ಅತ್ಯಲ್ಪಾವಧಿ ಮುಖ್ಯಮಂತ್ರಿಯಾಗಿ ಬಿಎಸ್‌ವೈ ದಾಖಲೆ!

Update: 2018-05-19 14:54 GMT

ಬೆಂಗಳೂರು, ಮೇ 19: ಸದನದಲ್ಲಿ ಬಹುಮತ ಸಾಬೀತುಪಡಿಸುವ ಮುನ್ನವೇ, ತನಗೆ ಅಗತ್ಯವಿರುವ 8 ಸದಸ್ಯರ ಬೆಂಬಲ ಪಡೆಯುವ ಬಗ್ಗೆ ವಿಶ್ವಾಸ ಕಳೆದುಕೊಂಡ ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆಗೆ ಮುಂದಾದ ಹಿನ್ನೆಲೆಯಲ್ಲಿ, ಕೇವಲ ಮೂರು ದಿನಗಳ ಹಿಂದಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಬಿಜೆಪಿ ಸರಕಾರ ಪತನಗೊಂಡಿದೆ.

ರಾಜ್ಯದಲ್ಲಿ ಮೇ 12ರಂದು ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತವಿರಲಿ, ಸರಳ ಬಹುಮತವೂ ಬಾರದ ಹಿನ್ನೆಲೆಯಲ್ಲಿ, 15ನೆ ವಿಧಾನಸಭೆಯಲ್ಲಿ 104 ಸ್ಥಾನಗಳನ್ನು ಗಳಿಸಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿಗೆ ಸರಕಾರ ರಚಿಸಲು ತನ್ನ ಹಕ್ಕು ಮಂಡಿಸಿದ್ದನ್ನು ಪರಿಗಣಿಸಿ ರಾಜ್ಯಪಾಲರು ಸಂಪ್ರದಾಯದಂತೆ ಅವಕಾಶ ಕಲ್ಪಿಸಿದರಾದರೂ, 38 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್ ಗೆ 78 ಸ್ಥಾನ ಗಳಿಸಿದ್ದ ಕಾಂಗ್ರೆಸ್‌ ಪೂರ್ಣ ಪ್ರಮಾಣದ ಫಲಿತಾಂಶ ಪ್ರಕಟಗೊಳ್ಳುವ ಮುನ್ನವೇ ಬೇಷರತ್ ಬೆಂಬಲ ಘೋಷಿಸಿತ್ತು.

ಅತ್ಯಂತ ಕ್ಷಿಪ್ರವಾಗಿ ಉಂಟಾದ ಚುನಾವಣೋತ್ತರ ಮೈತ್ರಿ ಮತ್ತು ಸಮೀಕರಣದ ಬೆಳವಣಿಗೆಗಳು ಹಾಗೂ ವಿದ್ಯಮಾನಗಳ ಹಿನ್ನೆಲೆಯಲ್ಲಿ ಒಂದೆಡೆ ಸರಕಾರ ರಚಿಸಲು ಅವಕಾಶ ನೀಡಿದ ರಾಜ್ಯಪಾಲರ ಕ್ರಮ ಸುಪ್ರೀಂ ಕೋರ್ಟ್ ಅಂಗಳವನ್ನು ಪ್ರವೇಶಿಸಿ ನ್ಯಾಯಾಂಗ ಪರಿಶೀಲನೆಯ ಪರಿಧಿಗೊಳಪಟ್ಟಿತು.
ಅಲ್ಲದೆ, ಮತ್ತೊಂದೆಡೆ ಅಧಿಕಾರದ ಗದ್ದುಗೆಗೇರಿದ ಬಿಜೆಪಿ ಅಗತ್ಯ ಬೆಂಬಲ ಪಡೆಯಲು ಸಾಧ್ಯವಾಗದೆ 8 ಸದಸ್ಯರ ಸಂಖ್ಯಾಬಲದ ಕೊರತೆ ಉಂಟಾಗಿ ತನ್ನ ಸರಕಾರವನ್ನು ಉಳಿಸಿಕೊಳ್ಳಲು ಅವಕಾಶವೇ ಇಲ್ಲದಂತಾದದ್ದು, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಕೊಡಬೇಕಾದ ಅನಿವಾರ್ಯ ಹಂತಕ್ಕೆ ದೂಡಿತು.

ರಾಜ್ಯದಲ್ಲಿ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಯಡಿಯೂರಪ್ಪ ಮೂರೇ ದಿನಗಳಲ್ಲಿ ಅಧಿಕಾರದ ಗದ್ದುಗೆಯಿಂದ ದೂರವಾಗಿದ್ದು, ಅತ್ಯಲ್ಪಾವಧಿಯ ಮುಖ್ಯಮಂತ್ರಿ ಎಂದು ರಾಜ್ಯದಲ್ಲಿ ಈ ಹಿಂದೆ 2007ರ ನವೆಂಬರ್ 12ರಿಂದ 19ರ ಅವಧಿಯಲ್ಲಿ ತಾವೇ ದಾಖಲಿಸಿದ್ದ 7 ದಿನಗಳ ಅವಧಿಯ ತಮ್ಮದೇ ದಾಖಲೆಯನ್ನು ಮುರಿದು ಕೇವಲ ಮೂರು ದಿನಗಳ ಅತ್ಯಲ್ಪಾವಧಿಯ ಸಿಎಂ ಆಗಿ ಹೊಸ ದಾಖಲೆ ಸೃಷ್ಟಿಸಿದ್ದು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ಶಾಶ್ವತ ದಾಖಲೆಯಾಗಿಯೇ ಉಳಿಯಲಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News