‘ಬಿ’ ಟೀಂ ಜತೆ ಸೇರಿಕೊಂಡವರಿಂದ ನಾವು ಪಾಠ ಕಲಿಯಬೇಕಿಲ್ಲ: ಕೇಂದ್ರ ಸಚಿವ ಜಾವಡೇಕರ್

Update: 2018-05-19 14:33 GMT

ಬೆಂಗಳೂರು, ಮೇ 19: ಜೆಡಿಎಸ್, ಬಿಜೆಪಿ ‘ಬಿ’ ಟೀಂ ಎನ್ನುತ್ತಿದ್ದವರು ಇದೀಗ ಅಧಿಕಾರಕ್ಕಾಗಿ ಅದೇ ಟೀ ಜೊತೆ ಸೇರಿಕೊಂಡಿದ್ದಾರೆ. ಇಂತಹವರಿಂದ ಸಂವಿಧಾನ ಮತ್ತು ಭ್ರಷ್ಟಾಚಾರದ ಬಗ್ಗೆ ಬಿಜೆಪಿ ಪಾಠ ಕಲಿಯಬೇಕಿಲ್ಲ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿರುಗೇಟು ನೀಡಿದ್ದಾರೆ.

ಶನಿವಾರ ವಿಧಾನಸಭೆಯಲ್ಲಿ ವಿಶ್ವಾಸಮತಯಾಚನೆ ಬಳಿಕ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಖರೀದಿಸಲಾಗುತ್ತಿದೆ ಎಂಬ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಅದು ಶುದ್ಧ ಸುಳ್ಳು ಎಂದು ಹೇಳಿದರು.

ಕಾಂಗ್ರೆಸ್ ಕಾನೂನಿಗೆ ಗೌರವ ನೀಡುವುದಿಲ್ಲ ಎಂಬುದು ಹಲವು ಪ್ರಕರಣಗಳಲ್ಲಿ ಬಹಿರಂಗವಾಗಿದೆ. ಹೀಗಿರುವಾಗಿ ಅವರು ರಾಜ್ಯಪಾಲರ ಹುದ್ದೆಗೆ ಗೌರವ ನೀಡುತ್ತಾರೆಂದು ನಿರೀಕ್ಷಿಸಲು ಹೇಗೆ ಸಾಧ್ಯ ಎಂದ ಅವರು, ಬಿಜೆಪಿ ಸೋಲಿಸಿದ್ದೇವೆ ಎಂಬ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ಹಾಸ್ಯಾಸ್ಪದ ಎಂದು ಟೀಕಿಸಿದರು.

ಯಡಿಯೂರಪ್ಪ ತಮ್ಮ ಭಾಷಣದ ಮೂಲಕ ಪ್ರಜಾತಂತ್ರಕ್ಕೆ ಹೇಗೆ ಗೌರವ ನೀಡಬೇಕು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ ಅವರು ವಿಶ್ವಾಸಮತ ಯಾಚನೆ ಮಾಡದೆ ರಾಜೀನಾಮೆ ನೀಡಿದ್ದಾರೆ ಎಂದು ಜಾವಡೇಕರ್ ಇದೇ ವೇಳೆ ತಿಳಿಸಿದರು.

ಭೂತದ ಬಾಯಲ್ಲೇ ಭಗವದ್ಗೀತೆ ಪಠಣ ಮಾಡಿದಂತೆ ಕಾಂಗ್ರೆಸ್ ನಡವಳಿಕೆ ಇದ್ದು, ಕಾಂಗ್ರೆಸ್ ಭ್ರಷ್ಟಾಚಾರ ಮಾಡೇ ಮಾಡ್ತೀನಿ, ಭ್ರಷ್ಟಾಚಾರ ಬಿಟ್ಟು ಬೇರೇನೂ ಮಾಡೋದಿಲ್ಲ ಅಂತ ಶಪಥ ಮಾಡಿದೆ ಎಂದು ಕಿಡಿಕಾರಿದ ಅವರು, ರಾಜೀವ್ ಗಾಂಧಿ ಸತ್ಯವನ್ನೇ ಹೇಳುತ್ತಿದ್ದರು. ದಿಲ್ಲಿಯಲ್ಲಿ ಬಿಡುಗಡೆಯಾದ ಹಣ ಜನರಿಗೆ ತಲುಪುವಾಗ ಸೋರಿ ಹೋಗುತ್ತಿತ್ತು. ಆದರೆ, ಮೋದಿ ದಿಲ್ಲಿಯಲ್ಲಿ 100 ರೂ.ಬಿಡುಗಡೆ ಮಾಡಿದರೆ 100 ರೂ.ಜನರಿಗೇ ತಲುಪುತ್ತದೆ. ಒಬ್ಬ ವ್ಯಕ್ತಿಯನ್ನು ಗುರಿಯಾಗಿಟ್ಟುಕೊಂಡು ದ್ವೇಷಿಸುವುದು ರಾಜನೀತಿ ಅಲ್ಲ. ಸೋಲನ್ನೂ ಕೂಡ ಗೆಲುವು ಅಂತ ಕಾಂಗ್ರೆಸ್ ಭಾವಿಸಿದೆ ಎಂದ ಅವರು, ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರಕಾರ ರಚನೆಯಾದರೂ ಆದಷ್ಟು ಶೀಘ್ರ ಪತನಗೊಳ್ಳಲಿದೆ ಎಂದು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News