ಇಳಕಲ್‌ನ ಮಹಾಂತ ಸ್ವಾಮೀಜಿ ನಿಧನ

Update: 2018-05-19 16:10 GMT

ಬೆಳಗಾವಿ, ಮೇ 19: ವಯೋ ಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಇಳಕಲ್ಚಿತ್ತರಗಿಯ ವಿಜಯಮಹಾಂತೇಶ್ವರ ಸಂಸ್ಥಾನ ಮಠದ 19ನೆ ಪೀಠಾಧ್ಯಕ್ಷರಾಗಿದ್ದ ಡಾ.ಮಹಾಂತೇಶ್ವರ ಶಿವಯೋಗಿಗಳು (89) ಬೆಳಗಾವಿಯ ಕೆಎಲ್ಇ ಆಸ್ಪತ್ರೆಯಲ್ಲಿ ಶನಿವಾರ ಬೆಳಗ್ಗೆ ನಿಧನ ಹೊಂದಿದ್ದಾರೆ.

ವ್ಯಸನಮುಕ್ತ ಸಮಾಜ ನಿರ್ಮಾಣದ ಹರಿಕಾರರು ಎಂದೇ ಕರೆಸಿಕೊಳ್ಳುತ್ತಿದ್ದ ಅವರು, ಪ್ರತಿಗ್ರಾಮ, ನಗರಗಳಲ್ಲಿ ಪಾದಯಾತ್ರೆ ನಡೆಸಿ, ಜನರ ವ್ಯಸನಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು ಚಟಗಳನ್ನು ಬಿಡುವಂತೆ ಬೋಧನೆ ಮಾಡಿದ್ದರು. ಉತ್ತರ ಕರ್ನಾಟಕ ಭಾಗದಲ್ಲಿ ದೊಡ್ಡ ಕ್ರಾಂತಿಯನ್ನೇ ಅವರು ಮಾಡಿದ್ದರು.

ಸಾಮಾಜಿಕ ಸೇವೆಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಕಳೆದ ವರ್ಷ ರಾಜ್ಯ ಸರಕಾರ ಶ್ರೀಗಳ ಜನ್ಮ ದಿನವಾಗಿರುವ ಅ.1ನ್ನು ವ್ಯಸನಮುಕ್ಯ ದಿನಾಚರಣೆಯನ್ನಾಗಿ ಘೋಷಣೆ ಮಾಡಿತ್ತು. ಇವರು ಬಸವಶ್ರೀ ಪ್ರಶಸ್ತಿ, ರಾಜ್ಯೋತ್ಸವ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಸಂತಾಪ: ಇಳಕಲ್ ಜಯ ಮಹಾಂತೇಶ್ವರ ಸ್ವಾಮೀಜಿಗಳ ನಿಧನಕ್ಕೆ ಬೆಳಗಾವಿ ನಾಗನೂರು ರುದ್ರಾಕ್ಷಿಮಠದ ಡಾ.ಸಿದ್ಧರಾಮ ಸ್ವಾಮಿ ಸಂತಾಪ ವ್ಯಕ್ತಪಡಿಸಿ, ಮಹಾಂತೇಶ್ವರ ಸ್ವಾಮೀಜಿಗಳ ನಿಧನದಿಂದ ನಾಡು-ನುಡಿಗೆ ತುಂಬಲಾಗದ ನಷ್ಟವಾಗಿದೆ. ಕಳೆದ ಐವತ್ತು ವರ್ಷಗಳಿಂದ ಬಸವಾದಿ ಶರಣರ ತತ್ವ ಮತ್ತು ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಬಸವಾಯತರಾಗಿದ್ದರು ಎಂದು ನೆನೆದರು.

ಅನಾರೋಗ್ಯದಿಂದಾಗಿ ಬೆಳಗಾವಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಇಳಕಲ್‌ನ ವಿಜಯಮಹಾಂತೇಶ್ವರ ಮಠದ ಡಾ. ಮಹಾಂತ ಲಿಂಗೈಕ್ಯರಾಗಿರುವುದು ಧಾರ್ಮಿಕ ಕ್ಷೇತ್ರಕ್ಕೆ ತುಂಬಲಾರದ ನಷ್ಟವುಂಟಾಗಿದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News