ಜೂ.4 ರಿಂದ ಮೆಟ್ರೋ ಸಿಬ್ಬಂದಿ ಮುಷ್ಕರ

Update: 2018-05-19 16:07 GMT

ಬೆಂಗಳೂರು, ಮೇ 19: ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಜೂ.4 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಬೆಂಗಳೂರು ಮೆಟ್ರೋ ರೈಲು ನಿಗಮದ(ಬಿಎಂಆರ್‌ಸಿಎಲ್) ನೌಕರರ ಸಂಘದ ನಿರ್ಧಾರ ಮಾಡಿದೆ.

ಇತ್ತೀಚಿಗೆ ಹೈಕೋರ್ಟ್ ಆದೇಶದ ನಂತರವೂ ಬೇಡಿಕೆಗಳು ಈಡೇರಿಸಲು ಬೆಂಗಳೂರು ಮೆಟ್ರೋ ರೈಲು ಕಾರ್ಪೋರೇಷನ್ ಲಿಮಿಟೆಡ್(ಬಿಎಂಆರ್‌ಸಿಎಲ್) ಸರಿಯಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಮುಷ್ಕರ ನಡೆಸಲು ಸಿಬ್ಬಂದಿ ನಿರ್ಧಾರ ಮಾಡಲಾಗಿದೆ.

ವೇತನ ಪರಿಷ್ಕರಣೆ, ಖಾಯಂಮಾತಿ, ಭಾಷಾವಾರು ನೌಕರರ ನಡುವಿನ ತಾರತಮ್ಯ ತಡೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿದ್ದರು. ಆದರೆ, ನಿಗಮ ಮಂಡಳಿ ಬೇಡಿಕೆ ಈಡೇರಿಸಲು ಯಾವುದೇ ನಿರ್ದಿಷ್ಟವಾದ ಕ್ರಮ ಕೈಗೊಂಡಿಲ್ಲ. ಆದುದರಿಂದಾಗಿ, ಈಗ ಮತ್ತೊಂದು ಬಾರಿ ಕರೆ ನೀಡಲಾಗಿದೆ.

ನೌಕರರ ಸಂಘವು ಬೇಡಿಕೆ ಈಡೇರಿಕೆಗಾಗಿ ಮಾ.22 ರಂದು ಮುಷ್ಕರ ನಡೆಸಲಾಗುತ್ತದೆ ಎಂದು ಸಂಸ್ಥೆಗೆ ನೋಟಿಸ್ ನೀಡಲಾಗಿತ್ತು. ಅದರ ಬೆನ್ನಲ್ಲೆ ಬಿಎಂಆರ್‌ಸಿಎಲ್ ಮುಷ್ಕರ ನಡೆಸಿದರೆ ಎಸ್ಮಾ ಜಾರಿ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿತ್ತು. ಆದರೆ, ಸಂಘವು ಹೈಕೋರ್ಟ್ ಮೆಟ್ಟಿಲೇರಿ ಎಸ್ಮಾಗೆ ತಡೆಯಾಜ್ಞೆ ನೀಡುವಂತೆ ಕೋರಲಾಗಿತ್ತು. ಹೈಕೋರ್ಟ್ ಸಂಘದ ಪದಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಸೂಚನೆ ನೀಡಿತ್ತು. ಸಂಘವು ಮಾತುಕತೆಗೆ ಒಪ್ಪಿಗೆ ಸೂಚಿಸಿದ್ದರಿಂದ ಸಂಘವು ಮುಷ್ಕರವನ್ನು ಮುಂದೂಡಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News