ಬಲಾಢ್ಯರು, ಕೋಟ್ಯಾಧಿಪತಿಗಳ ಕೈಯಲ್ಲಿ ಕೆರೆಗಳು: ಪರಿಸರವಾದಿ ಡಾ.ಅ.ನ ಯಲ್ಲಪ್ಪರೆಡ್ಡಿ

Update: 2018-05-19 15:59 GMT

ಬೆಂಗಳೂರು, ಮೇ 19: ಮಹಿಳೆಯರ ಶ್ರಮದಿಂದ ಕಟ್ಟಿರುವ ನೂರಾರು ಕೆರೆಗಳನ್ನು ಕೋಟ್ಯಾಧಿಪತಿಗಳು, ಬಲಾಢ್ಯರು, ಉಳ್ಳವರು ಅಕ್ರಮವಾಗಿ ಆಕ್ರಮಿಸಿಕೊಂಡಿದ್ದಾರೆ ಎಂದು ಪರಿಸರವಾದಿ ಡಾ.ಅ.ನ.ಯಲ್ಲಪ್ಪರೆಡ್ಡಿ ಬೇಸರ ವ್ಯಕ್ತಪಡಿಸಿದ್ದಾರೆ.

ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ಯಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದಿನ ಕಾಲದ ಹಿರಿಯರು ಅವರು ದುಡಿದ ಪ್ರತಿಯೊಂದು ಕಾಸನ್ನು ಜೋಪಾನವಾಗಿ ಕೂಡಿಟ್ಟು ಕೆರೆ-ಕಟ್ಟೆಗಳನ್ನು ನಿರ್ಮಿಸಿದ್ದಾರೆ. ಅಲ್ಲದೆ, ಮಹಿಳೆಯರು ತಮ್ಮ ಬಟ್ಟೆ, ಒಡವೆಗಳು ಮಾರಿ ಹಣ ನೀಡಿದ್ದ ಹಲವಾರು ನಿದರ್ಶನಗಳಿವೆ ಎಂದು ಹೇಳಿದರು.

ಜನ ಮನುಷ್ಯನಿಗಿಂತ ಗೋವು, ಪ್ರಾಣಿ, ಪಕ್ಷಿಗಳ ಬಗ್ಗೆ ಯೋಚಿಸಿ ಅವುಗಳಿಗಾಗಿ ಕೆರೆ ಕಟ್ಟಿದರು. ಸ್ವಲ್ಪಸಂಪನ್ಮೂಲದಲ್ಲಿ ಜಾನುವಾರಿಗಾಗಿ ಗೋಕಟ್ಟೆಗಳನ್ನು ಕಟ್ಟಿದರು. ಮನುಷ್ಯನಿಗೆ ನೀರಿನ ಕಷ್ಟ ಎದುರಾದಾಗ ಕಲ್ಯಾಣಿಗಳನ್ನು ಕಟ್ಟಿಸಿದರು. ಬೆಂಗಳೂರಿನ ಸುತ್ತಮುತ್ತ ಅದ್ಭುತವಾದ ಕೆರೆ, ಕಟ್ಟೆ, ಕಲ್ಯಾಣಿಗಳು ನಿರ್ಮಾಣಗೊಂಡವು. ಗೋಕಟ್ಟೆಗಳಿಂದ ಅಂತರ್ಜಲ ಹರಿದುಬರುತಿತ್ತು. ಅಂತರ್ಜಲವನ್ನು ಪರಸ್ಪರ ಸಂಪರ್ಕಿಸಿದರು. ಭೂಮಿಯ ಮೇಲೆ ಬಿದ್ದ ನೀರು ಕೂಡ ಹರಿದುಕೊಂಡು ಹೋಗುತ್ತಿತ್ತು. ಅಲ್ಲಿ ಒಂದು ಕೆರೆ ಕಟ್ಟಿದರೆ ಅನುಕೂಲವಾಗುತ್ತದೆಂಬ ಭಾವನೆಯಿಂದ ನಿರ್ಮಾಣ ಮಾಡಿದ್ದರು. ಆದರೆ, ಇಂದಿನ ಆಧುನೀಕರಣದಲ್ಲಿ ಅಭಿವೃದ್ಧಿಯ ಭರಾಟೆಯಲ್ಲಿ ಎಲ್ಲವೂ ನಾಶವಾಗಿದ್ದು, ಬಲಾಢ್ಯರ ಕೈವಶವಾಗಿವೆ ಎಂದು ನುಡಿದರು.

