ದೌರ್ಜನ್ಯ-ದಬ್ಬಾಳಿಕೆ ವಿರುದ್ಧ ಜಾಗೃತಿ ಮೂಡಿಸಲು ಸೈಕಲ್ ಯಾತ್ರೆ

Update: 2018-05-19 16:21 GMT

ಬೆಂಗಳೂರು, ಮೇ 19: ಮಕ್ಕಳ ಮೇಲಿನ ದೌರ್ಜನ್ಯ ಮತ್ತು ಲೈಂಗಿಕ ಶೋಷಣೆ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ನಗರದ ಮಹರ್ಷಿ ಸಂಕೇತ್ ಎಂಬ ಬಾಲಕ ಮೇ 21 ರಿಂದ ಸೈಕಲ್ ಯಾತ್ರೆ ಆರಂಭ ಮಾಡಲಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ಕಳನ್ನು ಬೆದರಿಸುವುದರಿಂದ ಉಂಟಾಗುವ ಪರಿಣಾಮದ ಬಗ್ಗೆ ಅರಿತುಕೊಂಡು ಮಕ್ಕಳು ಏಕಾಂಗಿಯಾಗಿ ತಮ್ಮ ದುಗುಡ ಅಸಹಾಯಕತೆಯನ್ನು ನಿಶ್ಯಬ್ದದಲ್ಲಿ ಕಳೆಯುತ್ತಾರೆ. ಹೀಗಾಗಿ, ಅವರಿಗೆ ಸರಿಯಾದ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಹೇಳಿದರು.

ಖ್ಯಾತ ಕಲಾವಿದರು, ಸಾಮಾಜಿಕ ಕಾಳಿಜಿ ಹೊಂದಿರುವವರು ಸಾಕಷ್ಟು ಪ್ರಮಾಣದಲ್ಲಿ ಸೈಕಲ್ ಯಾತ್ರೆಗೆ ಬೆಂಬಲ ನೀಡುತ್ತಿದ್ದಾರೆ. ಈ ಯಾತ್ರೆಯು ಬೆಂಗಳೂರಿನಿಂದ ಮುಂಬೈವರೆಗೂ ಮಾಡಲಾಗುತ್ತಿದೆ ಎಂದ ಅವರು, ಮೂರನೇ ವಯಸ್ಸಿನಿಂದ ಪರಿಸರದ ನಡುವೆ ಬೆಳೆದಿದ್ದೇನೆ. ಹೀಗಾಗಿ, ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳನ್ನು ಕಣ್ಣಾರೆ ಕಂಡಿದ್ದೇನೆ ಎಂದು ತಿಳಿಸಿದರು.

ಮೇ 21 ರಿಂದ ಆರಂಭವಾಗಿ ಜೂ.1 ರಂದು ಮುಂಬೈನಲ್ಲಿ ಅಂತ್ಯಗೊಳ್ಳಲಿದೆ. ಈ ಸೈಕಲ್ ಯಾತ್ರೆ ಸರಾಸರಿ 1 ಸಾವಿರ ಕಿ.ಮೀ.ಗಳಷ್ಟು ದೂರ ಸಂಚಾರ ಮಾಡಲಿದೆ. ಈ ವೇಳೆ ಮಕ್ಕಳನ್ನು ಬೆದರಿಸುವುದು, ಲೈಂಗಿಕ ದೌರ್ಜನ್ಯ ನಡೆಸುವುದರ ವಿರುದ್ಧ ಪ್ರಚಾರ ಮಾಡಲಾಗುತ್ತದೆ. ನಾನು ನನ್ನ ಸ್ವಂತ ಸೈಕಲ್‌ನಲ್ಲಿಯೇ ಪ್ರಚಾರ ಮಾಡಲಿದ್ದೇನೆ. ಇದು ಆರೋಗ್ಯಕರ ಹಾಗೂ ಜಾಗೃತಿಯ ಗುರುತಾಗಿದೆ ಎಂದರು.

ಸೈಕಲ್ ಯಾತ್ರೆಯು ತುಮಕೂರು, ಶಿರಾ, ಚಿತ್ರದುರ್ಗ, ದಾವಣಗೆರೆ, ಹಾವೇರಿ, ಧಾರವಾಡ, ಬೆಳಗಾವಿ, ಕೊಲ್ಲಾಪುರ, ಸತಾರ, ಪುಣೆ, ಲೋನಾವಾಲಾ ಮೂಲಕ ಮುಂಬೈ ಸೇರಲಿದೆ. ದಾರಿಯ ಮಧ್ಯದಲ್ಲಿ ಸುಕಾಂತ್ ಪನಿಗಾ ಅವರು ತಮ್ಮ ಕಾರವಾನ್‌ನಲ್ಲಿ ಹಾಗೂ ವಿವಿಧ ಸ್ಥಳಗಳಲ್ಲಿ ಸಾಮಾಜಿಕ ಮುಖಂಡರಾದ ರಾಜಶ್ರೀ, ದಾಲ್ಮೆ, ವಿಜಯ್, ಮಯೂರಿ, ಅವಿನಾಶ್ ಭಾಲೆ ಸೇರಿದಂತೆ ಹಲವರು ಸ್ವಾಗತಿಸಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News