆಗೆ ಅಗತ್ಯವಿರುವ ಸಂಖ್ಯಾಬಲ ಹೊಂದಿರುವ ನಮ್ಮ ಮೈತ್ರಿಕೂಟಕ್ಕೆ ರಾಜ್ಯಪಾಲರು ಆಹ್ವಾನಿಸಬೇಕಿತ್ತು. ಆದರೆ, ಅವರು 104 ಸ್ಥಾನಗಳನ್ನು ಹೊಂದಿದ್ದ ಬಿಜೆಪಿಯನ್ನು ಆಹ್ವಾನಿಸಿದರು. ಇದೀಗ, ಯಡಿಯೂರಪ್ಪ ರಾಜೀನಾಮೆ ನೀಡಿರುವುದರಿಂದ ನಮ್ಮ ಮೈತ್ರಿಕೂಟಕ್ಕೆ ರಾಜ್ಯಪಾಲರು ಆಹ್ವಾನ ನೀಡಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಶ್ವಾಸಮತ ಯಾಚನೆಗೆ ಯಡಿಯೂರಪ್ಪ 1 ವಾರ ಕಾಲಾವಕಾಶ ಕೋರಿದರೆ, ರಾಜ್ಯಪಾಲರು 15 ದಿನ ನೀಡಿದ್ದರು. ಕುದುರೆ ವ್ಯಾಪಾರಕ್ಕೆ ರಾಜ್ಯಪಾಲರೇ ಪ್ರೋತ್ಸಾಹ ನೀಡಿದಂತಾಗಲಿಲ್ಲವೇ ? ಜನಾರ್ದನರೆಡ್ಡಿ, ಶ್ರೀರಾಮುಲು, ಸೋಮಶೇಖರರೆಡ್ಡಿಯನ್ನು ಬಿಟ್ಟು ಶಾಸಕರ ಖರೀದಿ ಮಾಡಲು ಮುಂದಾಗಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.

ರಾಜ್ಯಪಾಲರು ಕಾನೂನಿನ ವಿರುದ್ಧವಾಗಿ ಯಡಿಯೂರಪ್ಪರನ್ನು ಸರಕಾರ ರಚನೆಗೆ ಆಹ್ವಾನ ನೀಡಲು ಪ್ರಧಾನಿ ನರೇಂದ್ರಮೋದಿ, ಬಿಜೆಪಿ ಅಮಿತ್ ಶಾ ಕಾರಣ. ಅವರ ಹಾಗೂ ಕೇಂದ್ರ ಸಚಿವರ ಒತ್ತಾಯದ ಮೇರೆಗೆ ಈ ಪ್ರಕ್ರಿಯೆ ನಡೆದಿದೆ. ಯಾವುದೇ ಕಾರಣಕ್ಕೂ ನಾವು ಬೇರೆಯವರಿಗೆ ಸರಕಾರ ರಚನೆಗೆ ಅವಕಾಶ ನೀಡುವುದಿಲ್ಲ ಎಂದು ನರೇಂದ್ರಮೋದಿ ಹೇಳಿಕೆ ನೀಡಿದ್ದರ ಹಿಂದಿನ ಅರ್ಥವೇನು ಎಂದು ಅವರು ಪ್ರಶ್ನಿಸಿದರು.

ಕರ್ನಾಟಕದ, ದೇಶದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘಟನೆಯಾಗಿದೆ. ರಾಜ್ಯಪಾಲರ ಮೇಲೆ ನರೇಂದ್ರ ಮೋದಿಯವರಿಂದ ಒತ್ತಡ ಹಾಕಿಸಿ ಯಡಿಯೂರಪ್ಪರಿಗೆ  ಸರಕಾರ ರಚನೆಗೆ ಅವಕಾಶ ಮಾಡಿಕೊಟ್ಟದ್ದು ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ. ಪ್ರಜಾಪ್ರಭುತ್ವದಲ್ಲಿ ಜನರ ತೀರ್ಪನ್ನು ಒಪ್ಪಬೇಕಾದದ್ದು ಪ್ರಜಾಪ್ರಭುತ್ವವಾದಿಗಳ ಕರ್ತವ್ಯ. ಆದರೆ ಮೋದಿ, ಅಮಿತ್ ಶಾ, ಕೇಂದ್ರದ ಕೆಲ ಮಂತ್ರಿಗಳು ಪ್ರಜಾಪ್ರಭುತ್ವ ವಿರೋಧಿಯಾಗಿ ನಡೆದುಕೊಂಡರು. ಮೋದಿ ಹಿಟ್ಲರ್, ಅಮಿತ್ ಶಾ ಗೋಬೆಲ್ಸ್  ಇದ್ದಂತೆ ಎಂದವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News