ಬೆಂಗಳೂರಿನ ಬೆಳ್ಳಂದೂರು ಕೆರೆಗೆ 40 ಜಾತಿಯ 10 ಸಾವಿರಕ್ಕೂ ಅಧಿಕ ಪಕ್ಷಿಗಳು ಸಂತಾನೋತ್ಪತ್ತಿಗಾಗಿ ವಲಸೆ ಬರುತ್ತಿದ್ದು, ನೋಡುಗರ ಕಣ್ಣಿಗೆ ಮನಮೋಹನವಾಗಿ ಕಾಣುತ್ತಿತ್ತು. ಈಗ ಸಂಪೂರ್ಣವಾಗಿ ಕೆರೆ ಮಲಿನಗೊಂಡಿದೆ. ಬೆಂಗಳೂರಿಗೆ ಹತ್ತಿರದಲ್ಲಿರುವ ನಂದಿ ಬೆಟ್ಟ ಅತ್ಯಂತ ಪ್ರಸಿದ್ಧವಾದ ಸ್ಥಳವಾಗಿದೆ. ಮಹಾತ್ಮಗಾಂಧಿ ಮೂರು ಬಾರಿ ಅಲ್ಲಿ ತಂಗಿದ್ದರು ಎಂದ ಅವರು, ಬೆಂಗಳೂರಿನ ಸುತ್ತಮುತ್ತಲಿನ ವಾತಾವರಣ ಅತ್ಯಂತ ಸುರಕ್ಷಿತವಾಗಿತ್ತು. ಆದರೆ, ಇಂದು ಎಲ್ಲವೂ ಮಲಿನವಾಗಿದೆ ಎಂದು ಹೇಳಿದರು.

ಇತ್ತೀಚಿನ ಆರ್ಥಿಕ ಸಮೀಕ್ಷೆಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಎಷ್ಟು ಜನರು ವೋಟಾರ್ ವಾಹನ ಬಳಕೆ ಮಾಡುತ್ತಿದ್ದಾರೆ, ಎಷ್ಟು ಟಿವಿಗಳನ್ನು ಹೊಂದಿದ್ದಾರೆ, ಎಷ್ಟು ಪ್ರಮಾಣದಲ್ಲಿ ಮೊಬೈಲ್ ಫೋನ್ ಬಳಕೆ ಮಾಡುತ್ತಾರೆ ಎಂಬ ಅವೈಜ್ಞಾನಿಕ ವರದಿಗಳನ್ನು ತಯಾರಿಸುತ್ತಿರುವುದು ದುರದೃಷ್ಟಕರ. ಜನರ ನಿಜವಾದ ಆರ್ಥಿಕ ಸ್ಥಿತಿ ಹಾಗೂ ಅದಕ್ಕೆ ಬೇಕಾದ ಯಾವುದೇ ಪರಿಹಾರ ಮಾರ್ಗಗಳನ್ನು ಕಂಡುಕೊಳ್ಳುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಮನುಷ್ಯರಲ್ಲಿ ನಂಬಿಕೆ ಅತಿದೊಡ್ಡ ಆತ್ಮವಿಶ್ವಾಸವನ್ನು ತುಂಬುತ್ತದೆ. ಸಣ್ಣ ಘಟನೆ ಮನುಷ್ಯರ ನಡವಳಿಕೆ ಬದಲಾಯಿಸುತ್ತದೆ ಎಂದ ಅವರು, ನಾನು ಭಾರತೀಯ ಅರಣ್ಯ ಕಾಲೇಜಿನಲ್ಲಿ ಅಭ್ಯಾಸ ಮಾಡಲು ಆಯ್ಕೆಯಾದ ಸಂದರ್ಭದಲ್ಲಿ ಟೈಲರ್ ತೋರಿಸಿದ ಪ್ರೀತಿ ಹಾಗೂ ನೆರೆಮನೆಯವರು ತೋರಿಸಿದ ವಿಶ್ವಾಸ ನನ್ನ ಮೇಲೆ ಅಪಾರವಾದ ಪರಿಣಾಮ ಬೀರಿತು ಎಂದು ಯಲ್ಲಪ್ಪರೆಡ್ಡಿ ನೆನಪು ಮೆಲುಕು ಹಾಕಿದರು.

ನಾನು ಎಂದೂ ಮುಖ್ಯಮಂತ್ರಿಯ ಹತ್ತಿರ ಮನೆ ಬೇಕು ಅಥವಾ ಮತ್ಯಾವುದೇ ಸೌಲಭ್ಯ ಬೇಕು ಎಂದು ಕೇಳಿದವನಲ್ಲ. ನನ್ನ ಪತ್ನಿಯೂ ಎಂದೂ ನನ್ನ ಹತ್ತಿರ ನನಗೆ ಇಂತಹುದೇ ಬೇಕೆಂದು ಬೇಡಿಕೆಯಿಟ್ಟವಳಲ್ಲ. ತಿಂಗಳ ಪೂರ್ತಿ ದುಡಿದು ಬರುವ ಸಂಬಳ ಹೆಂಡತಿ ಕೈಗೆ ಕೊಡುತ್ತಿದ್ದೆ. ನನ್ನ ಖರ್ಚಿಗೂ ಅವರೇ ಕೊಡುತ್ತಿದ್ದರು. ನಮಗೆ ಇರುವುದರಲ್ಲಿಯೇ ಸುಖವಿದೆ. ಹೆಚ್ಚಿಗೆ ಆಸೆಪಡುವ ಅಗತ್ಯವಿಲ್ಲ
-ಅ.ನ.ಯಲ್ಲಪ್ಪರೆಡ್ಡಿ, ಪರಿಸರವಾದಿಗಳು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News