ಭಾವನಾತ್ಮಕ ಮಾತುಗಳ ಮೂಲಕ ಅನುಕಂಪ ಗಿಟ್ಟಿಸಲು ಬಿಎಸ್‌ವೈ ಯತ್ನ: ಕುಮಾರಸ್ವಾಮಿ ಲೇವಡಿ

Update: 2018-05-19 14:28 GMT

ಬೆಂಗಳೂರು, ಮೇ 19: ಬಿ.ಎಸ್.ಯಡಿಯೂರಪ್ಪನವರು ಭಾವನಾತ್ಮಕ ಮಾತುಗಳ ಮೂಲಕ ಮತ್ತೊಮ್ಮೆ ನಾಡಿನ ಜನತೆಯಲ್ಲಿ ಅನುಕಂಪ ಮೂಡಿಸಲು ಮುಂದಾಗಿದ್ದಾರೆ. ಇದು ಅತ್ಯಂತ ನಾಟಕೀಯ ಬೆಳವಣಿಗೆಯಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಲೇವಡಿ ಮಾಡಿದ್ದಾರೆ.

ಶನಿವಾರ ವಿಧಾನಸಭೆಯಲ್ಲಿನ ವಿಶ್ವಾಸ ಮತಯಾಚನೆ ಕಲಾಪದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕ ರಾಜ್ಯದ ಅಭಿವೃದ್ಧಿಯ ಬಗ್ಗೆ ಅವರು ಮಾತನಾಡಿದ ಪ್ರತಿ ಮಾತುಗಳು ನಾಟಕೀಯವಾಗಿದೆ. ಈ ಬೆಳವಣಿಗೆ ಅವರ ಮುಖಭಾವದಲ್ಲಿ ಎದ್ದು ಕಾಣುತ್ತಿತ್ತು ಎಂದು ಟೀಕಿಸಿದರು.

2008ರಲ್ಲಿ ಅನುಕಂಪದ ಮೂಲಕ ಅವಕಾಶ ಗಿಟ್ಟಿಸಿಕೊಂಡು ಅಧಿಕಾರಕ್ಕೆ ಬಂದಿದ್ದರು. ಆದರೆ ಅದು ಈ ಬಾರಿ ನಡೆಯುವುದಿಲ್ಲ ಎಂದ ಕುಮಾರಸ್ವಾಮಿ, ಸುಪ್ರೀಂ ಕೋರ್ಟ್ 24ಗಂಟೆಗಳಲ್ಲಿ ಬಹುಮತ ಸಾಬೀತು ಪಡಿಸಬೇಕೆಂದು ಆದೇಶ ನೀಡದಿದ್ದರೆ ರಾಜ್ಯದ ಪರಿಸ್ಥಿತಿ ಹದಗೆಡುತ್ತಿತ್ತು. ಒಂದು ವೇಳೆ ಬಿಜೆಪಿಯವರು 15 ದಿನ ಅಧಿಕಾರದಲ್ಲಿದ್ದರೆ ಕುದುರೆ ವ್ಯಾಪಾರ ಮಾಡುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು.

ನಮ್ಮ ಶಾಸಕರಿಗೆ ನಾವು ಅವರ ಕುಟುಂಬದವರ ಜೊತೆ ಮಾತನಾಡಲು ಬಿಡಲಿಲ್ಲ ಎಂದು ಆರೋಪಿಸಿ, ಅನುಕಂಪ ಗಿಟ್ಟಿಸಿಕೊಳ್ಳಲು ಯಡಿಯೂರಪ್ಪ ಪ್ರಯತ್ನಿಸಿದ್ದಾರೆ. ಆದರೆ, ಈ ಬೆಳವಣಿಗೆಗೆ ತಾವೇ ಕಾರಣ ಎನ್ನುವುದನ್ನು ಅವರು ಮರೆತಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News